ಕ್ರೀಡೆ

ಪ್ರಶಸ್ತಿ ಸುತ್ತಿಗೆ ಕರ್ನಾಟಕ ಲಗ್ಗೆ

Published On :

ಕೋಲ್ಕತಾ: ಆರಂಭಿಕ ರಾಬಿನ್ ಉತ್ತಪ್ಪರ ಮತ್ತೊಂದು ಸ್ಫೋಟಕ ಶತಕ ಹಾಗೂ ವಿನಯಕುಮಾರ್ ಮತ್ತು ಅಭಿಮನ್ಯು ಮಿಥುನ್‌ರ ಮಿಂಚಿನ ದಾಳಿಯ ನೆರವಿನಿಂದ ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಜಾರ್ಖಂಡ್‌ಗೆ ಸೋಲುಣಿಸಿ ಫೈನಲ್ ತಲುಪಿದೆ.
ಇಲ್ಲಿನ ಜಾಧವಪುರ ಯುನಿವರ್ಸಿಟಿ ಸಂಕೀರ್ಣದಲ್ಲಿ ಶುಕ್ರವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕದ ಆಟಗಾರರು 21 ರನ್‌ಗಳಿಂದ ಜಾರ್ಖಂಡ್ ವಿರುದ್ಧ ಜಯಘೋಷ ಮೊಳಗಿಸಿದರು.
ಜಾರ್ಖಂಡ್ ತಂಡ ಟಾಸ್ ಗೆದ್ದು ಕರ್ನಾಟಕವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಈ ಅವಕಾಶವನ್ನು ಸದ್ಭಳಕೆ ಮಾಡಿಕೊಂಡ ಕರ್ನಾಟಕ ನಿಗದಿತ 50 ಓವರುಗಳಲ್ಲಿ 6 ವಿಕೆಟ್ ನಷ್ಟಕ್ಕೆ 323 ರನ್‌ಗಳ ಬೃಹತ್ ಮೊತ್ತ ಸಂಪಾದಿಸಿತು.
ಮತ್ತೆ ಬ್ಯಾಟಿಂಗ್‌ನಲ್ಲಿ ಸಿಡಿದ ರಾಬಿನ್ ಉತ್ತಪ್ಪ ಶತಕ ಬಾರಿಸಿ ಗಮನ ಸೆಳೆದರು. ಅವರು 135 ಎಸೆತಗಳಿಂದ 12 ಬೌಂಡರಿ ಮತ್ತು 4 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 133 ರನ್‌ಗಳಿಸಿದರು. ಉತ್ತಪ್ಪ ಸತತ ಎರಡನೇ ಹಾಗೂ ಒಟ್ಟಾರೆ 'ಎ' ದರ್ಜೆಯ ಪಂದ್ಯಾವಳಿಯಲ್ಲಿ 14ನೇ ಶತಕ ಬಾರಿಸಿದರು.  ಇವರಿಗೆ ಉತ್ತಮ ಬೆಂಬಲ ನೀಡಿದ ಮತ್ತೊಬ್ಬ ಆರಂಭಿಕ ಮಾಯಾಂಕ್ ಅಗರ್‌ವಾಲ್ ಸಹ (66ರನ್, 67 ಎಸೆತ, 9 ಬೌಂಡರಿ) ಉಪಯುಕ್ತ ಅರ್ಧಶತಕದ ಕಾಣಿಕೆ ನೀಡಿದರು. ಉತ್ತಪ್ಪ ಮತ್ತು ಮಾಯಾಂಕ್ ಮೊದಲ ವಿಕೆಟ್‌ಗೆ 23.1 ಓವರುಗಳಲ್ಲಿ 137 ರನ್ ಕಲೆಹಾಕಿ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟರು. ಇದರಿಂದ ಮಧ್ಯಮ ಹಂತದ ದಾಂಡಿಗರ ಮೇಲೆ ಒತ್ತಡ ಬೀಳಲಿಲ್ಲ. ನಂತರದಲ್ಲಿ ಬ್ಯಾಟಿಂಗ್‌ಗೆ ಆಗಮಿಸಿದವರ ಪೈಕಿ ಮೂರನೇ ಕ್ರಮಾಂಕದಲ್ಲಿ ಬಂದ ಕೆ.ಎಲ್. ರಾಹುಲ್ ಸಹ ಅರ್ಧಶತಕ ಗಳಿಸಿದರು. ಅವರು 72 ಎಸೆತಗಳಲ್ಲಿ 5 ಬೌಂಡರಿಗಳಿದ್ದ 67 ರನ್‌ಗಳಿಸಿದರು. ಉತ್ತಪ್ಪ ಮತ್ತು ರಾಹುಲ್ ಕೂಡ ಎರಡನೇ ವಿಕೆಟ್‌ಗೆ 128 ರನ್ ಸೇರಿಸಿ ತಂಡದ ಸ್ಥಿತಿಯನ್ನು ಮತ್ತಷ್ಟು ಗಟ್ಟಿಗೊಳಿಸಿದರು.
ಜಾರ್ಖಂಡ್ ತಂಡದ ಅನುಭವಿ ಬೌಲರ್ ರಾಹುತ್ ಶುಕ್ಲಾ 3 ವಿಕೆಟ್ ಉರುಳಿಸಿದರು. ಜಾರ್ಖಂಡ್ ಪಾಲಿಗೆ ಜಗ್ಗಿ ಶತಕ ವ್ಯರ್ಥ ಕಠಿಣ ಲಕ್ಷ್ಯದತ್ತ ಹೆಜ್ಜೆ ಹಾಕಿದ ಜಾರ್ಖಂಡ್ ಪಡೆ 9 ವಿಕೆಟ್ ನಷ್ಟಕ್ಕೆ 302 ರನ್‌ಗಳಿಸಲಷ್ಟೇ ಶಕ್ತವಾಯಿತು. ಆರಂಭಿಕ ಇಶಾಂಕ್ ಜಗ್ಗಿ (141ರನ್, 121 ಎಸೆತ, 16 ಬೌಂಡರಿ, 4 ಸಿಕ್ಸರ್) ಭರ್ಜರಿ ಶತಕ ದಾಖಲಿಸುವ ಮೂಲಕ ಜಾರ್ಖಂಡ್ ತಂಡದಲ್ಲಿ ಗೆಲವಿನ ಆಸೆ ಚಿಗುರಿಸಿದ್ದರು. ಆದರೆ, ಅವರು ಮೂರನೇ ವಿಕೆಟ್ ಆಗಿ ನಿರ್ಗಮಿಸಿದ ನಂತರ ಇತರೆ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದಾಗಿ ಜಾರ್ಖಂಡ್ ತಂಡ ಹೋರಾಡಿ ಗೌರವಯುತ ಸೋಲಿಗೆ ತೃಪ್ತಿಗೊಳ್ಳುವಂತಾಯಿತು.
ಕರ್ನಾಟಕದ ಪರ ಮತ್ತೆ ಅಪಾಯಕಾರಿ ಎಸೆತಗಳನ್ನು ಪ್ರಯೋಗಿಸಿದ ನಾಯಕ ವಿನಯಕುಮಾರ್ 4 ಹಾಗೂ ಅಭಿಮನ್ಯು ಮಿಥುನ್ 3 ವಿಕೆಟ್ ಕಬಳಿಸಿ ನಿರೀಕ್ಷಿತ ಗೆಲವು ತಮ್ಮದಾಗಿಸಿಕೊಂಡರು.   
ರಾಬಿನ್ ಉತ್ತಪ್ಪ ಪಂದ್ಯಶ್ರೇಷ್ಠ ಪುರಸ್ಕಾರ ಪಡೆದರು.

ಸ್ಕೋರ್ ವಿವರ
ಕರ್ನಾಟಕ 50 ಓವರುಗಳಲ್ಲಿ 6 ವಿಕೆಟ್‌ಗೆ 323

ರಾಬಿನ್ ಉತ್ತಪ್ಪ ಸಿ ದೇವಬ್ರತ್ ಬಿ ಜಸ್ಕರನ್ 133, ಮಾಯಾಂಕ್ ಅಗರ್‌ವಾಲ್ ರನೌಟ್ 66, ಕೆ.ಎಲ್. ರಾಹುಲ್ ಬಿ ಶುಕ್ಲಾ 67, ಕರುಣ್ ನಾಯರ್ ಸಿ ತಿವಾರಿ ಬಿ ಶುಕ್ಲಾ 26, ಮನೀಶ್ ಪಾಂಡೆ ಸಿ ಕೇಶವ್ ಬಿ ಕುಶಾಲ್ 4, ವಿನಯಕುಮಾರ್ ಸಿ ನದೀಂ ಬಿ ಶುಕ್ಲಾ 11, ಅಭಿಮನ್ಯು ಮಿಥುನ್ ಅಜೇಯ 2, ಅಮಿತ್ ವರ್ಮಾ ಅಜೇಯ 0. ಇತರೆ: (ಬೈ-1, ಲೆಗ್‌ಬೈ-5, ವೈ-6, ನೋಬಾಲ್-2) 14.
ವಿಕೆಟ್ ಪತನ: 1-137, 2-265, 3-296, 4-309, 5-320, 6-323.
ಬೌಲಿಂಗ್ ವಿವರ: ರಾಹುಲ್ ಶುಕ್ಲಾ 10-0-59-3, ಜಸ್ಕರಣ್ ಸಿಂಗ್ 10-1-70-1, ಮೋನುಕುಮಾರ್ 9-0-66-0, ಶಹಬಾಜ್ ನದೀಂ 12-0-57-0, ಕೇಶವ್ ಕುಮಾರ್ 4-0-32-0, ಕುಶಾಲ್ ಸಿಂಗ್ 5-0-33-1.
ಜಾರ್ಖಂಡ್ 50 ಓವರುಗಳಲ್ಲಿ 9 ವಿಕೆಟ್‌ಗೆ 302
ಇಶಾಂಕ್ ಜಗ್ಗಿ ಬಿ ಶರತ್ 141, ಇಶಾನ್ ಕಿಶನ್ ಸಿ ವಿನಯಕುಮಾರ್ ಬಿ ಖಾಜಿ 21, ವಿರಾಟ್ ಸಿಂಗ್ ಬಿ ವಿನಯಕುಮಾರ್ 20, ಸೌರಭ್ ತಿವಾರಿ ಸಿ ನಾಯರ್ ಬಿ ಮಿಥುನ್ 47, ಕುಮಾರ್ ದೇವಬ್ರತ್ ಸಿ ಉತ್ತಪ್ಪ ಬಿ ವಿನಯಕುಮಾರ್ 32, ಕುಶಾಲ್ ಸಿಂಗ್ ಎಲ್‌ಬಿ ಬಿ ವಿನಯಕುಮಾರ್ 6, ಶಹಬಾಜ್ ನದೀಂ ಸಿ ಅಂಡ್ ಬಿ ವಿನಯಕುಮಾರ್ 0, ಕೇಶವ್ ಕುಮಾರ್ ಬಿ ಮಿಥುನ್ 16, ರಾಹುಲ್ ಶುಕ್ಲಾ ಸಿ ನಾಯರ್ ಬಿ ಮಿಥುನ್ 2, ಜಸ್ಕರಣ್ ಸಿಂಗ್ ಅಜೇಯ 6, ಮೋನುಕುಮಾರ್ ಅಜೇಯ 0. ಇತರೆ: (ಬೈ-4, ಲೆಗ್‌ಬೈ-2, ವೈ-5) 11.
ವಿಕೆಟ್ ಪತನ: 1-72, 2-133, 3-220, 4-246, 5-260, 6-260, 7-285, 8-288, 9-302, 10-302.
ಬೌಲಿಂಗ್ ವಿವರ: ಆರ್. ವಿನಯಕುಮಾರ್ 12-0-75-4, ಎಚ್.ಎಸ್. ಶರತ್ 10-0-54-1, ಅಭಿಮನ್ಯು ಮಿಥುನ್ 10-0-52-3, ಅಬ್ರಾರ್ ಖಾಜಿ 10-0-57-1, ಅಮಿತ್ ವರ್ಮಾ 3-0-25-0, ಕರುಣ್ ನಾಯರ್ 5-0-33-0.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.