ಕ್ರೀಡೆ

ಕೊನೆಗೂ ಮುಂಬೈ ಜೈಕಾರ

ಕೊನೆಗೂ ಮುಂಬೈ ಜೈಕಾರ
Published On :

ಮುಂಬೈ: ಸತತ ಐದು ಪಂದ್ಯಗಳ ಸೋಲಿನಿಂದ ಕಂಗೆಟ್ಟಿದ್ದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಕೊನೆಗೂ ತನ್ನ ಆರನೇ ಸಮರದಲ್ಲಿ ಸೋಲಿನ ಸರಪಳಿ ಕಳಚಿಕೊಂಡು ಏಳನೇ ಆವೃತ್ತಿಯ ಐಪಿಎಲ್‌ನಲ್ಲಿ ಮೊದಲ ಗೆಲವಿನ ರುಚಿ ಅನುಭವಿಸಿದೆ.
ವಾಂಖೆಡೆ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 5 ವಿಕೆಟ್‌ಗಳಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ವಿರುದ್ಧ ಜಯಭೇರಿ ಬಾರಿಸಿತು. ಒಂದು ವೇಳೆ ಮುಂಬೈ ಈ ಪಂದ್ಯವನ್ನೂ ಸೋತಿದ್ದರೆ, ಸೆಮಿಫೈನಲ್ ಹಾದಿಯಿಂದ ಬಹುತೇಕ ಹೊರಬಿದ್ದಂತಾಗುತ್ತಿತ್ತು.
ಮತ್ತೊಂದೆಡೆ ಸತತ ಐದು ಪಂದ್ಯಗಳನ್ನು ಗೆದ್ದು ಸೋಲಿಲ್ಲದ ಸರದಾರರಾಗಿ ಮುನ್ನುಗ್ಗುತ್ತಿದ ಕಿಂಗ್ಸ್ ಇಲೆವೆನ್ ಪಂಜಾಬ್ ಆಟಗಾರರು ಪ್ರಸಕ್ತ ಸಾಲಿನ ಪಂದ್ಯಾವಳಿಯಲ್ಲೇ ಮೊದಲ ಕಹಿ ಉಣ್ಣುವಂತಾಗಿದೆ.
ಗೆಲ್ಲಲು ಪಂಜಾಬ್ ಒಡ್ಡಿದ್ದ 169 ರನ್‌ಗಳ ಪೈಪೋಟಿಯ ಗುರಿಯತ್ತ ಹೆಜ್ಜೆ ಹಾಕಿದ್ದ ಮುಂಬೈ ಇಂಡಿಯನ್ಸ್ 5 ಎಸೆತಗಳು ಉಳಿದಿರುವಂತೆ 5 ವಿಕೆಟ್ ನಷ್ಟಕ್ಕೆ 170 ರನ್‌ಗಳಿಸಿ ಗೆಲವಿನ ಕೇಕೆ ಹಾಕಿತು.
ಆರಂಭಿಕ ಸಿ.ಎಂ. ಗೌತಮ್ (33ರನ್, 29 ಎಸೆತ, 2 ಬೌಂಡರಿ, 2 ಸಿಕ್ಸರ್), ನಾಯಕ ರೋಹಿತ್ ಶರ್ಮಾ (39ರನ್, 34 ಎಸೆತ, 4 ಬೌಂಡರಿ, 2 ಸಿಕ್ಸರ್), ಕೋರೆ ಆ್ಯಂಡರ್ಸನ್ (35ರನ್, 25 ಎಸೆತ, 3 ಬೌಂಡರಿ, 2 ಸಿಕ್ಸರ್) ಮತ್ತು ಕೀರನ್ ಪೊಲಾರ್ಡ್ (ಅಜೇಯ 28, 12 ಎಸೆತ, 2 ಬೌಂಡರಿ, 2 ಸಿಕ್ಸರ್) ಅವರು ಮುಂಬೈ ಇಂಡಿಯನ್ಸ್ ಗೆಲವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಒಂದು ರೀತಿಯಲ್ಲಿ ಬ್ಯಾಟ್ಸ್‌ಮನ್‌ಗಳ ಸಾಂಘಿಕ ಪ್ರದರ್ಶನದಿಂದ ಮುಂಬೈ ಪಡೆಗೆ ಗೆಲವು ದಕ್ಕುವಂತಾಯಿತು.
ಮುಂಬೈ ಆರಂಭ ಉತ್ತಮವಾಗಿರಲಿಲ್ಲ. ಮೊತ್ತ 23 ರನ್‌ಗಳಾಗುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ, ಮಧ್ಯಮ ಹಂತದಲ್ಲಿ ಚೇತರಿಸಿಕೊಂಡು ಜಯದ ಆಸೆ ಚಿಗುರಿಸಿಕೊಂಡಿದ್ದ ಮುಂಬೈ, ರೋಹಿತ್ ಮತ್ತು ಕೋರೆ ಅವರನ್ನು ಕೇವಲ ರನ್‌ಗಳ ಅಂತರದಲ್ಲಿ ಕಳೆದುಕೊಂಡು ಪುನಃ ಸೋಲಿನ ಆತಂಕಕ್ಕೆ ಒಳಗಾಗಿತ್ತು.
ಆದರೆ, ಪೊಲಾರ್ಡ್ ಗರ್ಜನೆಯಿಂದ ಮುಂಬೈ ಜಯದ ಕಹಳೆ ಮೊಳಗಿಸುವಲ್ಲಿ ಸಫಲವಾಯಿತು. ಮುಂಬೈಗೆ ಅಂತಿಮ 3 ಓವರುಗಳಲ್ಲಿ 41 ರನ್ ಬೇಕಿತ್ತು. ಆಗ ಪೊಲಾರ್ಡ್ ಸಿಡಿಯುವ ಮೂಲಕ ತಮ್ಮ ತಂಡವನ್ನು ಸೋಲಿನ ದವಡೆಯಿಂದ ಪಾರು ಮಾಡಿ ಮೊದಲ ಗೆಲವು ತಂದುಕೊಟ್ಟರು.
ಪಂಜಾಬ್ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಿದರೂ ಕೊನೆಯ ಘಟ್ಟದಲ್ಲಿ ಎದುರಾಳಿಗೆ ಪಂದ್ಯ ಬಿಟ್ಟುಕೊಟ್ಟಂತಾಯಿತು. ಪಂಜಾಬ್‌ಗೆ ಸಹಾ ಆಸರೆ ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಕಿಂಗ್ಸ್ ಇಲೆವೆನ್ ಪಂಜಾಬ್ 20 ಓವರುಗಳಲ್ಲಿ 5 ವಿಕೆಟ್ ನಷ್ಟಕ್ಕೆ 168 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಸಂಪಾದಿಸಿತು.
ಮೂರನೇ ಕ್ರಮಾಂಕದಲ್ಲಿ ಆಡಲಿಳಿದ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಆಕರ್ಷಕ ಅರ್ಧಶತಕ ಬಾರಿಸಿ ಪಂಜಾಬ್ ತಂಡಕ್ಕೆ ನೆರವಾದರು. ಅವರು 47 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್ ಹೊಂದಿದ್ದ 59 ರನ್‌ಗಳಿಸಿ ಅಜೇಯರಾಗಿಯೇ ಉಳಿದವರು.
ಮತ್ತೊಂದೆಡೆ ಪಂದ್ಯಾವಳಿಯ ಆರಂಭದಿಂದಲೇ ಬೌಲರ್‌ಗಳನ್ನು ಮನಬಂದಂತೆ ಶಿಕ್ಷಿಸುತ್ತಿರುವ ಗ್ಲೆನ್ ಮ್ಯಾಕ್ಸ್‌ವೆಲ್ ಮಂಬೈ ಬೌಲರ್‌ಗಳನ್ನೂ ದಂಡಿಸಿದರು. ಅವರು ಕೇವಲ 27 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್ ಸೇರಿದಂತೆ 45 ರನ್ ಚಚ್ಚಿದರು.
ಉಳಿದಂತೆ, ಆರಂಭಿಕ ಚೇತೇಶ್ವರ್ ಪೂಜಾರ 18 ಎಸೆತಗಳಲ್ಲಿ 4 ಬೌಂಡರಿಗಳಿದ್ದ 19 ರನ್ ಹಾಗೂ ಕೆಳಕ್ರಮಾಂಕದಲ್ಲಿ ಜಾರ್ಜ್ ಬೇಯ್ಲಿ 15 ಮತ್ತು ಡೇವಿಡ್ ಮಿಲ್ಲರ್ 16 ರನ್‌ಗಳಿಸಿದರು.  ಢಿ ಪಂಜಾಬ್ ದಾಂಡಿಗರು ಅಂತಿಮ 5 ಓವರುಗಳಲ್ಲಿ 42 ರನ್ ಕಲೆಹಾಕಿದರು. ಸಹಾ ಮತ್ತು ಮ್ಯಾಕ್ಸ್‌ವೆಲ್ ಮೂರನೇ ವಿಕೆಟ್ ಜೊತೆಯಾಟದಲ್ಲಿ 69 ರನ್ ಪೇರಿಸಿದ್ದು ಪಂಜಾಬ್‌ನ ಉತ್ತಮ ಮೊತ್ತಕ್ಕೆ ಸಹಕಾರಿಯಾಯಿತು. ಈ ಮಧ್ಯೆ ವೀರೇಂದ್ರ ಸೆಹವಾಗ್ ಅನಗತ್ಯ ರನೌಟ್‌ಗೆ ಬಲಿಯಾಗುವುದರೊಂದಿಗೆ ಮತ್ತೆ ವಿಫಲರಾದರು.
ಮುಂಬೈ ಬೌಲರ್‌ಗಳ ಪೈಕಿ ಹರ್‌ಭಜನ್ ಸಿಂಗ್ 2 ಹಾಗೂ ಕೋರೆ ಆ್ಯಂಡರ್ಸನ್ ಮತ್ತು ಲಸಿತ್ ಮಾಲಿಂಗ ತಲಾ 1 ವಿಕೆಟ್ ಪಡೆದರು. ಹಾಗೆ ನೋಡಿದರೆ, ಮುಂಬೈನ ಪ್ರತಿ ದಾಳಿಕಾರನೂ ದಂಡನೆಗೊಳಗಾದರು.
ಈ ಮಧ್ಯೆ ಮಧ್ಯಮ ವೇಗಿ ಜಹೀರ್ ಖಾನ್ ಎಡಗೈ ನೋವಿಗೆ ಒಳಗಾದ ಪರಿಣಾಮ ತಮ್ಮ ನಾಲ್ಕನೇ ಓವರ್ ಅನ್ನು ಪೂರ್ಣಗೊಳಿಸಲಾಗದೇ ಅಂಕಣ ತೊರೆದರು. ಆಗ ಉಳಿದ ಮೂರು ಎಸೆತಗಳನ್ನು ಪೊಲಾರ್ಡ್ ಎಸೆಯುವ ಮೂಲಕ ಓವರ್ ಪೂರ್ಣಗೊಳಿಸಿದರು.
ಸ್ಕೋರ್ ವಿವರ
ಕಿಂಗ್ಸ್ ಇಲೆವೆನ್ ಪಂಜಾಬ್
20 ಓವರುಗಳಲ್ಲಿ 5 ವಿಕೆಟ್‌ಗೆ 168
ಚೇತೇಶ್ವರ ಪೂಜಾರ್ ಸಿ ಗೌತಮ್ ಬಿ ಆ್ಯಂಡರ್ಸನ್ 19, ವೀರೇಂದ್ರ ಸೆಹ್ವಾಗ್ ರನೌಟ್ 1, ವೃದ್ಧಿಮಾನ್ ಸಹಾ ಅಜೇಯ 59, ಗ್ಲೆನ್ ಮ್ಯಾಕ್ಸ್‌ವೆಲ್ ಸಿ ಡಂಕ್ ಬಿ ಹರ್‌ಭಜನ್ 45, ಜಾರ್ಜ್ ಬೇಯ್ಲಿ ಸಿ ಆ್ಯಂಡರ್ಸನ್ ಬಿ ಹರ್‌ಭಜನ್ 15, ಡೇವಿಡ್ ಮಿಲ್ಲರ್ ಸಿ ಡಂಕ್ ಬಿ ಮಾಲಿಂಗ 16, ಮಿಚೆಲ್ ಜಾನ್ಸನ್ ಅಜೇಯ 0. ಇತರೆ: (ಬೈ-1, ಲೆಗ್‌ಬೈ-6, ವೈ-5, ನೋಬಾಲ್-1) 13.
ವಿಕೆಟ್ ಪತನ: 1-13, 2-24, 3-93, 4-130, 5-165.
ಬೌಲಿಂಗ್ ವಿವರ: ಜಹೀರ್ ಖಾನ್ 3.3-0-28-0, ಜಸ್‌ಪ್ರೀತ್ ಬುಮ್ರಾ 4-0-25-0, ಕೋರೆ ಆ್ಯಂಡರ್ಸನ್ 2-0-17-1, ಲಸಿತ್ ಮಾಲಿಂಗ 4-0-25-1, ಹರ್‌ಭಜನ್ ಸಿಂಗ್ 4-0-34-2, ಕೀರನ್ ಪೊಲಾರ್ಡ್ 2.3-0-32-0.
ಮುಂಬೈ ಇಂಡಿಯನ್ಸ್ 19.1 ಓವರುಗಳಲ್ಲಿ 5 ವಿಕೆಟ್‌ಗೆ 170
ಬೆನ್ ಡಂಕ್ ಸಿ ಸಹಾ ಬಿ ಸಂದೀಪ್ 5, ಸಿ.ಎಂ. ಗೌತಮ್ ಎಲ್‌ಬಿ ಬಿ ಧವನ್ 33, ಅಂಬಟಿ ರಾಯುಡು ಎಲ್‌ಬಿ ಬಿ ಸಂದೀಪ್ 8, ರೋಹಿತ್ ಶರ್ಮಾ ಸಿ ಸಹಾ ಬಿ ಬಾಲಾಜಿ 39, ಕೋರೆ ಆ್ಯಂಡರ್ಸನ್ ಸಿ ಮಿಲ್ಲರ್ ಬಿ ಧವನ್ 35, ಕೀರನ್ ಪೊಲಾರ್ಡ್ ಅಜೇಯ 28, ಆದಿತ್ಯ ತಾರೆ ಅಜೇಯ 16. ಇತರೆ: (ಲೆಗ್‌ಬೈ-3, ವೈ-3) 6.
ವಿಕೆಟ್ ಪತನ: 1-6, 2-23, 3-70, 4-123, 5-126.
ಬೌಲಿಂಗ್ ವಿವರ: ಸಂದೀಪ್ ಶರ್ಮಾ 3.1-0-29-2, ಲಕ್ಷ್ಮೀಪತಿ ಬಾಲಾಜಿ 4-0-38-1, ಮಿಚೆಲ್ ಜಾನ್ಸನ್ 4-0-37-0,
ಅಕ್ಷರ್ ಪಟೇಲ್ 4-0-40-0, ರಿಶಿ ಧವನ್ 4-0-23-2.
ಪಂದ್ಯಶ್ರೇಷ್ಠ
ಕೋರೆ ಆ್ಯಂಡರ್ಸನ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.