ಕ್ರೀಡೆ

ಸೂರ್ಯನಿಗೇ ಆರ್‌ಸಿಬಿ ಟಾರ್ಚ್

ಸೂರ್ಯನಿಗೇ ಆರ್‌ಸಿಬಿ ಟಾರ್ಚ್
Published On :

ಬೆಂಗಳೂರು: ಸಿಕ್ಸರ್ ಮತ್ತು ಬೌಂಡರಿಗಳೊಂದಿಗೆ ರನ್‌ಮಳೆಗರೆದ ಎ.ಬಿ ಡಿವಿಲಿಯರ್ಸ್ ಅವರು ತವರಿನ ಚಿನ್ನಸ್ವಾಮಿ ಅಂಗಣದಲ್ಲಿ ಭಾನುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 4 ವಿಕೆಟ್ ಅಂತರದಿಂದ ಜಯ ತಂದುಕೊಟ್ಟರು.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿದ್ದ ಆರ್‌ಸಿಬಿ ತಂಡ, ಹೈದರಾದಾಬ್ ತಂಡವನ್ನು 155 ರನ್‌ಗಳಿಗೆ ನಿಯಂತ್ರಿಸಿತ್ತು. ನಂತರ 156 ರನ್‌ಗಳ ಗುರಿ ಬೆನ್ನಟ್ಟುವ ಮೂಲಕ 19.5 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 158 ರನ್ ಗಳಿಸಿ ಜಯದ ದಡ ಸೇರಿತು.
ಕೇವಲ 41 ಎಸೆತಗಳನ್ನು ಎದುರಿಸಿದ ಡಿವಿಲಿಯರ್ಸ್ (ಅ.89) ಅರ್ಧ ಶತಕದಲ್ಲಿ 8 ಸಿಕ್ಸರ್ ಮತ್ತು 6 ಬೌಂಡರಿಗಳು ಸೇರಿದ್ದವು. ಡಿವಿಲಿಯರ್ಸ್ ಹೊರತುಪಡಿಸಿದರೆ, ಬೆಂಗಳೂರು ಪರ ಎರಡಂಕಿ ದಾಟಿದ್ದು, ಕ್ರಿಸ್ ಗೇಯ್ಲ್ (27), ರೋಸೊ (14) ಹಾಗೂ ಯುವರಾಜ್ (14) ಮಾತ್ರ.
ತಿರುವು ನೀಡಿದ ಓವರ್: ಇನಿಂಗ್ಸ್‌ನ 19ನೇ ಓವರ್ ಆರ್‌ಸಿಬಿ ಗೆಲವಿಗೆ ತಿರುವು ನೀಡಿತು. ಈ ಓವರ್‌ನಲ್ಲಿ ಬೌಲಿಂಗ್ ಮಾಡಿದ ಡೇಯ್ಲ್ ಸ್ಟೇಯ್ನ್ ಅವರು ತಮ್ಮದೇ ದೇಶದ ಆರ್‌ಸಿಬಿ ಬ್ಯಾಟ್ಸ್‌ಮನ್ ಡಿವಿಲಿಯರ್ಸ್ ಅವರಿಗೆ 24 ರನ್ ನೀಡಿದರು. ಇದು ಹೈದರಾಬಾದ್ ಸೋಲಿಗೆ ಪ್ರಮುಖ ಕಾರಣವಾಗಿ ಪರಿಣಮಿಸಿತು. ಹೈದರಾಬಾದ್ ಪರ ಕರಣ್ ಶರ್ಮಾ 3 ವಿಕೆಟ್ ಕಬಳಿಸಿದರೆ, ಭುವನೇಶ್ವರ ಕುಮಾರ್ 2 ವಿಕೆಟ್ ಪಡೆದರು. ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಹೈದರಾಬಾದ್, ಡೇವಿಡ್ ವಾರ್ನರ್ ಸಿಡಿಸಿದ ಅರ್ಧಶತಕದ ನೆರವಿನೊಂದಿಗೆ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 155 ರನ್ ಕಲೆ ಹಾಕಿತ್ತು.
49 ಎಸೆತಗಳನ್ನು ಎದುರಿಸಿದ ವಾರ್ನರ್ ಅರ್ಧಶತಕದಲ್ಲಿ 3 ಸಿಕ್ಸರ್ ಮತ್ತು 4 ಬೌಂಡರಿಗಳು ಸೇರಿದ್ದವು. ನಾಯಕ ಶಿಖರ್ ಧವನ್ ಅವರೊಂದಿಗೆ ಉತ್ತಮ ಜತೆಯಾಟ ಪ್ರದರ್ಶಿಸಿದ ವಾರ್ನರ್ 3ನೇ ವಿಕೆಟ್‌ಗೆ 62 ರನ್ ಕಲೆ ಹಾಕಿದರು. ನಾಯಕ ಮತ್ತು ಆರಂಭಿಕ ಆಟಗಾರ ಶಿಖರ್ ಧವನ್ (37) ತಾಳ್ಮೆಯ ಬ್ಯಾಟಿಂಗ್ ಪ್ರದರ್ಶಿಸಿದರು.
ಮಿಚೆಲ್ ಸ್ಟಾರ್ಕ್ ಮತ್ತು ವರುಣ್ ಆರೋನ್ ತಲಾ 2 ವಿಕೆಟ್ ಕಬಳಿಸಿದರೆ, ಅಶೋಕ್ ದಿಂಡಾ ಮತ್ತು ಹರ್ಷಲ್ ಪಟೇಲ್ ತಲಾ 1 ವಿಕೆಟ್ ಪಡೆದರು.ಕಾರ್ಪೊರೇಟ್ ಗ್ಯಾಲರಿ ಖಾಲಿಖಾಲಿ: ಪಂದ್ಯದ ಸಂದರ್ಭ ಚಿನ್ನಸ್ವಾಮಿ ಅಂಗಣದ ಕಾರ್ಪೊರೇಟ್ ಗ್ಯಾಲರಿ ಮತ್ತು ಬೆಮೆಲ್ ಸ್ಟ್ಯಾಂಡ್‌ಗಳು ಖಾಲಿ ಇದ್ದದ್ದು ಕಂಡುಬಂದಿತು. ಐಪಿಎಲ್ ಟಿಕೆಟ್ ಬೆಲೆಯಲ್ಲಿ ಶೇ. 35ರಷ್ಟು ಹೆಚ್ಚಾಗಿರುವುದು, ಆರ್‌ಸಿಬಿ ಆಡಿರುವ ಪಂದ್ಯಗಳಲ್ಲಿ ಎರಡರಲ್ಲಿ ಮಾತ್ರ ಗೆದ್ದಿರುವುದು ಹಾಗೂ ಆತಿಥೇಯ ತಂಡದಲ್ಲಿ ಕರ್ನಾಟಕದ ಆಟಗಾರರು ಇಲ್ಲದಿರುವುದು ಈ ಗ್ಯಾಲರಿಗಳ ಟಿಕೆಟ್ ಮಾರಾಟವಾಗದಿರುವುದಕ್ಕೆ ಕಾರಣವಿರಬಹುದು ಎಂದು ಕೆಎಸ್‌ಸಿಎ ಮೂಲಗಳು ತಿಳಿಸಿವೆ.
ಆರ್‌ಸಿಬಿ 100ನೇ ಪಂದ್ಯ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಪಂದ್ಯದೊಂದಿಗೆ ಐಪಿಎಲ್‌ನಲ್ಲಿ 100ನೇ ಪಂದ್ಯವನ್ನಾಡಿತು. ಇದಕ್ಕೂ ಮುನ್ನ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಐಪಿಎಲ್‌ನಲ್ಲಿ 100 ಪಂದ್ಯಗಳನ್ನಾಡಿದ ತಂಡಗಳೆನಿಸಿವೆ. ಚೆನ್ನೈ 105 ಪಂದ್ಯಗಳನ್ನಾಡಿದರೆ, ಮುಂಬೈ ಇಂಡಿಯನ್ಸ್ 101 ಪಂದ್ಯಗಳನ್ನಾಡಿದೆ.
ಭಾರೀ ಬಿಗಿಭದ್ರತೆ: ಇತ್ತೀಚೆಗಷ್ಟೇ ಚೆನ್ನೈನಲ್ಲಿ ಬಾಂಬ್ ಸ್ಫೋಟಗೊಂಡ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಆರ್‌ಸಿಬಿ ಮತ್ತು ಹೈದರಾಬಾದ್ ತಂಡಗಳ ನಡುವೆ ನಡೆದ ಐಪಿಎಲ್ ಪಂದ್ಯಕ್ಕೆ ಭಾನುವಾರ ಭಾರೀ ಬಿಗಿಭದ್ರತೆ ಒದಗಿಸಲಾಗಿತ್ತು.
ಪಂದ್ಯವನ್ನು ವರದಿ ಮಾಡಲು ಬಂದ ಪತ್ರಕರ್ತರೂ ಕ್ರೀಡಾಂಗಣವನ್ನು ಸುಲಭವಾಗಿ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಪತ್ರಕರ್ತರು ತಂದಿದ್ದ ಲ್ಯಾಪ್‌ಟಾಪ್ ಮತ್ತು ಕ್ಯಾಮರಾಗಳನ್ನು ಕ್ರೀಡಾಂಗಣದೊಳಗೆ ತೆಗೆದುಕೊಂಡು ಹೋಗಲು ಪೊಲೀಸರು ನಿರಾಕರಿಸಿದರು. ಆದರೆ, ಕೆಎಸ್‌ಸಿಎ ಆಡಳಿತ ಮಂಡಳಿ ಮನವಿ ಮಾಡಿದ ನಂತರ ಪತ್ರಕರ್ತರಿಗೆ ಅವಕಾಶ ನೀಡಲಾಯಿತು.

ಸ್ಕೋರ್ ವಿವರ
ಸನ್‌ರೈಸರ್ಸ್ ಹೈದರಾಬಾದ್ 20
ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 155
ಎರಾನ್ ಫಿಂಚ್ ಸಿ ಪಾರ್ಥಿವ್ ಬಿ ಮಿಚೆಲ್ ಸ್ಟಾರ್ಕ್ 13 (8), ಶಿಖರ್ ಧವನ್ ಸಿ ಡಿವಿಲಿಯರ್ಸ್ ಬಿ ವರುಣ್ ಆರೋನ್ 37 (36), ಕೆ.ಎಲ್. ರಾಹುಲ್ ಸಿ ಗೇಯ್ಲ್ ಬಿ ದಿಂಡಾ 6(6), ಡೇವಿಡ್ ವಾರ್ನರ್ ಬಿ ಸ್ಟಾರ್ಕ್ 61 (49), ಡಾರೆನ್ ಸಾಮಿ ಸಿ ಸ್ಟಾರ್ಕ್ ಬಿ ಹರ್ಷಲ್ ಪಟೇಲ್ 8 (8), ನಮನ್ ಓಜಾ ಸಿ ಸ್ಟಾರ್ಕ್ ಬಿ ಆರೋನ್ 15 (11), ಇರ್ಫಾನ್ ಪಠಾಣ್ ಅಜೇಯ 4 (2), ಕರಣ್ ಶರ್ಮಾ ಅಜೇಯ 1 (1)
ಇತರೆ (ಲೆಗ್‌ಬೈ-3, ವೈಡ್-6, ನೋಬಾಲ್-1) 10
ವಿಕೆಟ್ ಪತನ- 1-20, 2-29, 3-91, 4-115, 5-149, 6-150.
ಬೌಲಿಂಗ್ ವಿವರ
ಅಶೋಕ್ ದಿಂಡಾ 4-0-39-1
ಮಿಚೆಲ್ ಸ್ಟಾರ್ಕ್ 4-0-21-2
ವರುಣ್ ಆರೋನ್ 4-0-33-2
ಹರ್ಷಲ್ ಪಟೇಲ್ 4-0-29-1 
ಯಜುವೇಂದ್ರ ಚಹಾಲ್ 4-0-30-0
ಆರ್‌ಸಿಬಿ 19.5 ಓವರ್‌ಗಳಲ್ಲಿ 6 ವಿಕೆಟ್‌ಗೆ 158 ರನ್
ಕ್ರಿಸ್ ಗೇಯ್ಲ್ ಸಿ ಸಾಮಿ ಕರಣ್ ಶರ್ಮಾ 27 (19), ಪಾರ್ಥೀವ್ ಪಟೇಲ್ ಬಿ ಭುವನೇಶ್ವರ 3 (5), ವಿರಾಟ್ ಕೊಹ್ಲಿ ಸಿ ಓಜಾ ಬಿ ಭುವನೇಶ್ವರ 0 (5)ರಿಲೀ ರೋಸೋ ಎಲ್ ಕರಣ್ ಶರ್ಮಾ 14 (23), ಡಿವಿಲಿಯರ್ಸ್ ಅಜೇಯ 89 (41), ಯುವರಾಜ್ ಸಿಂಗ್ ಸಿ ಸಬ್  (ಮೋಯ್ಸಿಸ್) ಕರಣ್ ಶರ್ಮಾ 14 (16)ಮಿಚೆಲ್ ಸ್ಟಾರ್ಕ್ ರನೌಟ್ (ಫಿಂಚ್) 5 (8), ಹರ್ಷಲ್ ಪಟೇಲ್ ಅಜೇಯ 1 (2)
ಇತರೆ (ಎಲ್‌ಬಿ-1, ವೈಡ್-4)
ವಿಕೆಟ್ ಪತನ: 1-5, 2-6, 3-38, 4-59, 5-95, 6-152.
ಬೌಲಿಂಗ್ ವಿವರ:
ಡೇಲ್ ಸ್ಟೇಯ್ನ್ 4-0-39-0
ಭುನೇಶ್ವರ 4-0-16-2
ಇಶಾಂತ್ ಶರ್ಮಾ 3-0-35-0
ಕರಣ್ ಶರ್ಮಾ 4-0-17-3
ಇರ್ಫಾನ್ ಫಠಾಣ್  2.5-0-25-0
ಡಾರೆನ್ ಸಾಮಿ 2-0-25-0


-ಮಲ್ಲಿಕಾರ್ಜುನ ಕರಿಯಪ್ಪನವರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.