ಬೆಲ್ಜಿಯಂಗೆ ತಲೆಬಾಗಿದ ವನಿತೆಯರು
ಗ್ಲಾಸ್ಗೊ: ಭಾರತದ ಮಹಿಳೆಯರು ಚಾಂಪಿಯನ್ಸ್ ಚಾಲೆಂಜ್-1 ಹಾಕಿ ಟೂರ್ನಿಯಲ್ಲಿ ಮತ್ತೊಂದು ಸೋಲಿನ ಕಹಿ ಅನುಭವಿಸಿದ್ದಾರೆ.
ಭಾರತದ ಆಟಗಾರ್ತಿಯರು ಬುಧವಾರ ನಡೆದ “G’ ಗುಂಪಿನ ಪಂದ್ಯದಲ್ಲಿ ಬೆಲ್ಜಿಯಂ ವಿರುದ್ಧ 0-5 ಗೋಲುಗಳಿಂದ ಅವಮಾನಕಾರಿ ಸೋಲನುಭವಿಸಿದರು.
ವಿಜೇತ ಬೆಲ್ಜಿಯಂ ತಂಡದ ಪರ ಮಾನನ್ ಸಿಮೋನ್ಸ್ 33ನೇ ನಿಮಿಷ, ಜಿಲ್ ಬೂನ್ 38ನೇ ನಿಮಿಷ, ಲೂಯಿಸೆ ವೆರ್ಸಾವೆಲ್ 41ನೇ ನಿಮಿಷ, ಎಮ್ಮಾ ಪುರ್ವೇಜ್ 64ನೇ ನಿಮಿಷ ಮತ್ತು ಲಿಸೆಲೊಟ್ಟೆ ವ್ಯಾನ್ ಲಿಂಡಟ್ 69ನೇ ನಿಮಿಷಗಳಲ್ಲಿ ಗೋಲು ಬಾರಿಸಿ ಗಮನ ಸೆಳೆದರು.
ಭಾರತ ಮತ್ತು ಬೆಲ್ಜಿಯಂ ಯುವಪಡೆಗಳನ್ನೇ ಕಣಕ್ಕಿಳಿಸಿದ್ದವು. ಗೆಲವಿನ ಮೂಲಕ ಮುಂದಿನ ಹೋರಾಟಕ್ಕೆ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಉಭಯ ತಂಡಗಳ ಆಟಗಾರ್ತಿಯರು ತೀವ್ರ ಪೈಪೋಟಿ ನೀಡಲು ಮುಂದಾದರು.
ಆದರೆ, ಪಂದ್ಯದ ಪೂರ್ತಿ ಬೆಲ್ಜಿಯಂ ಆಟಗಾರ್ತಿಯರೇ ಭಾರತದ ಮೇಲೆ ಪ್ರಾಬಲ್ಯ ಮೆರೆಯುವ ಮೂಲಕ ನಿರಾಯಾಸ ಗೆಲವು ದಾಖಲಿಸಿದರೆ, ಭಾರತೀಯರ ಸ್ಥಿತಿ ಎದುರಾಳಿಯ ದಾಳಿಗೆ ಸಿಕ್ಕು ಪರದಾಡುವಂತಾಯಿತು.
ಕಳೆದ ಎರಡು ಪಂದ್ಯಗಳಿಗಿಂತಲೂ ಇಲ್ಲಿ ಉತ್ತಮ ಹೋರಾಟ ಸಂಘಟಿಸುವ ಉದ್ದೇಶ ಹೊಂದಿದ್ದ ಕೋಚ್ ನೀಲ್ ಹಾಗುಡ್ ತರಬೇತಿಯಲ್ಲಿ ಪಳಗಿದ್ದ ಭಾರತದ ಆಟಗಾರ್ತಿಯರು ಅವಕಾಶಗಳನ್ನು ಗೋಲಾಗಿ ಪರಿವರ್ತಿಸುವಲ್ಲಿ ವಿಫಲರಾದರು.
ಮೊದಲ ಅವಧಿಯ ಆಟದಲ್ಲಿ ಎರಡೂ ತಂಡಗಳು ಗುಣಮಟ್ಟದ ಪ್ರದರ್ಶನ ನೀಡಿದವು. ಭಾರತದ ಆಟಗಾರ್ತಿಯರು ಪ್ರಬಲ ಸವಾಲುಗಳನ್ನೇ ಒಡ್ಡಿದ ಪರಿಣಾಮ ಬೆಲ್ಜಿಯಂ ತಂಡಕ್ಕೆ ಕೇವಲ ಒಂದು ಗೋಲುಗಳಿಸಲು ಸಾಧ್ಯವಾಯಿತು.
ಆದರೆ, ಉತ್ತರಾರ್ಧದ ಆಟದಲ್ಲಿ ಮಾತ್ರ ಭಾರತೀಯರ ದೌರ್ಬಲ್ಯವನ್ನು ಸೂಕ್ಷ್ಮವಾಗಿ ಗಮನಿಸಿ ಆ ದಿಕ್ಕಿನತ್ತ ಪರಿಣಾಮಕಾರಿ ದಾಳಿ ನಡೆಸುವಲ್ಲಿ ಯಶಸ್ವಿಯಾದ ಬೆಲ್ಜಿಯಂ ವನಿತೆಯರು ನಿರಂತರ ಗೋಲುಗಳನ್ನು ಸಂಪಾದಿಸುವಲ್ಲಿ ಯಶಸ್ವಿಯಾಗಿ ಭಾರತಕ್ಕೆ ಭಾರಿ ಆಘಾತ ನೀಡಿದರು.
ಭಾರತದ ಪರ ಗೋಲ್ಕೀಪಿಂಗ್ನಲ್ಲಿ ಸವಿತಾ ಉತ್ತಮ ತಡೆಗೋಡೆ ನಿರ್ಮಿಸಿ ಎದುರಾಳಿಯ ಅನೇಕ ಅವಕಾಶಗಳನ್ನು ವ್ಯರ್ಥಗೊಳಿಸಿದರು. ಅಂತಿಮ 15 ನಿಮಿಷಗಳ ಅವಧಿಯಲ್ಲಿ ಬೆಲ್ಜಿಯಂಗೆ ಮೂರು ಪೆನಾಲ್ಟಿ ಕಾರ್ನರ್ ಅವಕಾಶಗಳು ದೊರೆತರೂ ಸಹ ಒಂದರಲ್ಲೂ ಗೋಲಿನ ರುಚಿ ಅನುಭವಿಸಲಿಲ್ಲ.
ಬೆಲ್ಜಿಯಂ ನಾಯಕಿ ಚಾರ್ಲೊಟೆ ವೋಸ್ ತಮ್ಮ ಆಟಗಾರ್ತಿಯರನ್ನು ಸವಾಲಿಗೆ ಉತ್ತಮ ರೀತಿಯಲ್ಲಿ ಅಣಿಯಾಗಿಸುವ ಮೂಲಕ ನಿರೀಕ್ಷಿತ ಫಲಿತಾಂಶ ತಮ್ಮದಾಗಿಸಿಕೊಂಡರು.
ಶುಕ್ರವಾರ ನಡೆಯಲಿರುವ ನಾಲ್ಕನೇ ಕ್ವಾರ್ಟರ್ಫೈನಲ್ನಲ್ಲಿ ಭಾರತದ ಆಟಗಾರ್ತಿಯರು, ಅಮೆರಿಕ ತಂಡವನ್ನು ಎದುರಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

