ದುಬೈಗೆ ಬೈ, ಭಾರತಕ್ಕೆ ಹಾಯ್

ಇಂದು ಚೆನ್ನೈ ಕಿಂಗ್ಸ್- ಕೋಲ್ಕತಾ ನೈಟ್ ರೈಡರ್ಸ್ ಮುಖಾಮುಖಿ
ರಾಂಚಿ: ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಐಪಿಎಲ್ ಏಳನೇ ಆವೃತ್ತಿಯ ಮೊದಲ ಹಂತದ ಪಂದ್ಯಗಳು ಯುಎಇನಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಈಗ ಮತ್ತೆ ಭಾರತಕ್ಕೆ ಕಾಲಿಟ್ಟಿರುವ ಐಪಿಎಲ್ ಎಂದಿನಂತೆ ಮತ್ತಷ್ಟು ರೋಚಕ ಕ್ಷಣಗಳನ್ನು ಭಾರತೀಯ ಅಭಿಮಾನಿಗಳಿಗೆ ಉಣಬಡಿಸಲು ಸಜ್ಜಾಗಿದೆ.
ಗುರುವಾರ ರಾಂಚಿಯಲ್ಲಿ ನಡೆಯಲಿರುವ ಪಂದ್ಯದಲ್ಲಿ ಚೆನ್ನೈ ಸೂಪರ್ ಕೀಂಗ್ಸ್ ಹಾಗೂ ಕೋಲ್ಕತಾ ನೈಟ್ರೈಡರ್ಸ್ ತಂಡಗಳು ಕಾದಾಟ ನಡೆಸುತ್ತಿದ್ದು, ಉಭಯ ತಂಡಗಳು ಭಾರತದಲ್ಲಿ ತಮ್ಮ ಗೆಲವಿನ ಅಭಿಯಾನ ಮುಂದುವರಿಸುವತ್ತ ಗಮನಹರಿಸಿವೆ.
ಏ.16ರಂದು ಯುಎಇಯಲ್ಲಿ ಆರಂಭವಾದ ಐಪಿಎಲ್ ಏಳನೇ ಆವೃತ್ತಿಯ ಮೊದಲ ಹಂತದ ಪಂದ್ಯಾವಳಿಯಲ್ಲಿ ಪ್ರತಿ ತಂಡಗಳು ತಲಾ 5 ಪಂದ್ಯಗಳನ್ನು ಆಡಿದ್ದು, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಸೋಲಿನ ಮುಖ ನೋಡಿಲ್ಲ. ಇನ್ನು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಗೆಲವಿನ ರುಚಿ ನೋಡದೆ ನಿರಾಸೆಯೊಂದಿಗೆ ಭಾರತಕ್ಕೆ ಮರಳಿದೆ. ಇನ್ನು ಉಳಿದ ತಂಡಗಳು ಗೆಲವು ಹಾಗೂ ಸೋಲಿನ ಅನುಭವ ಪಡೆದಿದ್ದರೂ, ಇನ್ನು ಮುಂದೆ ನಡೆಯಲಿರುವ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಲು ಎದುರುನೋಡುತ್ತಿವೆ.
ಯುಎಇಯಲ್ಲಿ ಒಟ್ಟು 20 ಪಂದ್ಯಗಳು ನಡೆದಿದ್ದು, ಎಲ್ಲಾ ಪಂದ್ಯಗಳಿಗೂ ಪ್ರೇಕ್ಷಕರಿಂದ ಅತ್ಯುತ್ತಮ ಬೆಂಬಲ ದೊರಕಿತು. ಅಲ್ಲದೆ ಕೆಲವು ಪಂದ್ಯಗಳು ಸೂಪರ್ ಓವರ್, ಬ್ಯಾಟ್ಸ್ಮನ್ಗಳ ಅಬ್ಬರ ಹಾಗೂ ಬೌಲರ್ಗಳ ಮಾರಕ ದಾಳಿ, ಅದ್ಭುತ ಕ್ಷೇತ್ರರಕ್ಷಣೆಯಿಂದ ಪಂದ್ಯದ ಫಲಿತಾಂಶ ಬದಲಾಗಿದ್ದು ಹೀಗೆ ಹಲವು ರೋಚಕ ಕ್ಷಣಗಳಿಗೆ ಯುಎಇ ಸಾಕ್ಷಿಯಾಗಿತ್ತು.
ಆರಂಭದಲ್ಲೇ ಇಷ್ಟೊಂದು ಪ್ರಮಾಣದಲ್ಲಿ ಅಭಿಮಾನಿಗಳನ್ನು ರಂಜಿಸಿದ್ದ ಐಪಿಎಲ್, ಈಗ ಭಾರತಕ್ಕೆ ಮರಳಿರುವುದರಿಂದ ಇಲ್ಲಿನ ಅಭಿಮಾನಿಗಳು ಹೆಚ್ಚು ಪುಳಕಗೊಂಡಿದ್ದಾರೆ.
ಆತ್ಮ ವಿಶ್ವಾಸದಲ್ಲಿ ಸಿಎಸ್ಕೆ: ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಆತ್ಮ ವಿಶ್ವಾಸದಿಂದಲೇ ಕಣಕ್ಕಿಳಿಯುತ್ತಿದೆ. ತಮ್ಮ ಮೊದಲ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಸೋಲನುಭವಿಸಿದ್ದ ಸಿಎಸ್ಕೆ, ನಂತರ ನಡೆದ ನಾಲ್ಕೂ ಪಂದ್ಯಗಳಲ್ಲಿ ಗೆಲವಿನ ಸವಾರಿ ನಡೆಸಿದೆ. ಇನ್ನು ಕೆಕೆಆರ್ ತಂಡ ಸ್ಥಿರ ಪ್ರದರ್ಶನ ನೀಡದೇ ಕಂಗೆಟ್ಟಿದೆ. ಅಲ್ಲದೆ ರಾಜಸ್ಥಾನ ರಾಯಲ್ಸ್ ವಿರುದ್ಧ ರೋಚಕ ಸೂಪರ್ ಓವರ್ ಪಂದ್ಯದಲ್ಲೂ ಸೋಲನುಭವಿಸಿದ್ದು, ತಂಡ ನಿರಾಸೆ ಅನುಭವಿಸಿದೆ. ಕಳೆದ ಪಂದ್ಯದಲ್ಲಿ ಗೌತಮ್ ಗಂಭೀರ್ ಮಂದಗತಿಯ ಬ್ಯಾಟಿಂಗ್ ನಡೆಸಿದರೂ, ಅವರು ರನ್ ಕಲೆಹಾಕಿದ್ದು ತಂಡಕ್ಕೆ ಕೊಂಚ ನೆಮ್ಮದಿ ನೀಡಿದೆ. ಇನ್ನು ಬ್ಯಾಟಿಂಗ್ ವಿಭಾಗದಲ್ಲಿ ಸ್ಥಿರ ಪ್ರದರ್ಶನ ಕಾಣದಿರುವುದು ತಂಡಕ್ಕೆ ತಲೆನೋವಾಗಿ ಪರಿಣಮಿಸಿದೆ. ಇನ್ನು ಬೌಲಿಂಗ್ ವಿಭಾಗದಲ್ಲಿ ಸುನಿಲ್ ನಾರಾಯಣ್ ಪ್ರಮುಖ ಅಸ್ತ್ರವಾಗಿದ್ದಾರೆ, ವಿನಯ್ ಕುಮಾರ್, ಮಾರ್ನ್ ಮಾರ್ಕೆಲ್ ಸಹ ಉತ್ತಮ ಪ್ರದರ್ಶನ ನೀಡುತ್ತಿರುವುದು ತಂಡಕ್ಕೆ ನೆರವಾಗಲಿದೆ.
ಸಿಎಸ್ಕೆ ತಂಡವನ್ನು ನೋಡುವುದಾದರೆ, ಆರಂಭದಲ್ಲೇ ಡ್ವೈನ್ ಸ್ಮಿತ್, ಬ್ರೆಂಡನ್ ಮೆಕಲಂ ಜೋಡಿ ಕಣಕ್ಕಿಳಿಯಲಿದ್ದು, ಉತ್ತಮ ಆರಂಭ ನೀಡುತ್ತಿದೆ. ಮಧ್ಯಮ ಕ್ರಮಾಂಕದಲ್ಲಿ ಸುರೇಶ್ ರೈನಾ, ಫಫ್ ಡುಪ್ಲೆಸಿಸ್, ಮಹೇಂದ್ರ ಸಿಂಗ್ ಧೋನಿ, ರವೀಂದ್ರ ಜಡೇಜಾರಂತಹ ಬ್ಯಾಟ್ಸ್ಮನ್ಗಳ ಪಡೆ ಇದೆ.
ಬೌಲಿಂಗ್ನಲ್ಲಿ ಬೆನ್ ಹಿಲ್ಫನ್ಹಾಸ್ ಜತೆಗೆ ಮೋಹಿತ್ ಶರ್ಮಾ ಹಾಗೂ ಈಶ್ವರ್ ಪಾಂಡೆ ವೇಗದ ದಾಳಿಯನ್ನು ಸಮರ್ಥವಾಗಿ ನಡೆಸುತ್ತಿದೆ. ಆರ್.ಅಶ್ವಿನ್ ಹಾಗೂ ಜಡೇಜಾ ಸ್ಪಿನ್ ಜುಗಲ್ಬಂದಿ ತಂಡಕ್ಕೆ ನೆರವಾಗುತ್ತಿದೆ. ಸಿಎಸ್ಕೆ ತಂಡ ವೆಸ್ಟ್ ಇಂಡೀಸ್ ಸ್ಪಿನ್ನರ್ ಸ್ಯಾಮ್ಯುಯೆಲ್ ಬದ್ರಿ ಅವರನ್ನು ಕಣಕ್ಕಿಳಿಸುವ ಸಾಧ್ಯತೆಗಳಿವೆ.
ಚೆನ್ನೈಗೆ ಸಿಹಿ, ಕೋಲ್ಕತಾಗೆ ಕಹಿ ಹೆಚ್ಚು
ಇನ್ನು ಇಂದಿನ ಪಂದ್ಯದಲ್ಲಿ ಕಾದಾಟ ನಡೆಸುವ ತಂಡಗಳ ಯುಎಇಯಲ್ಲಿನ ಪ್ರದರ್ಶನ ನೋಡುವುದಾದರೆ, ಚೆನ್ನೈ ಸೂಪರ್ ಕಿಂಗ್ಸ್ ತಂಡ ಆಡಿದ 5 ಪಂದ್ಯಗಳಲ್ಲಿ 4ರಲ್ಲಿ ಗೆಲವು ಕೇವಲ 1ರಲ್ಲಿ ಮಾತ್ರ ಸೋತು ಗೆಲವಿನ ಸಿಹಿಯನ್ನು ಹೆಚ್ಚಾಗಿ ಸವಿದಿದೆ. ಇನ್ನು ಕೋಲ್ಕತಾ ನೈಟ್ ರೈಡರ್ಸ್ ತಂಡ 5 ಪಂದ್ಯಗಳಲ್ಲಿ 2ರಲ್ಲಿ ಗೆಲವು 3ರಲ್ಲಿ ಸೋಲನುಭವಿಸಿದೆ. ಹಾಗಾಗಿ ಚೆನ್ನೈ ಹಾಗೂ ಕೋಲ್ಕತಾ ನೈಟ್ರೈಡರ್ಸ್ ತಂಡ ಭಾರತದಲ್ಲಿ ಗೆಲವಿನ ಹಾದಿಯಲ್ಲಿ ಸಾಗುವ ವಿಶ್ವಾಸ ಹೊಂದಿವೆ.
ಸಿಎಸ್ಕೆಗೆ ಅಭಿಮಾನಿಗಳ ಬೆಂಬಲ
ರಾಂಚಿ ಸಿಎಸ್ಕೆ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿಯವರ ತವರಿನ ಅಂಗಣವಾಗಿದೆ. ಹಾಗಾಗಿ ಅಲ್ಲಿನ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಬೆಂಬಲ ನೀಡುವ ನಿರೀಕ್ಷೆ ಇದೆ. ಈ ಹಿಂದೆಯೂ ಇಲ್ಲಿ ನಡೆದ ಪಂದ್ಯಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅಭಿಮಾನಿಗಳಿಂದ ಅತ್ಯುತ್ತಮ ಬೆಂಬಲ ಪಡೆದಿತ್ತು. ಈಗ ಸಿಎಸ್ಕೆ ತಂಡ ಗೆಲವಿನ ಓಟದಲ್ಲಿದ್ದು, ಈ ಬಾರಿ ಹೆಚ್ಚಿನ ಪ್ರೇಕ್ಷರು ಆಗಮಿಸುವ ನಿರೀಕ್ಷೆಯು ಇದೆ.
ಪಂದ್ಯ ಸಮಯ: ರಾತ್ರಿ 8 ಕ್ಕೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


