ಕ್ರೀಡೆ

ಬೆಂಗಳೂರು ವಿಶ್ವ 10ಕೆ ಮ್ಯಾರಥಾನ್‌ಗೆ ಕಾರ್ಲ್ ಲೂಯಿಸ್ ರಾಯಭಾರಿ

Published On :

ಬೆಂಗಳೂರು: ಬಹು ನಿರೀಕ್ಷಿತ ಟಿಸಿಎಸ್ ಬೆಂಗಳೂರು ವಿಶ್ವ 10ಕೆ ಮ್ಯಾರಥಾನ್ ಓಟಕ್ಕೆ ಖ್ಯಾತ ಮಾಜಿ ಅಥ್ಲಿಟ್ ಕಾರ್ಲ್ ಲೂಯಿಸ್ ಅಧಿಕೃತ ರಾಯಭಾರಿಯಾಗಿದ್ದಾರೆ.
ಮೇ 18ರಂದು ನಡೆಯಲಿರುವ ಬೆಂಗಳೂರು ವಿಶ್ವ 10ಕೆ 2014 ಮ್ಯಾರಥಾನ್, ನಗರದ ಕಂಠೀರವ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಈ ಮ್ಯಾರಥಾನ್‌ಗೆ ಅಧಿಕೃತ ರಾಯಭಾರಿಯಾಗಲು ಕಾರ್ಲ್ ಲೂಯಿಸ್ ಸಮ್ಮತಿ ಸೂಚಿಸಿದ್ದಾರೆ. ಕಾರ್ಲ್, ಒಂಬತ್ತು ಚಿನ್ನದ ಪದಕ ಸೇರಿದಂತೆ ಒಟ್ಟು 10 ಒಲಿಂಪಿಕ್ಸ್ ಪದಕ ಹಾಗೂ 8 ಚಿನ್ನ ಪದಕ ಸೇರಿದಂತೆ ಒಟ್ಟು 10 ವಿಶ್ವಚಾಂಪಿಯನ್‌ಶಿಪ್ ಪದಕ ಪಡೆದಿದ್ದಾರೆ. ಭಾರತಕ್ಕೆ ಭಾರತವನ್ನು ನಾನು ತುಂಬಾ ಗೌರವಿಸುತ್ತೇನೆ ಹಾಗೂ ಇಚ್ಛಿಸುತ್ತೇನೆ ಹಾಗಾಗಿ ಇಲ್ಲಿಗೆ ಆಗಮಿಸಲು ನನಗೆ ತುಂಬಾ ಸಂತೋಷವಾಗುತ್ತದೆ. ಓಟ ಹಾಗೂ ಕ್ರೀಡೆಯನ್ನು ಉತ್ತಮ ರೀತಿಯಲ್ಲಿ ಪಸರಿಸಲು ನಾನು ಮುಂದೆ ಬರುತ್ತೇನೆ. ಓಟದ ಬಗ್ಗೆ ಭಾರತದಲ್ಲಿ ಆಸಕ್ತಿ ಹೆಚ್ಚುತ್ತಿದ್ದು, ಭಾರತ ಉತ್ತಮ ರೀತಿಯಲ್ಲಿ ಕ್ರೀಡೆಯನ್ನು ಬೆಳಕಿಗೆ ತರುತ್ತಿದೆ ಎಂದು ತಿಳಿಸಿದ್ದಾರೆ. ಟಿಸಿಎಸ್ ವಿಶ್ವ 10ಕೆ ಉತ್ತಮ ಕಾರ್ಯಕ್ರಮವಾಗಿದ್ದು, ಇದು ಸಾಕಷ್ಟು ಜನರನ್ನು ಆಕರ್ಷಿಸುವ ನಿರೀಕ್ಷೆಗಳಿವೆ ಎಂದು ಕಾರ್ಲ್ ತಿಳಿಸಿದರು.
ಟಿಸಿಎಸ್ ಈ ಮ್ಯಾರಥಾನ್‌ನ ಶೀರ್ಷಿಕೆ ಪ್ರಾಯೋಜಕರಾಗಿದ್ದು, ಕೋಕ ಕೋಲಾ ಸೇರಿದಂತೆ ಹಲವು ಕಂಪನಿಗಳು ಸಹ ಪ್ರಾಯೋಜಕತ್ವ ವಹಿಸಿವೆ.
ಶೂಟಿಂಗ್ ರ್ಯಾಂಕಿಂಗ್ 3ನೇ ಸ್ಥಾನಕ್ಕೆ ಸಂಧು
ನವದೆಹಲಿ: ಕಳೆದ ತಿಂಗಳು ಅಮೆರಿಕಾದಲ್ಲಿ ನಡೆದ ಐಎಸ್‌ಎಸ್‌ಎಫ್ ವಿಶ್ವ ಕಪ್ ಶೂಟಿಂಗ್‌ನಲ್ಲಿ ಚಿನ್ನದ ಪದಕ ಪಡೆದ ಭಾರತದ ಹಿರಿಯ ಶೂಟರ್ ಮಾನವ್‌ಜಿತ್ ಸಿಂಗ್ ಸಂಧು, ಈಗ ಶೂಟಿಂಗ್ ರ್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನಕ್ಕೆ ಏರಿದ್ದಾರೆ.
ಪುರುಷರ ಟ್ರ್ಯಾಪ್ ವಿಭಾಗದಲ್ಲಿ ಮಾನವ್‌ಜಿತ್ ಸಿಂಗ್ ಸಂಧು 16ನೇ ಸ್ಥಾನ ಪಡೆದಿದ್ದರು. 37 ವರ್ಷದ ಸಂಧು1228 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಇನ್ನು ಅಗ್ರ ಎರಡು ಸ್ಥಾನಗಳಲ್ಲಿ ರಷ್ಯಾದ ಅಲೆಕ್ಸೆ ಅಲಿಪೊವ್ 1437 ಹಾಗೂ ಇಟಲಿಯ ಗಿಯೊವಾನ್ನಿ ಪೆಲ್ಲಿಯೆಲೊ 1298 ಅಂಕಗಳೊಂದಿಗೆ ಮೊದಲ ಹಾಗೂ ಎರಡನೇ ಸ್ಥಾನ ಪಡೆದಿದ್ದಾರೆ.
ವಿಶ್ವಕಪ್‌ನಲ್ಲಿ ಸಂಧು, ಒಲಿಂಪಿಕ್ಸ್‌ನಲ್ಲಿ ಎರಡು ಬಾರಿ ಚಿನ್ನದ ಪದಕ ಪಡೆದಿದ್ದ ಆಸ್ಟ್ರಿಯಾದ ಮೈಕಲ್ ಡೈಮಂಡ್ ಹಾಗೂ ಮತ್ತೊಬ್ಬ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಅಲಿಪೊವ್ ಅವರನ್ನು ಮಣಿಸಿದ್ದರು. ಹಾಗಾಗಿ ಸಂಧು 16ನೇ ಸ್ಥಾನದಿಂದ 3ನೇ ಸ್ಥಾನಕ್ಕೆ ಜಿಗಿತ ಕಾಣಲು ನೆರವಾಗಿದೆ.
ವನಿತೆಯರ ಬೆಂಬಿಡದ ಸೋಲು
ಗ್ಲಾಸ್ಗೊ: ಭಾರತದ ವನಿತೆಯರು ಇಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಚಾಲೆಂಜ್-1 ಹಾಕಿ ಟೂರ್ನಿಯಲ್ಲಿ ಸೋಲಿನ ಹಾದಿಯಲ್ಲೇ ಮುಂದುವರಿದಿದ್ದಾರೆ.
ಶುಕ್ರವಾರ ನಡೆದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಭಾರತದ ಆಟಗಾರ್ತಿಯರು ಏಕೈಕ ಗೋಲಿನಿಂದ ಅಮೆರಿಕ ತಂಡದ ಎದುರು ಸೋಲನುಭವಿಸಿದರು.
ಅಮೆರಿಕದ ಪರ ಡಾಸನ್ ಅವರು ಪಂದ್ಯದ 60ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಆಕರ್ಷಕ ಗೋಲು ಬಾರಿಸುವ ಮೂಲಕ ತಮ್ಮ ತಂಡದ ಜಯಭೇರಿಗೆ ಕಾರಣರಾದರು.
ಭಾರತ ಮತ್ತು ಅಮೆರಿಕ ತಂಡಗಳ ನಡುವಿನ ಪೈಪೋಟಿ ಕೊನೆಯವರೆಗೂ ತೀವ್ರ ಹಣಾಹಣಿಯಿಂದ ಕೂಡಿತ್ತು. ಮೊದಲ ಅವಧಿಯ ಆಟದಲ್ಲಿ ಎರಡೂ ತಂಡಗಳಿಗೆ ಗೋಲಿನ ಖಾತೆ ತೆರೆಯಲಾಗಲಿಲ್ಲ.
ಭಾರತ ತಂಡದ ನಾಯಕಿ ರಿತು ರಾಣಿ ತಮ್ಮ ಪಡೆಯನ್ನು ಸಮರ್ಥವಾಗಿ ಹೋರಾಟಕ್ಕೆ ಅಣಿಯಾಗಿಸಿದ್ದರು. ಹಲವಾರು ಬಾರಿ ಗೋಲುಗಳಿಕೆಯ ಉತ್ತಮ ಅವಕಾಶಗಳನ್ನು ಪಡೆದುಕೊಂಡಿದ್ದರು. ಆದರೆ, ಎದುರಾಳಿ ತಂಡದ ಪ್ರಬಲ ರಕ್ಷಣಾ ವಿಭಾಗವನ್ನು ಬೇರ್ಪಡಿಸಲಾಗದೇ ಕೈಗೆ ಬಂದು ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಯಿತು.
ಉತ್ತರಾರ್ಧದ ಆಟದಲ್ಲಿ ಅಮೆರಿಕದ ಆಟಗಾರ್ತಿಯರು ತಮ್ಮ ದಾಳಿಯನ್ನು ತೀವ್ರಗೊಳಿಸಿಕೊಂಡ ಪರಿಣಾಮವಾಗಿ ಆಟ ಮುಗಿಯಲು ಕೇವಲ 10 ನಿಮಿಷಗಳಿದ್ದಾಗ ಗೋಲು ಸಂಪಾದಿಸಿ 1-0 ಮುನ್ನಡೆಯೊಂದಿಗೆ ಪಂದ್ಯದ ಮೇಲೆ ಹಿಡಿತ ಸಾಧಿಸಿದರು.
ಮತ್ತೊಂದೆಡೆ ಭಾರತಕ್ಕೆ ಅಂತಿಮ ನಿಮಿಷದಲ್ಲಿ ಗೋಲುಗಳಿಸಿ ಎದುರಾಳಿ ಜೊತೆ ಡ್ರಾ ಸಾಧಿಸುವ ಉತ್ತಮ ಅವಕಾಶ ಲಭಿಸಿತ್ತು. ಆದರೆ, ಈ ಹಂತದಲ್ಲಿ ದೊರೆತ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಚೆಂಡನ್ನು ಗೋಲುಪೆಟ್ಟಿಗೆಯ ಹೊರಗಡೆಯಿಂದ ಬಾರಿಸುವುದರೊಂದಿಗೆ ಆ ಸಾಧ್ಯತೆಯೂ ಕಮರಿ ಹೋಗುವಂತಾಯಿತು.
ಭಾರತದ ಆಟಗಾರ್ತಿಯರು ನಾಳೆ ನಡೆಯಲಿರುವ ಪಂದ್ಯದಲ್ಲಿ ಬೆಲ್ಜಿಯಂ ತಂಡದ ವಿರುದ್ಧ ಸೆಣಸಲಿದೆ.
ಇಂಗ್ಲೆಂಡ್ ತಂಡ ಪ್ರಕಟ
ಲಂಡನ್: ಮುಂದಿನವಾರ ಸ್ಕಾಟ್ಲೆಂಡ್ ವಿರುದ್ಧ ನಡೆಯಲಿರುವ ಏಕದಿನ ಸರಣಿಗೆ ಇಂಗ್ಲೆಂಡ್ ತಂಡವನ್ನು ಪ್ರಕಟಿಸಲಾಗಿದ್ದು, ಅಲಸ್ಟೇರ್ ಕುಕ್ ತಂಡದ ಸಾರಥ್ಯವನ್ನು ವಹಿಸಲಿದ್ದಾರೆ.
ಇಂಗ್ಲೆಂಡ್ ರಾಷ್ಟ್ರೀಯ ತಂಡದ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಎರಡನೇ ಬಾರಿಗೆ ಪೀಟರ್ ಮೊರೆಸ್ ಆಯ್ಕೆಯಾದ ನಂತರ ಪ್ರಕಟವಾದ ಮೊದಲ ತಂಡವಾಗಿದ್ದು, ತಂಡದಲ್ಲಿ ಹೊಸಮುಖವಾಗಿ ಎಡಗೈ ಸ್ಪಿನ್ನರ್ ಹ್ಯಾರಿ ಗುರ್ನಿ ಅವರನ್ನು ಮಾತ್ರ ಆಯ್ಕೆ ಮಾಡಲಾಗಿದೆ. ಉಳಿದಂತೆ ತಂಡದಲ್ಲಿ ಯಾವುದೇ ರೀತಿ ಹೆಚ್ಚಿನ ಬದಲಾವಣೆಗಳಾಗಿಲ್ಲ.
ಬ್ಯಾಟ್ಸ್‌ಮನ್‌ಗಳಾದ ಮೊಯೀನ್ ಅಲಿ ಹಾಗೂ ಗ್ಯಾರಿ ಬ್ಯಾಲೆನ್ಸ್ ತಂಡದಲ್ಲಿನ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಇಂಗ್ಲೆಂಡ್ ತಂಡ: ಅಲಸ್ಟೇರ್ ಕುಕ್ (ನಾಯಕ), ಮೊಯೀನ್ ಅಲಿ, ಜೇಮ್ಸ್ ಆ್ಯಂಡರ್‌ಸನ್, ಗ್ಯಾರಿ ಬ್ಯಾಲೆನ್ಸ್, ಇಯಾನ್ ಬೆಲ್, ರವಿ ಬೊಪಾರ, ಜೋಸ್ ಬಟ್ಲರ್, ಹ್ಯಾರಿ ಗುರ್ನಿ, ಕ್ರಿಸ್ ಜೋರ್ಡನ್, ಐಯಾನ್ ಮಾರ್ಗನ್, ಜೋ ರೂಟ್, ಜೇಮ್ಸ್ ಟ್ರೆಡ್‌ವೆಲ್, ಕ್ರಿಸ್ ವೊಕ್ಸ್.
ಪೋರ್ಚುಗಲ್ ಓಪನ್ ಟೆನಿಸ್: ದಿವಿಜ್, ರಾಜಾ ಜೋಡಿಗೆ ಸೋಲು
ಒಯಿರಾಸ್: ಭಾರತದ ಟೆನಿಸ್ ಡಬಲ್ಸ್ ಆಟಗಾರರಾದ ದಿವಿಜ್ ಶರಣ್ ಹಾಗೂ ಪುರವ್ ರಾಜಾ ಜೋಡಿಯು ಪೋರ್ಚುಗಲ್ ಓಪನ್ ಟೆನಿಸ್ ಟೂರ್ನಿಯ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಸೋಲನುಭವಿಸಿದ್ದು, ಪಂದ್ಯಾವಳಿಯಿಂದ ಹೊರಬಿದ್ದಿದೆ.
ಪುರುಷರ ಡಬಲ್ಸ್ ವಿಭಾಗದ ಪಂದ್ಯದಲ್ಲಿ ಪುರವ್ ರಾಜಾ ಹಾಗೂ ದಿವಿಜ್ ಶರಣ್ ಜೋಡಿಯು ತಮ್ಮ ಎದುರಾಳಿ ಅಗ್ರಶ್ರೇಯಾಂಕಿತ ಪ್ಯಾಬ್ಲೊ ಕ್ಯೂವಾಸ್ ಹಾಗೂ ಡೇವಿಡ್ ಮರ್ರೆರೊ ಜೋಡಿ ವಿರುದ್ಧ 2-6, 2-6 ಸೆಟ್‌ಗಳ ಅಂತರದಲ್ಲಿ ಪರಾಭವಗೊಂಡಿದೆ.
ದಿವಿಜ್ ಹಾಗೂ ರಾಜಾ ಜೋಡಿಯು ಪಂದ್ಯದ ವೇಳೆ ನಾಲ್ಕು ಬ್ರೇಕ್ ಪಾಯಿಂಟ್ ಅವಕಾಶ ಪಡೆದರಾದರೂ ಅದರಲ್ಲಿ ಕೇವಲ ಒಂದು ಬಾರಿ ಯಶಸ್ವಿಯಾದರು. ಹಾಗಾಗಿ ಸಿಕ್ಕ ಅವಕಾಶವನ್ನು ಬಳಸಿಕೊಳ್ಳಲು ವಿಫಲವಾದ ಭಾರತದ ಜೋಡಿ ಮುಖಭಂಗ ಅನುಭವಿಸುವಂತಾಯಿತು.
ಆರಂಭದಿಂದಲೇ ಉರುಗ್ವೆ ಹಾಗೂ ಸ್ಪ್ಯಾನಿಶ್ ಜೋಡಿಯ ವಿರುದ್ಧ ಪರದಾಟ ನಡೆಸಿದ ಭಾರತದ ಜೋಡಿ ಮೊದಲ ಸೆಟ್‌ನಲ್ಲಿ 2-6 ಅಂತರದಿಂದ ಹಿನ್ನಡೆ ಅನುಭವಿಸಿತು. ಮೊದಲ ಸೆಟ್‌ನಲ್ಲಿ ಸಿಕ್ಕ ನಿಯಂತ್ರಣವನ್ನು ಎರಡನೇ ಸೆಟ್‌ನಲ್ಲೂ ಮುಂದುವರಿಸಿದ ಡೇವಿಡ್ ಜೋಡಿ ಈ ಸೆಟ್‌ನಲ್ಲೂ 6-2 ಅಂತರದ ಮುನ್ನಡೆ ಪಡೆದು ಗೆಲವಿನ ನಗೆ ಬೀರಿದರು.
ಇನ್ನು ಮಹಿಳೆಯರ ವಿಭಾಗದಲ್ಲಿ ಭಾರತದ ಸಾನಿಯಾ ಮಿರ್ಜಾ ಹಾಗೂ ಜಿಂಬಾಬ್ವೆಯ ಆಟಗಾರ್ತಿ ಕಾರಾ ಬ್ಲ್ಯಾಕ್ ಜೋಡಿಯು ಪಂದ್ಯಾವಳಿಯ ಉಪಾಂತ್ಯಕ್ಕೆ ಪ್ರವೇಶಿಸುವ ಮೂಲಕ ಉತ್ತಮ ಪ್ರದರ್ಶನ ನೀಡಿದೆ. ಹಾಗಾಗಿ ಪಂದ್ಯಾವಳಿಯಲ್ಲಿ ಭಾರತದ ಅಭಿಯಾನ ಮುಂದುವರಿದಂತಾಗಿದೆ.
ಸಾನಿಯಾ ಮಿರ್ಜಾ ಜೋಡಿಯು ತಮ್ಮ ಮುಂದಿನ ಪಂದ್ಯದಲ್ಲಿ ಅಮೆರಿಕಾದ ಜೋಡಿಯಾದ ಮೂರನೇ ಶ್ರೇಯಾಂಕಿತ ಲೈಜೆಲ್ ಹುಬೆರ್ ಮತ್ತು ಲಿಸಾ ರೇಮಂಡ್ ಅವರನ್ನು ಎದುರಿಸಲಿದ್ದಾರೆ.
ಪಾಕಿಸ್ತಾನ ತಂಡಕ್ಕೆ ವಕಾರ್ ಕೋಚ್
ಕರಾಚಿ: ಟೆಸ್ಟ್ ತಂಡದ ಮಾಜಿ ನಾಯಕ ವಕಾರ್ ಯೂನಿಸ್ ಅವರು ಪಾಕಿಸ್ತಾನ ಕ್ರಿಕೆಟ್ ತಂಡದ ನೂತನ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ನಾಜಂ ಸೇಠಿ ಶುಕ್ರವಾರ ಈ ವಿಷದ ಖಚಿತಪಡಿಸಿದ್ದಾರೆ. ಮುಖ್ಯ ಕೋಚ್ ಆಗಿ ಯೂನಿಸ್ ಹಾಗೂ ಮುಖ್ಯ ಆಯ್ಕೆದಾರ ಮತ್ತು ಮ್ಯಾನೇಜರ್ ಆಗಿ ಮೊಯಿನ್ ಖಾನ್ ಅವರನ್ನು ಎರಡು ವರ್ಷಗಳ ಅವಧಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ವಕಾರ್ ಮತ್ತು ಮೊಯಿನ್‌ರ ಹೊಂದಾಣಿಕೆಯ ಕಾರ್ಯವೈಖರಿಯಿಂದ ರಾಷ್ಟ್ರೀಯ ತಂಡದ ಭವಿಷ್ಯದ ದೃಷ್ಟಿಯಿಂದ ಉತ್ತಮ ರೀತಿಯಲ್ಲಿ ನೆರವಾಗಲಿದೆ ಎಂದು ಅವರು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.