ಕ್ರೀಡೆ

ಕ್ವಾರ್ಟರ್‌ಗೆ ಸೆರೆನಾ, ಶರಪೋವಾ

ಕ್ವಾರ್ಟರ್‌ಗೆ ಸೆರೆನಾ, ಶರಪೋವಾ
Published On :

ಮಿಯಾಮಿ (ಅಮೆರಿಕ): ವಿಶ್ವದ ನಂಬರ್ ಒನ್ ಆಟಗಾರ್ತಿ ಅಮೆರಿಕದ ಸೆರೆನಾ ವಿಲಿಯಮ್ಸ್ ಹಾಗೂ ರಷ್ಯಾದ ಮಾರಿಯಾ ಶರಪೋವಾ ಇಲ್ಲಿ ನಡೆಯುತ್ತಿರುವ ಮಿಯಾಮಿ ಟೆನಿಸ್ ಟೂರ್ನಿಯಲ್ಲಿ ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್‌ಫೈನಲ್ ತಲುಪಿದ್ದಾರೆ.
ಹಾಲಿ ಚಾಂಪಿಯನ್ ಸೆರೆನಾ ವಿಲಿಯಮ್ಸ್, ಪ್ರಿಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಅರ್ಹತಾ ಸುತ್ತಿನಿಂದ ತಮ್ಮದೇ ದೇಶದ ಆಟಗಾರ್ತಿ ಕೊಕೊ ವಾಂಡೆವೇಘೆ ಅವರನ್ನು 6-3, 6-1 ನೇರ ಸೆಟ್‌ಗಳಿಂದ ಸೋಲಿಸಿದರು.
ಟೂರ್ನಿಯ ಅಗ್ರಶ್ರೇಯಾಂಕಿತ ಆಟಗಾರ್ತಿಯೂ ಆಗಿರುವ ಸೆರೆನಾ, ಎರಡೂ ಸೆಟ್‌ಗಳಲ್ಲಿ ಉತ್ತಮ ಹೋರಾಟ ನಡೆಸುವ ಮೂಲಕ ಕೇವಲ 78 ನಿಮಿಷಗಳ ಆಟದಲ್ಲಿಯೇ ಅಂತಿಮ ಗೆಲವು ದಾಖಲಿಸಿದರು.  ಪಂದ್ಯದಲ್ಲಿ ಎಂದಿನ ಆಕ್ರಮಣಕಾರಿ ಮನೋಭಾವವನ್ನೇ ತೋರಿದ ಸೆರೆನಾ, ಎದುರಾಳಿಗೆ ದೊರೆತ ಆರು ಬ್ರೇಕ್ ಪಾಯಿಂಟ್‌ಗಳಲ್ಲಿ ಒಂದನ್ನೂ ಗೆದ್ದುಕೊಳ್ಳಲು ಅವಕಾಶ ನೀಡದೆ ತಮ್ಮ ಪ್ರಭುತ್ವ ಸ್ಥಾಪಿಸಿದರು. ಈ ಗೆಲವಿನೊಂದಿಗೆ ಸೆರೆನಾ, ಒಟ್ಟಾರೆ 14 ಬಾರಿಯ ಮಿಯಾಮಿ ಟೂರ್ನಿಯ ಪ್ರವೇಶದಲ್ಲಿ 13ನೇ ಸಲ ಕ್ವಾರ್ಟರ್‌ಫೈನಲ್ ತಲುಪಿದ ಸಾಧನೆ ಮಾಡಿದರು.
ಎಂಟರಘಟ್ಟದ ಸೆಣಸಿನಲ್ಲಿ ಅಮೆರಿಕನ್ ಆಟಗಾರ್ತಿಗೆ, ಜರ್ಮನಿಯ ಆ್ಯಂಗೆಲಿಕ್ ಕೆರ್ಬರ್ ಸವಾಲು ಎದುರಾಗಲಿದೆ. ಐದನೇ ಶ್ರೇಯಾಂಕಿತೆ ಕೆರ್ಬರ್ ತಮ್ಮ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ರಷ್ಯಾದ ಎಕಟೆರಿನಾ ಮಕಾರೊವಾ ಅವರನ್ನು 6-4, 1-6, 6-3 ಸೆಟ್‌ಗಳಿಂದ ಸೋಲಿಸಿ ಈ ಹಂತ ತಲುಪಿದ್ದಾರೆ.  ರಷ್ಯಾದ ಮಾರಿಯಾ ಶರಪೋವಾ 3-6, 6-4, 6-1 ಸೆಟ್‌ಗಳಿಂದ ಬೆಲ್ಜಿಯಂನ ಕರ್ಸ್ಟನ್ ಫ್ಲಿಪ್‌ಕೆನ್ಸ್ ಅವರನ್ನು ಮಣಿಸಿದರು. ಎರಡು ಗಂಟೆ 4 ನಿಮಿಷಗಳ ಸುದೀರ್ಘ ಹೋರಾಟದಲ್ಲಿ ಶರಪೋವಾ, ಮೊದಲ ಸೆಟ್ ಸೋತು ಆತಂಕಕ್ಕೆ ಒಳಗಾಗಿದ್ದರು. ಆದರೆ, ನಂತರದ ಎರಡೂ ಸೆಟ್‌ಗಳಲ್ಲಿ ಅತ್ಯುತ್ತಮ ಆಟ ಸಂಘಟಿಸಿ ನಿರೀಕ್ಷೆಯಂತೆ ಗೆಲವು ತಮ್ಮದಾಗಿಸಿಕೊಂಡರು.
ಉಳಿದಂತೆ, ಕರೊಲಿಯಾ ವೋಜ್ನಿಯಾಕಿ ಮತ್ತು ಡಾಮಿನಿಕಾ ಸಿಬುಲ್ಕೊವಾ ಸಹ ಕ್ವಾರ್ಟರ್‌ಫೈನಲ್ ತಲುಪಿದ ಸಾಧನೆ ಮಾಡಿದ್ದಾರೆ.  ಡಾಮಿನಿಕಾ ಸಿಬುಲ್ಕೊವಾ ತಮ್ಮ ಪಂದ್ಯದಲ್ಲಿ ಅಮೆರಿಕದ ವೀನಸ್ ವಿಲಿಯಮ್ಸ್ ಅವರನ್ನು 6-1, 5-7, 6-3 ಸೆಟ್‌ಗಳಿಂದ ಪರಾಭವಗೊಳಿಸಿದರು.  
ಪುರುಷರ ವಿಭಾಗದಲ್ಲಿ ವಿಶ್ವದ ನಂಬರ್ ಆಟಗಾರ ಸ್ಪೇನಿನ ರಾಫೆಲ್ ನಡಾಲ್ ಮತ್ತು ಕೆನಡಾದ ಮಿಲೋಸ್ ರಾನಿಕ್ ಮತ್ತು ಸ್ಟಾನಿಸ್ಲಾಸ್ ವಾವ್ರಿಂಕ ಸಿಂಗಲ್ಸ್ ನಾಲ್ಕನೇ ಸುತ್ತು ತಲುಪಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.