ಎಂಟರ ಘಟ್ಟಕ್ಕೆ ಸೈನಾ, ಕಶ್ಯಪ್
ಬಾಸೆಲ್: ಭಾರತದ ಅಗ್ರ ಬ್ಯಾಡ್ಮಿಂಟನ್ ತಾರೆಗಳಾದ ಸೈನಾ ನೆಹ್ವಾಲ್ ಹಾಗೂ ಪಿ.ಕಶ್ಯಪ್ ಸ್ವಿಸ್ ಗ್ರ್ಯಾಂಡ್ ಪ್ರಿಕ್ಸ್ ಗೋಲ್ಡ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಕ್ವಾರ್ಟರ್ಫೈನಲ್ಗೆ ಪ್ರವೇಶಿಸಿದ್ದಾರೆ. ಶುಕ್ರವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಪ್ರಿಕ್ವಾರ್ಟರ್ಫೈನಲ್ ಪಂದ್ಯದಲ್ಲಿ 23 ವರ್ಷದ ಸೈನಾ ನೆಹ್ವಾಲ್ ತಮ್ಮ ಎದುರಾಳಿ ಫ್ರಾನ್ಸ್ನ ಸಶಿನಾ ವಿಗ್ನೇಸ್ ವಿರುದ್ಧ 21-7, 21-13 ಸೆಟ್ಗಳ ಅಂತರದಲ್ಲಿ ಸುಲಭ ಗೆಲವು ದಾಖಲಿಸಿದರು. ಕೇವಲ 34 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಸೈನಾ ಎದುರಾಳಿ ವಿರುದ್ಧ ಆಕ್ರಮಣಕಾರಿ ಆಟ ಪ್ರದರ್ಶಿಸಿದರು. ಸೈನಾ ದಾಳಿಗೆ ನಿರುತ್ತರವಾದ ಸಶಿನಾ ಮಣಿದರು.
ಆರಂಭದಿಂದಲೂ ಉತ್ತಮ ನಿಯಂತ್ರಣ ಕಂಡುಕೊಂಡ ಸೈನಾ ಯಾವುದೇ ಹಂತದಲ್ಲೂ ಎಡವಲಿಲ್ಲ. ಮೊದಲ ಸೆಟ್ನಲ್ಲಿ 21-7 ಅಂತರದಿಂದ ಸುಲಭ ಮುನ್ನಡೆ ಪಡೆದ ನೆಹ್ವಾಲ್, ಎರಡನೇ ಸೆಟ್ನಲ್ಲಿ 21-13 ಅಂತರದಿಂದ ಮೇಲುಗೈ ಸಾಧಿಸಿ ಗೆಲವು ತನ್ನದಾಗಿಸಿಕೊಂಡರು. ಈ ಮೊದಲು ಸೈನಾ 2011 ಹಾಗೂ 2013ರಲ್ಲಿ ನಡೆದ ಇದೇ ಪಂದ್ಯಾವಳಿಯಲ್ಲಿ ಸಶಿನಾ ವಿರುದ್ಧ ಗೆಲವು ದಾಖಲಿಸಿದ್ದರು.
ಸೈನಾ ನೆಹ್ವಾಲ್ ತಮ್ಮ ಮುಂದಿನ ಪಂದ್ಯದಲ್ಲಿ ಚೀನಾದ ಆಟಗಾರ್ತಿ ಯಿಹಾನ್ ವಿರುದ್ಧ ಕಾದಾಟ ನಡೆಸಲಿದ್ದಾರೆ. ಇದುವರೆಗೂ ಸೈನಾ 7 ಬಾರಿ ಯಿಹಾನ್ ವಿರುದ್ಧ ಕಾದಾಟ ನಡೆಸಿದ್ದು, ಕೇವಲ ಒಂದು ಬಾರಿ ಗೆಲವು ಸಾಧಿಸಿದ್ದಾರೆ. ಹಾಗಾಗಿ ಮುಂದಿನ ಪಂದ್ಯದಲ್ಲಿ ಸೈನಾ ಪ್ರದರ್ಶನದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.
ಗೆದ್ದ ಕಶ್ಯಪ್: ಇನ್ನು ಪುರುಷರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಭಾರತದ ಪಿ.ಕಶ್ಯಪ್ ಗೆಲವು ದಾಖಲಿಸಿದ್ದಾರೆ. ಮಲೇಷ್ಯಾದ ಬೆರಿನೊ ಜಿಹಾನ್ ಟೆಜ್ ವಾಂಗ್ ವಿರುದ್ಧದ ಪ್ರೀಕ್ವಾಟರ್ ಫೈನಲ್ ಪಂದ್ಯದಲ್ಲಿ ಕಶ್ಯಪ್ ಗೆಲವಿನ ಹಾದಿ ಸುಲಭವಾಗಿರಲಿಲ್ಲ.
ವಾಂಗ್ ಆಕರ್ಷಕ ಪ್ರದರ್ಶನ ನೀಡಿದರಾದರೂ ಕಶ್ಯಪ್ 21-23, 21-9, 21-14 ಸೆಟ್ಗಳ ಅಂತರದಲ್ಲಿ ಗೆಲವಿನ ದಡ ಸೇರುವಲ್ಲಿ ಯಶಸ್ವಿಯಾದರು. 57 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಉಭಯ ಆಟಗಾರರು ಉತ್ತಮ ಪ್ರದರ್ಶನ ನೀಡಿದರು. ಮೊದಲ ಸೆಟ್ನಲ್ಲಿ ವಾಂಗ್ 23-21 ಅಂತರದಲ್ಲಿ ಮುನ್ನಡೆ ಪಡೆದರು. ಆದರೆ ನಂತರ ತಿರುಗಿಬಿದ್ದ ಕಶ್ಯಪ್ ಎರಡನೇ ಸೆಟ್ನಲ್ಲಿ 21-9 ಹಾಗೂ ಮೂರನೇ ಸೆಟ್ನಲ್ಲಿ 21-13 ಅಂತರದ ಮೇಲುಗೈ ಸಾಧಿಸಿ ಗೆಲವು ದಾಖಲಿಸಿದರು.
ಕಶ್ಯಪ್ ತಮ್ಮ ಮುಂದಿನ ಪಂದ್ಯದಲ್ಲಿ ಚೈನೀಸ್ ತೈಪೆನ ತೈನ್ ಚೆನ್ ಚು ಅವರನ್ನು ಎದುರಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

