ಇಂದಿನಿಂದ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್: ಸೈನಾ, ಸಿಂಧುಗೆ ಕಠಿಣ ಡ್ರಾ
ಬರ್ಮಿಂಗ್ಹ್ಯಾಮ್ (ಇಂಗ್ಲೆಂಡ್): ಭಾರತದ ಅಗ್ರಮಾನ್ಯ ಶಟ್ಲರ್ಗಳಾದ ಸೈನಾ ನೆಹವಾಲ್ ಮತ್ತು ಪಿ.ವಿ. ಸಿಂಧು ಅವರು ಮಂಗಳವಾರದಿಂದ ಆರಂಭವಾಗಲಿರುವ ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಕಠಿಣ ಡ್ರಾ ಪಡೆದಿದ್ದಾರೆ.
ಒಟ್ಟು 4 ಲಕ್ಷ ಡಾಲರ್ ಬಹುಮಾನ ಮೊತ್ತದ ಈ ಟೂರ್ನಿಯಲ್ಲಿ ವಿಶ್ವದ 7ನೇ ಶ್ರೇಯಾಂಕಿತೆ ಸೈನಾ ನೆಹವಾಲ್ ಮಾತ್ರ ಶ್ರೇಯಾಂಕ ಹೊಂದಿರುವ ಭಾರತೀಯ ಆಟಗಾರ್ತಿಯಾಗಿದ್ದಾರೆ. ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಅವರು 7ನೇ ಶ್ರೇಯಾಂಕದ ಗೌರವ ಪಡೆದಿದ್ದಾರೆ.
ಇಲ್ಲಿನ ರಾಷ್ಟ್ರೀಯ ಒಳಾಂಗಣ ಏರೆನಾದಲ್ಲಿ ನಡೆಯಲಿರುವ ಈ ಚಾಂಪಿಯನ್ಶಿಪ್ನ ಮೊದಲ ಸುತ್ತಿನ ಸಿಂಗಲ್ಸ್ ಪಂದ್ಯದಲ್ಲಿ ಸ್ಕಾಟ್ಲೆಂಡ್ನ ಕರ್ಸ್ಟಿ ಗಿಲ್ಮೋರ್ ಅವರನ್ನು ಎದುರಿಸುವ ಮೂಲಕ ಸೈನಾ ತಮ್ಮ ಅಭಿಯಾನ ಆರಂಭಿಸಲಿದ್ದಾರೆ. ವಿಶ್ವದ 20ನೇ ಶ್ರೇಯಾಂಕಿತ ಆಟಗಾರ್ತಿ ಕರ್ಸ್ಟಿ ವಿರುದ್ಧ ಸೈನಾ ಗೆಲವು ದಾಖಲಿಸಬಹುದಾದರೂ, ಎರಡನೇ ಸುತ್ತಿನಲ್ಲಿ ಅವರು ಜರ್ಮನಿಯ ಜೂಲಿಯಾನೆ ಶೆಂಕ್ರ ಪ್ರಬಲ ಸವಾಲನ್ನು ಹತ್ತಿಕ್ಕುವುದು ಸುಲಭವಲ್ಲ. ಆದರೆ, ಹಿಂದಿನ ಸಾಧನೆ ಗಮನಿಸಿದರೆ, ಭಾರತೀಯ ಆಟಗಾರ್ತಿಯೇ 8-4ರ ಅಂತರದಲ್ಲಿ ಗೆಲವಿನ ದಾಖಲೆ ಹೊಂದಿದ್ದು ತಮ್ಮ ಪ್ರಭುತ್ವ ಸ್ಥಾಪಿಸಿರುವುದು ಆಕೆಗೆ ಸ್ಫೂರ್ತಿಯಾಗಿದೆ. ಶೆಂಕ್ ಕಳೆದಬಾರಿ, ಅಂದರೆ 2013ರ ಜೂನ್ನಲ್ಲಿ ನಡೆದ ಇಂಡೋನೇಶಿಯನ್ ಓಪನ್ನಲ್ಲಿ ಸೈನಾ ವಿರುದ್ಧ ವಿಜಯ ಸಾಧಿಸಿದ್ದರು.
ಈ ಮಧ್ಯೆ ವಿಶ್ವ ಚಾಂಪಿಯನ್ಶಿಪ್ ಕಂಚಿನ ಪದಕ ವಿಜೇತೆ ಪಿ.ವಿ. ಸಿಂಧು ಕೂಡ 104ನೇ ಆವೃತ್ತಿಯ ಈ ಪಂದ್ಯಾವಳಿಯ ಮೊದಲ ಸುತ್ತಿನ ಪೈಪೋಟಿಯಲ್ಲಿ ಕಠಿಣ ಸವಾಲು ಮೆಟ್ಟಿ ನಿಲ್ಲಬೇಕಾಗಿದೆ. ವಿಶ್ವದ 9ನೇ ಶ್ರೇಯಾಂಕಿತೆ ಸಿಂಧು ಅವರಿಗೆ ವಿಶ್ವದ 33ನೇ ಶ್ರೇಯಾಕಿತೆ ಸನ್ ಯೂ ಅವರ ಸವಾಲು ಎದುರಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

