ಗವಾಸ್ಕರ್ ಪ್ರಸ್ತಾಪವಾಗಿದ್ದು ಹೇಗೆ?
ಮುಂಬೈ: ಸ್ಪಾಟ್ ಫಿಕ್ಸಿಂಗ್ ಪ್ರಕರಣದ ತನಿಖೆ ಸುಲಭವಾಗಲು, ಎನ್. ಶ್ರೀನಿವಾಸನ್ ಅವರನ್ನು ಕೆಳಗಿಳಿಸಿ, ಐಪಿಎಲ್ 7ನೇ ಆವೃತ್ತಿ ಮುಕ್ತಾಯವಾಗುವವರೆಗೂ ಸುನಿಲ್ ಗವಾಸ್ಕರ್ ಅವರನ್ನು ಬಿಸಿಸಿಐ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಸುಪ್ರೀಂ ಕೋರ್ಟ್ ಮಧ್ಯಂತರ ತೀರ್ಪು ನೀಡಿರುವುದು ಸದ್ಯಕ್ಕೆ ಬಿಸಿಸಿಐನ ಅನಿಶ್ಚಿತತೆಗೆ ಅಂತ್ಯ ಹಾಡಿದಂತಾಗಿದೆ.
ಆದರೆ, ದೇಶದ ಅತ್ಯುನ್ನತ ನ್ಯಾಯಾಲಯವಾದ ಸುಪ್ರೀಂ ಕೋರ್ಟ್ನಲ್ಲಿ ಸುನಿಲ್ ಗವಾಸ್ಕರ್ ಹೆಸರು ಪ್ರಸ್ತಾಪವಾಗಿದ್ದು ಹೇಗೆ? ಇತರ ಕ್ರಿಕೆಟರ್ ಹೆಸರು ಏಕೆ ಪ್ರಸ್ತಾಪವಾಗಲಿಲ್ಲ ಎಂಬುದು ಎಲ್ಲರನ್ನೂ ಕಾಡಿದ ಪ್ರಮುಖ ಪ್ರಶ್ನೆಯಾಗಿದೆ.
ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದ್ದಾಗಲೇ ಸುನಿಲ್ ಗವಾಸ್ಕರ್ ಅವರ ಹೆಸರು ಪ್ರಸ್ತಾಪಾಗಿದ್ದು ಗಮನಾರ್ಹವಾದ ವಿಷಯವಾಗಿದೆ. ಬಿಹಾರ್ ಕ್ರಿಕೆಟ್ ಸಂಸ್ಥೆಯನ್ನು ಪ್ರತಿನಿಧಿಸಿರುವ ಹಿರಿಯ ವಕೀಲರಾದ ಹರೀಶ್ ಸಾಳ್ವೆ ಅವರು, ಮುದ್ಗಲ್ ತನಿಖಾ ಸಮಿತಿಯ ವರದಿಯಲ್ಲಿ ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಆರ್ಥಿಕ ವ್ಯವಹಾರದಲ್ಲಿ ಹಿತಾಸಕ್ತಿ ಹೊಂದಿದ್ದಾರೆ ಎಂದು ನಮೂದಿಸಲಾಗಿದೆ ಎಂದು ವಾದಿಸುತ್ತಿದ್ದರು. ಅಲ್ಲದೆ, ಮಹಾನ್ ಆಟಗಾರರಾದ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ಅನಿಲ್ ಕುಂಬ್ಳೆ ಹಾಗೂ ರಾಹುಲ್ ದ್ರಾವಿಡ್ ಅವರು ಸಮಿತಿ ಎದುರು ವಿಚಾರಣೆಗೆ ಹಾಜರಾಗುವಂತಹ ಪರಿಸ್ಥಿತಿ ಒದಗಿದ್ದನ್ನು ಒತ್ತಿ ಹೇಳಿದರು. ಆಗ ತಕ್ಷಣ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಪಟ್ನಾಯಕ್, 'ಸುನಿಲ್ ಗವಾಸ್ಕರ್ ಅವರನ್ನು ಏಕೆ ಬಿಡಲಾಯಿತು. ಗವಾಸ್ಕರ್ ಬಗ್ಗೆ ಏನು ಹೇಳುತ್ತೀರಿ? ಈಗ ಗವಾಸ್ಕರ್ ಏನು ಮಾಡುತ್ತಿದ್ದಾರೆ. ಅವರು ಸರಿಯಾಗಿದ್ದಾರೆಯೇ? ಸೂಕ್ತ ವ್ಯಕ್ತಿಯೇ?' ಎಂದರು.
ಇದಕ್ಕೆ ತಕ್ಷಣ ಉತ್ತರ ನೀಡಿದ ಸಾಳ್ವೆ, 'ಹೌದು, ಸ್ವಾಮಿ ಅವರು ಸೂಕ್ತ ವ್ಯಕ್ತಿಯಾಗಿದ್ದಾರೆ. ನನಗನಿಸಿದಂತೆ ಈಗ ಅವರು ಕಾಮೆಂಟೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನ್ಯಾಯಾಲಯ ಮಾಹಿತಿ ಕೇಳಿದರೆ, ನಾನು ಪತ್ತೆ ಮಾಡುತ್ತೇನೆ' ಎಂದರು. ಆಗ, ಕ್ರಿಕೆಟ್ ಆಡಿದ ಅನುಭವ ಹೊಂದಿರುವ ನ್ಯಾಯಮೂರ್ತಿ ಪಟ್ನಾಯಕ್ ಅವರು ಮುಗುಳು ನಗೆ ಬೀರುತ್ತಾ, ಸಾಳ್ವೆ ಹೇಳಿಕೆಯನ್ನು ನಮೂದಿಸಿಕೊಂಡರು. ನ್ಯಾಯಾಧೀಶರನ್ನು ಪ್ರಶ್ನಿಸಿದ ರಾಹುಲ್ ಮೆಹ್ರಾ: ಸಾಳ್ವೆ ಅವರೊಂದಿಗೆ 150 ನಿಮಿಷಗಳ ಕಾಲ ಚರ್ಚೆ ನಡೆಸಿದ ನಂತರ, ಗವಾಸ್ಕರ್ ಅಥವಾ ಇನ್ನೊಬ್ಬ ಗೌರವಾನ್ವಿತ ಕ್ರಿಕೆಟರ್ ಶ್ರೀನವಾಸನ್ ಅವರ ಸ್ಥಾನ ತುಂಬಬಹುದು ಎಂದು ಸುಪ್ರೀಂ ಕೋರ್ಟ್ ಸೂಚಿಸಿತು. ಆದರೆ, ಗವಾಸ್ಕರ್ ಸಹ ಬಿಸಿಸಿಐನಲ್ಲಿ ಹಣಕಾಸಿನ ವ್ಯವಹಾರದ ಆಸಕ್ತಿ ಹೊಂದಿದ್ದಾರೆ ಎಂದು ಶ್ರೀನಿವಾಸನ್ ವಕೀಲರಾದ ರಾಹುಲ್ ಮೆಹ್ರಾ ಕೋರ್ಟ್ಗೆ ಮಾಹಿತಿ ನೀಡಿದರು. ಅದಕ್ಕೆ ಉತ್ತರಿಸಿದ ನ್ಯಾ. ಪಟ್ನಾಯಕ್, ನಾನು ಯಾರ ಹೆಸರನ್ನೂ ಪ್ರಸ್ತಾಪಿಸುತ್ತಿಲ್ಲ. ಗವಾಸ್ಕರ್ ನೇಮಕ ಬರೀ ಸಲಹೆ ಅಷ್ಟೇ ಎಂದು ಉತ್ತರಿಸಿದರು.
'ಐಪಿಎಲ್ 7ನೇ ಆವೃತ್ತಿ ಮುಕ್ತಾಯದವರೆಗೂ, ಬಿಸಿಸಿಐನ ಮಧ್ಯಂತರ ಅಧ್ಯಕ್ಷರನ್ನಾಗಿ ನೇಮಕ ಮಾಡಲು ಸುಪ್ರೀಂ ಕೋರ್ಟ್ ಆಸಕ್ತಿ ತೋರಿದ್ದಕ್ಕೆ ನಾನು ತುಂಬಾ ವಿನೀತನಾಗಿದ್ದೇನೆ. ಅಲ್ಲದೆ, ತೀರ್ಪನ್ನು ಗೌರವಿಸುತ್ತೇನೆ. ಈ ಸಂದರ್ಭದಲ್ಲಿ ಶ್ರೇಷ್ಠ ಸೇವೆ ಸಲ್ಲಿಸಲು ಯತ್ನಿಸುತ್ತೇನೆ'
ಟಿ ಸುನಿಲ್ ಗವಾಸ್ಕರ್
ಬಿಸಿಸಿಐ ಮಧ್ಯಂತರ ಅಧ್ಯಕ್ಷ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

