ಹಾಕಿ: ಉತ್ತರಾಖಂಡ, ಮಣಿಪುರ ಜಯಭೇರಿ
ಮೈಸೂರು: ಮಮತಾ ಭಟ್ ಮತ್ತು ಪೂಜಾ ಭಟ್ ಅವರು ಬಾರಿಸಿದ ತಲಾ ಐದು ಗೋಲುಗಳ ನೆರವಿನಿಂದಾಗಿ ಉತ್ತರಾಖಂಡ ತಂಡವು, ತ್ರಿಪುರ ತಂಡವನ್ನು 18-0 ಅಂತರದಿಂದ ಮಣಿಸಿದೆ.
ಚಾಮುಂಡಿ ವಿಹಾರ ಕ್ರೀಡಾಂಗಣದ ಹಾಕಿ ಟರ್ಫ್ನಲ್ಲಿ ಶುಕ್ರವಾರ ನಡೆದ ಕಿರಿಯ ಮಹಿಳೆಯರ 4ನೇ ರಾಷ್ಟ್ರೀಯ ಹಾಕಿ ಪಂದ್ಯಾವಳಿಯ ಬಿ ವಿಭಾಗದ ಪಂದ್ಯದಲ್ಲಿ ಮುಖಾಮುಖಿಯಾದ ತ್ರಿಪುರ ತಂಡವನ್ನು ಮನಬಂದಂತೆ ದಂಡಿಸಿದ ಉತ್ತರಾಖಂಡ ತಂಡವು ಒಮ್ಮೆಯೂ ತ್ರಿಪುರಾಕ್ಕೆ ಗೋಲ್ ಬಾರಿಸುವ ಅವಕಾಶ ನೀಡಲಿಲ್ಲ. ಪಂದ್ಯದ 3ನೇ ನಿಮಿಷದಲ್ಲಿ ಮಮತಾ ಭಟ್ ಚಂಡನ್ನು ಗೋಲ್ನ ಮನೆಗೆ ತಳ್ಳುವ ಮೂಲಕ ಉತ್ತರಾಖಂಡದ ಖಾತೆ ತೆರೆದರು. ತಂಡದ ಪರ ಮಮತಾ ಭಟ್, ಪೂಜಾ ಭಟ್ ತಲಾ ಐದು ಗೋಲು ಬಾರಿಸಿದರೆ, ಸುರಭಿ ತಿವಾರಿ ಮತ್ತು ನಾಯಕಿ ಅನಿತ ಮಲೇತ ತಲಾ ನಾಲ್ಕು ಗೋಲು ಬಾರಿಸಿದರು. ಒಂದು ಕಡೆ ತ್ರಿಪುರ ತಂಡದ ಗೋಲ್ ಕೀಪರ್ ನನ್ಸಿ ಅಗರವಾಲ್ರನ್ನು ಉತ್ತರಾಖಂಡದ ಆಟಗಾರರು ತೀವ್ರವಾಗಿ ಕಾಡಿದರೆ, ಅತ್ತ ಉತ್ತರಾಖಂಡದ ಗೋಲ್ ಕೀಪರ್ ಭಾವನ ಬಿಷ್ಟ್ ಸಂಪೂರ್ಣ ವಿಶ್ರಾಂತಿಯೊಂದಿಗೆ ಗೋಲ್ಗಳ ಮಳೆ ಸುರಿಸುತ್ತಿದ್ದ ಸಹ ಆಟಗಾರರನ್ನು ಉತ್ತೇಜಿಸುತ್ತಿದ್ದರು.
ತ್ರಿಪುರ ಆಟಗಾರರು ಒಮ್ಮೆಯೂ ಚಂಡನ್ನು ಗೋಲ್ ಮನೆಯ ಬಳಿಗೆ ತಳ್ಳಲು ಸಾಧ್ಯವಾಗದಂತೆ ನೋಡಿಕೊಂಡ ಉತ್ತರಾಖಂಡನ ಆಟಗಾರರು ತಮ್ಮ ಸಂಘಟನಾತ್ಮಕ ಹೋರಾಟದ ಫಲವಾಗಿ ಪಂದ್ಯದ ಮೊದಲರ್ಧದಲ್ಲಿಯೇ 10 ಗೋಲ್ ಬಾರಿಸಿದರು. ನಂತರ ಉಳಿದಾರ್ಧದಲ್ಲಿ 8 ಗೋಲುಗಳನ್ನು ತಮ್ಮ ಖಾತೆಗೆ ಸೇರಿಸಿಕೊಂಡರು. ಇದಕ್ಕೂ ಮುನ್ನ ನಡೆದ ಮತ್ತೊಂದು ಪಂದ್ಯದಲ್ಲಿ ಮಣಿಪುರ ತಂಡವು, ವಿದರ್ಭ ತಂಡವನ್ನು 6-0 ಅಂತರದಿಂದ ಮಣಿಸಿತು. ಮಣಿಪುರ ತಂಡದ ಸೋನಿಯಾ ದೇವಿ 3 ಗೋಲ್, ವಿದ್ಯಾರಾಣಿ ದೇವಿ 2 ಗೋಲ್ ಮತ್ತು ನಾಯಕಿ ಗೀತಾರಾಣಿ ದೇವಿ ಒಂದು ಗೋಲ್ ಬಾರಿಸಿದರು. ಒಟ್ಟಾರೆ ಮೂರು ದಿನಗಳಿಂದ ನಡೆದ ಈ ಲೀಗ್ ಹಂತದ ಪಂದ್ಯಗಳಲ್ಲಿ ತ್ರಿಪುರ ತಂಡ ಆಡಿದ ಮೂರು ಪಂದ್ಯಗಳಲ್ಲೂ ಜಯಗಳಿಸಿದಂತಾಗಿದೆ.
ವಿದರ್ಭ ವಿರುದ್ಧ ಮಣಿಪುರಗೆ ಜಯ (6-0)
ಮಣಿಪುರ ಗೋಲ್ ಸ್ಕೋರ್
ಸೋನಿಯಾ ಸಿಂಗ್ 17, 49, 60ನಿ.
ವಿದ್ಯಾರಾಣಿ ದೇವಿ 39, 47ನಿ.
ಗೀತಾರಾಣಿ ದೇವಿ 22ನಿ.
ತ್ರಿಪುರ ವಿರುದ್ಧ ಉತ್ತರಾಖಂಡಕ್ಕೆ ಜಯ (18-0)
ಉತ್ತರಾಖಂಡ ಗೋಲ್ ಸ್ಕೋರ್
ಮಮತಾ ಭಟ್ 3, 13, 22, 49, 65ನಿ.
ಸುರಭಿ ತಿವಾರಿ 5, 10, 33, 36ನಿ.
ಪೂಜಾ ಭಟ್ 9, 21, 45, 64, 68ನಿ.
ಅನಿತ ಮಲೇತ 15, 26, 62, 70ನಿ.
-ಡಿ.ಎನ್. ಮಹೇಂದ್ರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

