ಡ್ರಾಗೆ ತೃಪ್ತಿಪಟ್ಟ ಬಿಎಫ್ಸಿ

ಬೆಂಗಳೂರು: ಈ ಬಾರಿಯ ಐ ಲೀಗ್ ಪಂದ್ಯಾವಳಿಯಲ್ಲಿ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡವಾಗಿರುವ ಬೆಂಗಳೂರು ಎಫ್ಸಿ ಪುಣೆ ಎಫ್ಸಿ ವಿರುದ್ಧ ನಡೆದ ಪಂದ್ಯದಲ್ಲಿ ಡ್ರಾಗೆ ತೃಪ್ತಿ ಪಟ್ಟುಕೊಂಡಿದೆ.
ಶುಕ್ರವಾರ ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆ ಅಂಗಣದಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ಎಫ್ಸಿ ಹಾಗೂ ಪುಣೆ ಎಫ್ಸಿ ತಂಡಗಳು 1-1 ಗೋಲುಗಳ ಅಂತರದಲ್ಲಿ ಸಮಬಲ ಸಾಧಿಸಿ ಪಂದ್ಯವನ್ನು ಡ್ರಾ ಮಾಡಿಕೊಂಡಿವೆ. ಈ ಮೂಲಕ ಉಭಯ ತಂಡಗಳು 1 ಅಂಕಗಳನ್ನು ಹಂಚಿಕೊಂಡಿವೆ.
ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದ ಬಿಎಫ್ಸಿ ತನ್ನ ಸ್ಥಾನವನ್ನು ಮುಂದುವರಿಸಿಕೊಂಡು ಹೋಗಿದೆ. ಇನ್ನು ಮೂರನೇ ಸ್ಥಾನದಲ್ಲಿದ್ದ ಪುಣೆ ತಂಡ ಅದೇ ಸ್ಥಾನ ಕಾಯ್ದುಕೊಂಡಿದೆ.
ಪಂದ್ಯದ ಆರಂಭದಲ್ಲಿ ಪುಣೆ ತಂಡ ಕಾರ್ನರ್ ಅವಕಾಶ ಪಡೆಯಿತಾದರೂ ಅದನ್ನು ಗೋಲಾಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ಬಿಎಫ್ಸಿ ತಂಡ ಎಂದಿನಂತೆ ತಮ್ಮ ತವರಿನ ಅಂಗಣದಲ್ಲಿ ಆಕ್ರಮಣಕಾರಿ ಆಟವನ್ನೇ ಮುಂದುವರಿಸಿದ್ದು, ಎದುರಾಳಿಗಳ ಮೇಲೆ ನಿಯಂತ್ರಣ ಸಾಧಿಸಿತು.ಪಂದ್ಯದ 25ನೇ ನಿಮಿಷದಲ್ಲಿ ಬಿಎಫ್ಸಿ ತಂಡ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಯಿತು. ಥಾಯ್ ಸಿಂಗ್ ಈ ವೇಳೆ ತಮ್ಮ ಚುರುಕಿನ ಪ್ರದರ್ಶನ ತೋರುವ ಮೂಲಕ ತಂಡಕ್ಕೆ ಗೋಲು ತಂದುಕೊಟ್ಟರು. ನಂತರ 39ನೇ ನಿಮಿಷದಲ್ಲಿ ಥಾಯ್ ಗೋಲು ದಾಖಲಿಸುವ ಪ್ರಯತ್ನ ನಡೆಸಿದರಾದರು, ಚೆಂಡು ನೇರವಾಗಿ ಗೋಲ್ಕೀಪರ್ ಕೈ ಸೇರಿತು.
ಈ ಮೂಲಕ ಪಂದ್ಯದ ಮೊದಲಾರ್ಧದಲ್ಲಿ ಬಿಎಫ್ಸಿ ತಂಡ 1-0 ಗೋಲುಗಳ ಅಂತರವನ್ನು ಕಾಯ್ದುಕೊಂಡಿತು. ನಂತರ ಎರಡನೇ ಅವಧಿಯ ಆರಂಭದಲ್ಲೂ ಬಿಎಫ್ಸಿ ತಂಡದ ಆಟಗಾರರು ಪುಣೆ ಆಟಗಾರರ ಮೇಲೆ ಹೆಚ್ಚಿನ ಒತ್ತಡ ಹಾಕುವ ಪ್ರಯತ್ನ ನಡೆಸಿದರು.
ಪಂದ್ಯದ 73ನೇ ನಿಮಿಷದಲ್ಲಿ ಮತ್ತೆ ಹೋರಾಟ ನೀಡಿದ ಪುಣೆ ತಂಡ ಗೋಲುಗಳ ಅಂತರವನ್ನು ಸಮಗೊಳಿಸಿದರು. ಈ ವೇಳೆ ಅತ್ಯುತ್ತಮವಾಗಿ ಚೆಂಡನ್ನು ನಿಭಾಯಿಸಿದ ಆ್ಯಂಥೋನಿ ಡಿಸೋಜಾ ಪುಣೆಗೆ ಗೋಲು ತಂದುಕೊಡುವಲ್ಲಿ ಯಶಸ್ವಿಯಾದರು. ನಂತರ ಉಭಯ ತಂಡಗಳು ಮತ್ತೊಂದು ಗೋಲು ದಾಖಲಿಸಲು ಪ್ರಬಲ ಪೈಪೋಟಿ ನಡೆಸಿತಾದರೂ, ಅಂತಿಮವಾಗಿ ಸಾಧ್ಯವಾಗಲಿಲ್ಲ. ಹಾಗಾಗಿ ಪಂದ್ಯ ಡ್ರಾನಲ್ಲಿ ಅಂತ್ಯವಾಯಿತು. ಬಿಎಫ್ಸಿ ಆಡಿರುವ 21 ಪಂದ್ಯಗಳಲ್ಲಿ 38 ಅಂಕಗಳನ್ನು ಪಡೆದುಕೊಂಡಿದ್ದು, ಅಗ್ರಸ್ಥಾನದಲ್ಲಿ ಮುಂದುವರಿದಿದೆ. ಇನ್ನು ಪುಣೆ ತಂಡ ಆಡಿರುವ 20 ಪಂದ್ಯಗಳಲ್ಲಿ 31 ಅಂಕಗಳನ್ನು ಪಡೆದಿದ್ದು, ಮೂರನೇ ಸ್ಥಾನದಲ್ಲಿದೆ. ಈ ಎರಡೂ ತಂಡಗಳ ನಡುವೆ ಎರಡನೇ ಸ್ಥಾನದಲ್ಲಿದ್ದು, ಪ್ರಶಸ್ತಿ ರೇಸ್ನಲ್ಲಿರುವ ಸಲ್ಗಾಂವಕರ್ ಎಫ್ಸಿ 20 ಪಂದ್ಯಗಳಿಂದ 34 ಅಂಕಗಳನ್ನು ಪಡೆದು ದ್ವಿತೀಯ ಸ್ಥಾನದಲ್ಲಿದೆ.
ಹಾಗಾಗಿ ಮುಂದಿನ ಪಂದ್ಯಗಳಲ್ಲಿ ಈ ಮೂರು ತಂಡಗಳ ಪ್ರದರ್ಶನ ಪ್ರಶಸ್ತಿಯ ಹಾದಿಯನ್ನು ನಿರ್ಧರಿಸಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


