ತವರಿನಲ್ಲಾದರೂ ಮುಂಬೈ ಮೊದಲ ಜಯ ಕಂಡೀತೇ?
ಮುಂಬೈ: ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಈವರೆಗೆ ಆಡಿರುವ ಎಲ್ಲಾ ಐದೂ ಪಂದ್ಯಗಳಲ್ಲಿ ಸೋಲನುಭವಿಸಿದ್ದು, ಇನ್ನೊಂದು ಪಂದ್ಯ ಸೋತರೆ ಪ್ರಸಕ್ತ ಸಾಲಿನ ಐಪಿಎಲ್ ಟಿ-20 ಕ್ರಿಕೆಟ್ ಪಂದ್ಯಾವಳಿಯಲ್ಲಿ ಸೆಮಿಫೈನಲ್ ಪ್ರವೇಶಿಸುವ ಆಸೆಯನ್ನು ಬಹುತೇಕ ಕೈಬಿಡಬೇಕಾಗುತ್ತದೆ.
ಸದ್ಯ ತೀರ ಸಂದಿಗ್ಧ ಪರಿಸ್ಥಿತಿಯಲ್ಲಿರುವ ಮುಂಬೈ ಇಂಡಿಯನ್ಸ್ ಮುಂದೆ ಮತ್ತೊಂದು ಪ್ರಬಲ ಸವಾಲಿದ್ದು, ತವರು ಅಂಕಣದಲ್ಲಿ ಶನಿವಾರ ನಡೆಯಲಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಕದನ ಮಾಡು ಇಲ್ಲವೆ ಮಡಿ ಎಂಬಂತಾಗಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ಮತ್ತು ಜಾರ್ಜ್ ಬೇಯ್ಲಿ ಸಾರಥ್ಯದ ಕಿಂಗ್ಸ್ ಪಂಜಾಬ್ ಆಟಗಾರರು ಗೆಲ್ಲುವ ವಿಶ್ವಾಸದೊಂದಿಗೆ ಕಣಕ್ಕಿಳಿಯಲು ತುರುಸಿನ ತಯಾರಿ ನಡೆಸಿದ್ದಾರೆ.
ಯುಎಇನಲ್ಲಿ ನಡೆದ ಮೊದಲ ಹಂತದ ಪಂದ್ಯಾವಳಿಯಲ್ಲಿ ಮುಂಬೈ ಇಂಡಿಯನ್ಸ್ ಐದರಲ್ಲೂ ದಯನೀಯ ಸೋಲು ಕಂಡಿದೆ. ಇದೀಗ ಭಾರತಕ್ಕೆ ಹಿಂತಿರುಗಿರುವ ಈ ಟೂರ್ನಿಯ ಎರಡನೇ ಹಂತದ ತನ್ನ ಮೊದಲ ಪಂದ್ಯದಲ್ಲಾದರೂ ಮಂಬೈ ಪಡೆ ಗೆಲುವು ಕಾಣಬಹುದು ಎಂಬ ನಿರೀಕ್ಷೆ ಎಲ್ಲರದ್ದಾಗಿದೆ.
ಮತ್ತೊಂದೆಡೆ ಈವರೆಗೆ ಆಡಿರುವ ಎಲ್ಲ ಐದೂ ಪಂದ್ಯಗಳಲ್ಲಿ ಸತತ ಗೆಲವು ಕಂಡಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ಅದ್ಭುತ ಫಾರ್ಮ್ನಲ್ಲಿದೆ. ಈ ತಂಡದ ಆಟಗಾರರ ಆತ್ಮವಿಶ್ವಾಸ ದುಪ್ಪಟ್ಟು ಹೆಚ್ಚಾಗಿದೆ. ಸತತ ಐದು ಪಂದ್ಯಗಳ ಸೋಲಿನಿಂದ ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್ ಆಟಗಾರರು ಸಾಕಷ್ಟು ಒತ್ತಡಕ್ಕೆ ಸಿಲುಕಿದ್ದು, ಇದರ ಲಾಭ ಪಡೆದುಕೊಳ್ಳುವ ಗುರಿ ಪಂಜಾಬ್ ತಂಡದಲ್ಲಿದೆ.
ವಿದೇಶದಲ್ಲಿ ನಡೆದ ಮೊದಲ ಹಂತದಲ್ಲಿ ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್...ಹೀಗೆ ಎಲ್ಲದರಲ್ಲೂ ಪಂಜಾಬ್ ಅದ್ಭುತ ಪ್ರದರ್ಶನ ನೀಡಿದೆ. ಪ್ರಮುಖವಾಗಿ ಗ್ಲೆನ್ ಮ್ಯಾಕ್ಸ್ವೆಲ್ ಮತ್ತು ಡೇವಿಡ್ ಮಿಲ್ಲರ್ ಅವರು ಪಂಜಾಬ್ ಬ್ಯಾಟಿಂಗ್ನ ಶಕ್ತಿಯಾಗಿದ್ದು, ನೆಲಕಚ್ಚಿ ನಿಂತರೆ ಮುಂಬೈ ಪಡೆ ಧೂಳೀಪಟವಾಗುವುದರಲ್ಲಿ ಆಶ್ಚರ್ಯವೇ ಇಲ್ಲ. ಈ ಇಬ್ಬರು ಆಟಗಾರರು ಬೇಗನೆ ಪೆವಿಲಿಯನ್ಗೆ ಕಳುಹಿಸದ ಹೊರತು ಮುಂಬೈ ಆಟಗಾರರು ನೆಮ್ಮದಿಯ ನಿಟ್ಟುಸಿರು ಬಿಡುವಂತಿಲ್ಲ. ರನ್ ಹೊಳೆಯನ್ನೇ ಹರಿಸಿರುವ ಮ್ಯಾಕ್ಸ್ವೆಲ್ 5 ಪಂದ್ಯಗಳಿಂದ 300 ರನ್ ಸಂಪಾದಿಸಿದ್ದಾರೆ. ಈ ಮಧ್ಯೆ ಆರಂಭಿಕ ಆಟಗಾರರಾಗಿ ಕಣಕ್ಕಿಳಿಯುವ ವೀರೇಂದ್ರ ಸೆಹವಾಗ್ ಅಪಾಯವನ್ನೂ ತಳ್ಳಿಹಾಕುವಂತಿಲ್ಲ.
ಆದರೆ, ಮುಂಬೈ ತಂಡ ಎಲ್ಲ ವಿಭಾಗಗಳಲ್ಲೂ ವೈಫಲ್ಯ ಅನುಭವಿಸಿದೆ. ಆರಂಭಿಕ ಜೋಡಿಯ ಹೊಂದಾಣಿಕೆಯಲ್ಲಿ ತಾಳಮೇಳವೇ ಇಲ್ಲದಾಗಿದೆ. ರೋಹಿತ್ ಶರ್ಮಾ, ಆದಿತ್ಯ ತಾರೆ, ಆಸ್ಟ್ರೇಲಿಯಾದ ಮಾಜಿ ಆಟಗಾರ ಮೈಕ್ ಹಸ್ಸಿ, ಹೊಸದಾಗಿ ಸೇರ್ಪಡೆಗೊಂಡಿರುವ ಬೆನ್ ಡಂಕ್ ಎಲ್ಲರೂ ಇನಿಂಗ್ಸ್ ಆರಂಭಿಸಿ ವಿಫಲರಾಗಿದ್ದಾರೆ. ಮಧ್ಯಮ ಹಂತದಲ್ಲಿ ಕೀರನ್ ಪೊಲಾರ್ಡ್ ಕೆಲವೊಮ್ಮೆ ಮಿಂಚಿದ್ದರೂ ತಂಡವನ್ನು ಗೆಲವಿನ ಹಾದಿಗೆ ಕೊಂಡೊಯ್ಯಲು ಅವರೂ ವಿಫಲರಾಗಿದ್ದಾರೆ.
ಬೌಲಿಂಗ್ನಲ್ಲಿ ಶ್ರೀಲಂಕಾದ ವೇಗಿ ಲಸಿತ್ ಮಾಲಿಂಗ ಮತ್ತು ಜಹೀರ್ ಖಾನ್ ತಲಾ 8 ವಿಕೆಟ್ ಉರುಳಿಸಿದ್ದಾರೆ. ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಸಾಧಾರಣ ಪ್ರದರ್ಶನ ನೀಡಿದ್ದಾರೆ. ಪ್ರಮುಖವಾಗಿ ಮುಂಬೈ ತಂಡಕ್ಕೆ ಬ್ಯಾಟಿಂಗ್ ವೈಫಲ್ಯವೇ ದೊಡ್ಡ ಸಮಸ್ಯೆಯಾಗಿ ಮುಂದುವರಿದಿದೆ. ಎಲ್ಲಾ ರೀತಿಯ ವೈಫಲ್ಯದಿಂದ ಮುಂಬೈ ಇಂಡಿಯನ್ಸ್ ಹೊರಬಾರದೇ ಇದ್ದಲ್ಲಿ ಸೋಲಿನ ಬಲೆಯಲ್ಲೇ ಉಳಿದುಕೊಳ್ಳಬೇಕಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

