ಬೆಲ್ಜಿಯಂಗೆ ಸೋತ ವನಿತೆಯರು
ಗ್ಲಾಸ್ಗೋ: ಅದ್ಭುತ ಪ್ರದರ್ಶನ ನೀಡಿದಾಗ್ಯೂ, ಭಾರತ ವನಿತೆಯರ ತಂಡ ಚಾಂಪಿಯನ್ಸ್ ಚಾಲೆಂಜ್-1 ಹಾಕಿ ಪಂದ್ಯಾವಳಿಯಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಬೆಲ್ಜಿಯಂ ವಿರುದ್ಧ 2-4 ಗೋಲುಗಳ ಅಂತರದಿಂದ ಸೋಲನುಭವಿಸಿದೆ. ಪಂದ್ಯದ 20ನೇ ನಿಮಿಷದಲ್ಲಿ ಗೋಲು ದಾಖಲಿಸಿದ ನಾಯಕಿ ಚಾರ್ಲೋಟ್ಟೆ ಡಿ ವೋಸ್ ಅವರು ಬೆಲ್ಜಿಯಂಗೆ 1-0 ಅಂತರದಿಂದ ಮುನ್ನಡೆ ತಂದುಕೊಟ್ಟರು. ಇದಾಗಿ 5 ನಿಮಿಷಗಳ ನಂತರ ಪೂನಮ್ ರಾಣಿ ಅವರು ತಮಗೆ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಗೋಲು ದಾಖಲಿಸುವಲ್ಲಿ ಯಶಸ್ವಿಯಾದರು. ಆಗ ಉಭಯ ತಂಡಗಳು ಸಮಬಲ ಸಾಧಿಸಿದ್ದವು.
ನಂತರ 28ನೇ ನಿಮಿಷದಲ್ಲಿ ಗೋಲು ದಾಖಲಿಸಿದ ಎಮಿಲೀ ಸಿನಿಯಾ ಅವರು ಬೆಲ್ಜಿಯಂಗೆ 2-1 ಗೋಲುಗಳ ಅಂತರದಿಂದ ಮುನ್ನಡೆ ತಂದುಕೊಟ್ಟರು. ಇನ್ನು ದ್ವಿತೀಯಾರ್ಧ ಪಂದ್ಯದ ಆರಂಭದಲ್ಲಿ ಬಲಿಷ್ಠ ಹೋರಾಟ ನಡೆಸಿದ ಭಾರತದ ಪರ, 44ನೇ ನಿಮಿಷದಲ್ಲಿ ಫೀಲ್ಡ್ ಗೋಲು ದಾಖಲಿಸಿದ ಮೋನಿಕಾ ಅವರು ಮತ್ತೆ ಸಮಬಲ ಸಾಧಿಸುವಂತೆ ನೋಡಿಕೊಂಡರು.
ನಂತರ 45ನೇ ನಿಮಿಷದಲ್ಲಿ ಗೋಲು ದಾಖಲಿಸಿದ ಲೂಯಿಸ್ ವರ್ಸಾ ವೆಲ್ ಅವರು ಗೋಲು ದಾಖಲಿಸುವುದರೊಂದಿಗೆ ಬೆಲ್ಜಿಯಂ ಮತ್ತೆ ಮುನ್ನಡೆ ಸಾಧಿಸಿತು. ಪಂದ್ಯದ 60ನೇ ನಿಮಿಷದಲ್ಲಿ ತಮ್ಮ 2ನೇ ಗೋಲು ದಾಖಲಿಸಿದ ಎಮಿಲೀ ಸಿನಿಯಾ ಅವರು ಗೆಲವಿನ ಅಂತರವನ್ನು ಹೆಚ್ಚಿಸಿದರು.
ಭಾರತ ಈಗ 7ನೇ ಸ್ಥಾನಕ್ಕಾಗಿ ನಡೆಯಲಿರುವ ಪಂದ್ಯದಲ್ಲಿ ಆತಿಥೇಯ ಸ್ಕಾಟ್ಲೆಂಡ್ ವಿರುದ್ಧ ಸೆಣಸಲಿದೆ.
ಡೋಪಿಂಗ್: ಟೈಸನ್ಗೆ ವರ್ಷ ನಿಷೇಧ
ಕೊಲೊರಾಡೋ ಸ್ಪ್ರಿಂಗ್ಸ್: ನಿಷೇಧಿತ ಉದ್ದೀಪನ ಔಷಧ ಸೇವಿಸಿ ಸಿಕ್ಕಿಬಿದ್ದ ಅಮೆರಿಕದ ಖ್ಯಾತ ಓಟಗಾರ ಟೈಸನ್ ಗೇ ಅವರಿಗೆ ಅಲ್ಲಿನ ಡೋಪಿಂಗ್ ನಿಗ್ರಹ ಸಂಸ್ಥೆ ಒಂದು ವರ್ಷ ನಿಷೇಧ ಹೇರಿದೆ. ಅಲ್ಲದೆ, 2012ರ ಲಂಡನ್ ಒಲಿಂಪಿಕ್ಸ್ನಲ್ಲಿ ಗೆದ್ದ ಬೆಳ್ಳಿ ಪದಕವನ್ನು ಟೈಸನ್ ಮರಳಿ ನೀಡಿದ್ದಾರೆ. ಎರಡು ಬಾರಿ ನಡೆಸಲಾದ ಪರೀಕ್ಷೆಯಲ್ಲಿ 31 ವರ್ಷದ ಅಮೆರಿಕದ ಟ್ರ್ಯಾಕ್ ಸ್ಟಾರ್ ನಿಷೇಧಿತ ಅನಾಬೊಲಿಕ್ ಸ್ಟಿರಾಯ್ಡ್ ಸೇವಿಸಿರುವುದು ಖಚಿತಪಟ್ಟಿದೆ. ಕಳೆದ ವರ್ಷ ನಡೆದ ಕ್ರೀಡಾಕೂಟವೊಂದರಲ್ಲಿ ಅಮೆರಿಕ ಡೋಪಿಂಗ್ ನಿಗ್ರಹ ಘಟಕ ಮತ್ತು ವಿಶ್ವ ಡೋಪಿಂಗ್ ನಿಗ್ರಹ ಘಟಕ ನಡೆಸಿದ ಪರೀಕ್ಷೆಯಲ್ಲಿ ಟೈಸನ್ ನಿಷೇಧಿತ ಔಷಧ ಸೇವಿಸಿರುವುದು ಖಚಿತಪಟ್ಟಿದೆ. ಕಳೆದ ವರ್ಷ ಜೂನ್ 23ರಂದು ಟೈಸನ್ ಮೂತೃದ ಮಾದರಿಯನ್ನು ಪಡೆಯಲಾಗಿದ್ದ ದಿನದಿಂದಲೇ ಟೈಸನ್ ಮೇಲೆ ನಿಷೇಧ ಹೇರಲಾಗಿದೆ. ಈಗ ಹೇರಲಾಗಿರುವ ನಿಷೇಧದ ಪ್ರಕಾರ, ಮುಂದಿನ ತಿಂಗಳೇ ಟೈಸನ್ ಗೇ ಸ್ಪರ್ಧೆಗೆ ಮರಳಬಹುದಾಗಿದೆ. ಆದರೆ, ನ್ಯೂಯಾರ್ಕ್ನಲ್ಲಿ ನಡೆಯಲಿರುವ ಡೈಮಂಡ್ ಲೀಗ್ನಲ್ಲಿ ಭಾಗವಹಿಸಲು ಟೈಸನ್ಗೆ ಅವರಿಗೆ ಅಕಾಶವಿಲ್ಲದಂತಾಗಿದೆ. ಇದು ಜೂನ್ 26ರಿಂದ 29ರವರೆಗೆ ಕ್ಯಾಲಿಫೋರ್ನಿಯಾದಲ್ಲಿ ನಡೆಯಲಿರುವ ಅಮೆರಿಕ ಫೀಲ್ಟ್ ಮತ್ತು ಟ್ರ್ಯಾಕ್ ಚಾಂಪಿಯನ್ಶಿಪ್ಗೆ ಅರ್ಹತೆ ಪಡೆಯುವ ಪಂದ್ಯಾವಳಿಯಾಗಿದೆ. ಈ ನಿಷೇಧವನ್ನು ಒಪ್ಪಿಕೊಂಡಿರುವ ಟೈಸನ್ ಅವರು, ಜುಲೈ 15, 2012ರಿಂದ ಭಾಗವಹಿಸಿರುವ ಎಲ್ಲ ಪಂದ್ಯಾವಳಿಗಳ ಫಲಿತಾಂಶಗಳಲ್ಲಿ ಅವರು ಪಡೆದ ಸ್ಥಾನಗಳು ಅನರ್ಹಗೊಂಡಿವೆ.
ಸಂದೀಪ್, ಖುಷ್ಬೀರ್ ರಾಷ್ಟ್ರೀಯ ದಾಖಲೆ
ನವದೆಹಲಿ: ಭಾರತದ ಸಂದೀಪ್ ಕುಮಾರ್ ಮತ್ತು ಖುಷ್ಬೀರ್ ಕೌರ್ ಅವರು ಚೀನಾದ ಟೇಕಾಂಗ್ನಲ್ಲಿ ನಡೆದ ಐಎಎಎಫ್ ವಿಶ್ವ ರೇಸ್ ವಾಕಿಂಗ್ ಕಪ್ನಲ್ಲಿ ಕ್ರಮವಾಗಿ ಪುರುಷರ 20 ಕಿಲೊಮೀಟರ್ ಮತ್ತು ಮಹಿಳೆಯರ 20 ಕಿಲೊಮೀಟರ್ ನಡಿಗೆ ಸ್ಪರ್ಧೆಯಲ್ಲಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ.
ಆದರೆ, ಈ ಇಬ್ಬರೂ ಅಥ್ಲೀಟ್ಗಳಿಗೆ ಪದಕ ಗೆದ್ದುಕೊಳ್ಳಲು ಸಾಧ್ಯವಾಗಲಿಲ್ಲ. ಸಂದೀಪ್ 3:56.22 ಸೆಕೆಂಡುಗಳಲ್ಲಿ ಗುರಿ ಕ್ರಮಿಸುವ ಮೂಲಕ 23ನೇ ಸ್ಥಾನಕ್ಕೆ ತೃಪ್ತಿ ಹೊಂದಿದರು. ಈ ಮೂಲಕ ಅವರು 2012ರ ಲಂಡನ್ ಒಲಿಂಪಿಕ್ಸ್ನಲ್ಲಿ ಬಸಂತ್ ಬಹಾದ್ದೂರ್ ರಾಣಾ ನಿರ್ಮಿಸಿದ್ದ 3:56.48 ಸೆಕೆಂಡುಗಳ ರಾಷ್ಟ್ರೀಯ ದಾಖಲೆಯನ್ನು ಅಳಿಸಿ ಹಾಕಿದರು.
ಮಹಿಳೆಯರ ನಡಿಗೆ ವಿಭಾಗದಲ್ಲಿ ಖುಷ್ಬೀರ್ ಕೌರ್ 1:31.40 ಸೆಕೆಂಡುಗಳಲ್ಲಿ ಗುರಿ ತಲುಪುವ ಮೂಲಕ 35ನೇ ಸ್ಥಾನಕ್ಕೆ ತೃಪ್ತಿ ಹೊಂದಿದರು.
ರಾಜ್ಯಮಟ್ಟದ ಹಾಕಿ ಪಂದ್ಯಾವಳಿ
ಬೆಳಗಾವಿ: ಬೆಳಗಾವಿ ಜಿಲ್ಲಾ ಹಾಕಿ ಅಸೋಸಿಯೇಶನ್ ಮೇ 6ರಿಂದ 10ರವರೆಗೆ ನಗರದ ಕ್ಯಾಂಪ್ನ ಮೇಜರ್ ಬಿ.ಎ. ಸಯ್ಯದ ಮೆಮೋರಿಯಲ್ ಹಾಕಿ ಅಂಗಣದಲ್ಲಿ ರಾಜ್ಯ ಮಟ್ಟದ ಹಾಕಿ ಪಂದ್ಯಾವಳಿ ಆಯೋಜಿಸಿದೆ. ಇದಕ್ಕೆ ಕರ್ನಾಟಕ ರಾಜ್ಯ ಹಾಕಿ ಅಸೋಸಿಯೇಶನ್ ಅನುಮತಿ ನೀಡಿದೆ. ರಾಜ್ಯದ ವಿವಿಧೆಡೆಗಳಿಂದ ಒಟ್ಟು 12 ತಂಡಗಳು ಈ ಪಂದ್ಯದಲ್ಲಿ ಪಾಲ್ಗೊಳ್ಳಲಿವೆ. ಅಲ್ಲದೇ, ಎಲ್ಲ ಹಾಕಿ ಪಟುಗಳಿಗೆ ಉಚಿತವಾಗಿ ವಸತಿ, ಊಟ, ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಹೇಳಿದರು.
ಪಂದ್ಯದಲ್ಲಿ ವಿಜೇತವಾಗುವ ತಂಡಕ್ಕೆ ರು. 15000 ನಗದು ಮತ್ತು ಲೋಕಮಾನ್ಯ ಟ್ರೋಫಿ, ರನ್ನರ್ ಆಪ್ ತಂಡಕ್ಕೆ 10000 ನಗದು ಮತ್ತು ಲೋಕಮಾನ್ಯ ಟ್ರೋಫಿ ನೀಡಲಾಗುತ್ತದೆ. ಸೆಮಿ ಫೈನಲ್ ಪಂದ್ಯದಲ್ಲಿ ಪರಾಭವ ಹೊಂದಿದ ತಂಡಕ್ಕೆ ರು. 5000 ನಗದು ಬಹುಮಾನ ನೀಡಲಾಗುತ್ತದೆ. ಅಲ್ಲದೇ, ಪ್ರತಿಯೊಂದು ಪಂದ್ಯದಲ್ಲಿ ಉತ್ತಮ ಪಟುಗಳಿಗೆ ತಲಾ ರು. 100 ಬಹುಮಾನ ನೀಡಲಾಗುವುದು.
ಹೊರಸ್ಥಳಗಳಲ್ಲಿ
ಗೆಲ್ಲುವ ಗುರಿ: ಕೊಹ್ಲಿ
ಬೆಂಗಳೂರು: ತವರಿನಲ್ಲಿ ನಡೆಯುತ್ತಿರುವ ಐಪಿಎಲ್ನ ಎರಡನೇ ಹಂತದ ಪಂದ್ಯಾವಳಿ ನಮ್ಮ ಪಾಲಿಗೆ ಹೊಸ ಆರಂಭವಿದ್ದಂತೆ. ಮುಖ್ಯವಾಗಿ ಹೊರಸ್ಥಳಗಳಲ್ಲಿ ಹೆಚ್ಚಿನ ಪಂದ್ಯಗಳನ್ನು ಗೆದ್ದುಕೊಳ್ಳುವ ಮೂಲಕ ಸೆಮಿಫೈನಲ್ ಹಾದಿಯನ್ನು ಸರಳಗೊಳಿಸಿಕೊಳ್ಳುವ ಉದ್ದೇಶ ನಮ್ಮದು ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಭಾನುವಾರ ಹೈದರಾಬಾದ್ ತಂಡದ ವಿರುದ್ಧ ನಡೆಯಲಿರುವ ಪಂದ್ಯಕ್ಕೆ ಮುನ್ನಾದಿನ ಸುದ್ದಿಗಾರರೊಂದಿಗೆ ಮಾತನಾಡಿದ ಕೊಹ್ಲಿ, ಕಳೆದ ಬಾರಿ ನಾವು ಹೊರಸ್ಥಳಗಳಲ್ಲಿ ಹೆಚ್ಚು ಪಂದ್ಯಗಳನ್ನು ಗೆದ್ದುಕೊಳ್ಳುವಲ್ಲಿ ವಿಫಲವಾದೆವು. ಹಾಗಾಗಿ, ಮುಂದಿನ ಹಂತಕ್ಕೆ ತೇರ್ಗಡೆ ಹೊಂದಲು ಸಾಧ್ಯವಾಗಲಿಲ್ಲ ಎಂದರು. ತವರಿನಲ್ಲಿ ನಡೆಯಲಿರುವ ಎರಡನೇ ಹಂತದ ಪಂದ್ಯಾವಳಿಯನ್ನು ಗಂಭೀರವಾಗಿ ತೆಗೆದುಕೊಂಡಿದ್ದೆವೆ. ಯುಎಇನಲ್ಲಿನ ಪಂದ್ಯಾವಳಿಯ ಮೊದಲ ಹಂತದಲ್ಲಿ ಎಲ್ಲಾ ಪಂದ್ಯಗಳನ್ನು ಗೆದ್ದುಕೊಂಡಿದ್ದರೂ ಸಹ ತವರಿನಲ್ಲಿನ ಪ್ರದರ್ಶನ ನಮ್ಮ ಪಾಲಿಗೆ ಹೊಸ ಅಧ್ಯಾಯವೇ ಆಗಿರುತ್ತಿತ್ತು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

