ಫೈನಲ್ ಹಾದಿಯಲ್ಲಿ ಮಣಿಪುರ- ಒಡಿಶಾ
ಮೈಸೂರು: ಕಿರಿಯ ಮಹಿಳೆಯರ 4ನೇ ರಾಷ್ಟ್ರೀಯ ಹಾಕಿ ಪಂದ್ಯಾವಳಿಯ ಬಿ ವಿಭಾಗದ ಸೆಮಿಫೈನಲ್ ಪಂದ್ಯಗಳು ಬುಧವಾರ ನಡೆಯಲಿದ್ದು, ಮಣಿಪುರ ಮತ್ತು ಒಡಿಶಾ ತಂಡಗಳು ಫೈನಲ್ ಪ್ರವೇಶದ ನಿರೀಕ್ಷೆಯಲ್ಲಿವೆ.
ಸೆಮಿಫೈನಲ್ ಪ್ರವೇಶಿಸಿರುವ ಮಣಿಪುರ ಮತ್ತು ಛತ್ತೀಸ್ಗಡ ತಂಡಗಳ ನಡುವಿನ ಪಂದ್ಯಾವಳಿ ಮಧ್ಯಾಹ್ನ 2ಕ್ಕೆ, ಕೇರಳ ಮತ್ತು ಒಡಿಶಾ ತಂಡದ ಪಂದ್ಯ ಸಂಜೆ 4ಕ್ಕೆ ನಡೆಯಲಿದೆ.
ಹಾಕಿ ಕರ್ನಾಟಕವು ಚಾಮುಂಡಿ ವಿಹಾರ ಕ್ರೀಡಾಂಗಣದ ಹಾಕಿ ಟರ್ಫ್ನಲ್ಲಿ ಆಯೋಜಿಸಿರುವ ಈ ಪಂದ್ಯಾವಳಿಯಲ್ಲಿ ಮಣಿಪುರ ತಂಡವು ತ್ರಿಪುರವನ್ನು 24-0, ಉತ್ತರಖಂಡ ತಂಡವನ್ನು 2-0, ವಿದರ್ಭ ತಂಡವನ್ನು 6-0 ಅಂತರದಿಂದ ಮಣಿಸಿ ಉಪಾಂತ್ಯಕ್ಕೆ ಪ್ರವೇಶಿಸಿದೆ. ಅಂತೆಯೆ ಛತ್ತೀಸ್ಗಡ ತಂಡ ಹಿಮಾಚಲಪ್ರದೇಶದ ವಿರುದ್ಧ ವಾಕ್ ಓವರ್ ಪಡೆದು, ಗೋವಾ ತಂಡವನ್ನು 13-0 ಅಂತರದಿಂದಲೂ, ತ್ರಿಪುರವನ್ನು 18-0 ಅಂತರದಿಂದಲೂ ಮಣಿಸಿ, ಅಂತಿಮ ನಾಲ್ಕರ ಘಟ್ಟಕೆ ತಲುಪಿದೆ. ಈ ಪಂದ್ಯದಲ್ಲಿ ಮಣಿಪುರವನ್ನು ಎದುರಿಸಲಿದೆ.
ಇನ್ನು ಕೇರಳ ತಂಡ ಛತ್ತೀಸ್ಗಡ ವಿರುದ್ಧ ಒಂದು ವಾಕ್ ಓವರ್, ಗುಜರಾಜ್ ವಿರುದ್ಧ 4-0 ಮತ್ತು ಪುದುಚೇರಿ ವಿರುದ್ಧ 9-0 ಅಂತರದಲ್ಲಿ ಗೆಲುವು ಸಾಧಿಸಿ ಸೆಮೀಸ್ಗೆ ಲಗ್ಗೆ ಹಾಕಿದೆ. ಮತ್ತೊಂದೆಡೆ ಸೆಮೀಸ್ ಹೊಸ್ತಿಲಲ್ಲಿದ್ದ ಅಸ್ಸಾಂ ತಂಡವನ್ನು ಸೋಮವಾರ ನಡೆದ ಪಂದ್ಯದಲ್ಲಿ 8-1 ಅಂತರದಲ್ಲಿ ಮಣಿಸಿದ ಒಡಿಶಾ, ಅಂಧ್ರಪ್ರದೇಶವನ್ನು 4-0, ಜಮ್ಮು ಮತ್ತು ಕಾಶ್ಮೀರ ತಂಡವನ್ನು 10-0 ಅಂತರದಿಂದ ಮಣಿಸಿ, ಸೆಮೀಫೈನಲ್ಗೆ ಪ್ರವೇಶಿಸಿದೆ. ಈ ಹಂತದಲ್ಲಿ ಒಡಿಶಾ ಕೇರಳ ತಂಡವನ್ನು ಮಣಿಸಲು ಸಿದ್ಧತೆ ನಡೆಸಿದೆ.
ಈ ಎರಡು ಸೆಮಿಫೈನಲ್ ಪಂದ್ಯದಲ್ಲಿ ಜಯಗಳಿಸಿದ ಎರಡು ತಂಡಗಳು ಫೈನಲ್ ಪ್ರವೇಶಿಸಲಿವೆ. ಕಳೆದ ನಾಲ್ಕೈದು ದಿನಗಳ ಪಂದ್ಯಗಳ ಫಲಿತಾಂಶ ಗಮನಿಸಿದರೆ ಮಣಿಪುರ ಮತ್ತು ಒಡಿಶಾ ತಂಡಗಳು ಬಲಿಷ್ಠ ತಂಡವಾಗಿ ಹೊರ ಹೊಮ್ಮಿದ್ದು, ಈ ಎರಡು ತಂಡಗಳು ಫೈನಲ್ ಪ್ರವೇಶಿಸುವ ಸಾಧ್ಯತೆ ಇದೆ.
ಇನ್ನು ಸೆಮಿಫೈನಲ್ನಲ್ಲಿ ಉತ್ತಮ ಪ್ರದರ್ಶನ ನೀಡಲು ಕಾತರಗೊಂಡಿರುವ ನಾಲ್ಕೂ ತಂಡಗಳ ಆಟಗಾರ್ತಿಯರೂ ಮಂಗಳವಾರ ಕಠಿಣ ಅಭ್ಯಾಸ ನಡೆಸಿದರು.
ರಾಜ್ಯ ತಂಡಕ್ಕೆ ಸಂಧ್ಯಾ ನಾಯಕಿ
ಕಿರಿಯ ಮಹಿಳೆಯರ 4ನೇ ರಾಷ್ಟ್ರೀಯ ಹಾಕಿ ಪಂದ್ಯಾವಳಿಯ ಎ ವಿಭಾಗದ ಬಿ ಗುಂಪಿನಲ್ಲಿ ಸ್ಥಾನ ಪಡೆದಿರುವ ಕರ್ನಾಟಕ ತಂಡವನ್ನು ಎಚ್.ಪಿ. ಸಂಧ್ಯಾ ಮುನ್ನಡೆಸಲಿದ್ದಾರೆ. ಮಾ.15 ರಿಂದ 23 ರವರೆಗೆ ಚಾಮುಂಡಿ ವಿಹಾರ ಕ್ರೀಡಾಂಗಣದ ಹಾಕಿ ಟರ್ಫ್ನಲ್ಲಿ ನಡೆಯುವ ಈ ಪಂದ್ಯಾವಳಿಯಲ್ಲಿ ಮಾ.18ಕ್ಕೆ ಮೊದಲ ಪಂದ್ಯವನ್ನು ಮಧ್ಯಪ್ರದೇಶ ತಂಡದ ವಿರುದ್ಧ, ದ್ವಿತೀಯ ಪಂದ್ಯವನ್ನು ಮಾ. 19 ರಂದು ಭೂಪಾಲ್ ತಂಡದ ವಿರುದ್ಧ ಮತ್ತು ಮಾ.20 ರಂದು ಮೂರನೆ ಪಂದ್ಯವನ್ನು ದೆಹಲಿ ತಂಡದ ವಿರುದ್ಧ ಆಡಲಿದೆ. ತಂಡದ ಎ.ಬಿ. ಧಮಯಂತಿ ಮತ್ತು ಎನ್.ಎನ್. ನಿಶಾ ಗೋಲ್ ಕೀಪರ್ ಆಗಿ, ಜೈ ಮನೋವ ಕೋಚ್ ಆಗಿ ಮತ್ತು ವ್ಯವಸ್ಥಾಪಕರಾಗಿ ಬಿ.ಎ. ಚೆಂಗಪ್ಪ ಕಾರ್ಯ ನಿರ್ವಹಿಸುವರು.
ತಂಡದ ವಿವರ: ಎ.ಬಿ. ಧಮಯಂತಿ (ಗೋಲ್ ಕೀಪರ್), ಸಿ.ಎಂ. ಭಾಗ್ಯಶ್ರೀ(ಉಪ ನಾಯಕಿ), ಡಿ.ಎಂ. ಲಿಪಿತ, ಎನ್.ಆರ್. ಸ್ವಪ್ನ, ಬಿ.ಎಂ. ಕೋಮಲ, ಎ.ಎಚ್. ಕಾವೇರಿಯಮ್ಮ, ಎ.ಆರ್. ತನುಶ್ರೀ, ಎನ್. ರಮ್ಯ, ಸಿ.ಜಿ. ಸುಷ್ಮ, ಎಚ್.ಪಿ. ಸಂಧ್ಯಾ(ನಾಯಕಿ), ಎಸ್.ಪಿ. ಭವ್ಯ, ಎಂ.ಬಿ. ಅನಿತಾ ಕುಮಾರಿ, ನಿಹ, ಪಿ.ಸಿ. ನಿಶಾ, ಎಚ್.ಬಿ. ರಾಘ್ವಿ, ಎನ್.ಎನ್. ನಿಶಾ(ಗೋಲ್ ಕೀಪರ್), ಎಂ.ಡಿ. ಪೂಜಾ, ರುಚಿತ.
-ಡಿ.ಎನ್. ಮಹೇಂದ್ರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

