ಕ್ರೀಡೆ

ನಮ್ಮಿಂದ ಜಯ ಕಸಿದ ಎಬಿಡಿ ಅದ್ಭುತ ಆಟ

Published On :

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ಎಬಿ ಡಿವಿಲಿಯರ್ಸ್ ಅವರ ಅದ್ಭುತ ಆಟ ನಮ್ಮಿಂದ ಜಯ ಕಸಿದುಕೊಂಡಿತು ಎಂದು ಸನ್‌ರೈಸರ್ಸ್ ಹೈದರಾಬಾದ್ ತಂಡದ ಮಾರ್ಗದರ್ಶಕ ವಿವಿಎಸ್. ಲಕ್ಷ್ಮಣ್ ಪ್ರತಿಕ್ರಿಯಿಸಿದ್ದಾರೆ.
ಆರ್‌ಸಿಬಿ ವಿರುದ್ಧ ಹೈದರಾಬಾದ್ ಸೋಲನುಭವಿಸಿದ್ದು ಭಾರಿ ನಿರಾಸೆಯಾಯಿತು. ಪಂದ್ಯದ ಬಹುತೇಕ ಆಟಗದಲ್ಲಿ ಹೈದರಾಬಾದ್ ಸನ್‌ರೈಸರ್ಸ್ ತಂಡವೇ ಪ್ರಭುತ್ವ ಸ್ಥಾಪಿಸಿತ್ತು. ಆದರೆ, ಒಬ್ಬ ಆಟಗಾರನಿಂದ ಹೊರಹೊಮ್ಮಿಂದ ವಿಶೇಷ ಇನಿಂಗ್ಸ್‌ವೊಂದು ನಮ್ಮ ಗೆಲುವನ್ನು ಕಿತ್ತುಕೊಂಡಿತು ಎಂದು ಲಕ್ಷ್ಮಣ್ ಪಂದ್ಯದ ಬಳಿಕ ಬೇಸರದಿಂದ ನುಡಿದರು. ಟಿ-20 ಮಾದರಿಯಲ್ಲಿ ಇದು ನಾನು ಕಂಡ ಅತ್ಯುತ್ತಮ ಇನಿಂಗ್ಸ್‌ಗಳಲ್ಲಿ ಎಬಿಡಿ ಆಟ ಒಂದಾಗಿದೆ ಎಂದೆನಿಸುತ್ತದೆ. ಒಂದೆಡೆ ವಿಕೆಟ್‌ಗಳು ಉರುಳುತ್ತಿದ್ದರೂ ಸಹ ಡಿವಿಲಿಯರ್ಸ್ ಉತ್ತಮ ಬ್ಯಾಟಿಂಗ್ ಕೌಶಲ ಮೆರೆಯುವಲ್ಲಿ ಯಶಸ್ವಿಯಾದರು ಎಂದು ಭಾರತ ತಂಡದ ಮಾಜಿ ಆಟಗಾರರೂ ಆಗಿರುವ ಲಕ್ಷ್ಮಣ್ ಹೇಳಿದ್ದಾರೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ನೀಡಿದ್ದ 156 ರನ್‌ಗಳ ಗುರಿಯನ್ನು ಬೆಂಬತ್ತಿದ್ದ ರಾಯಲ್ ಚಾಲೆಂಜರ್ಸ್ ಕೇವಲ 59 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸೋಲಿನ ದವಡೆಗೆ ಸಿಲುಕಿತ್ತು. ಆದರೆ, ಕೊನೆಯಲ್ಲಿ ಮನಬಂದಂತೆ ಸಿಡಿದ ದಕ್ಷಿಣ ಆಫ್ರಿಕಾದ ಡಿವಿಲಿಯರ್ಸ್ ಕೇವಲ 41 ಎಸೆತಗಳಲ್ಲಿ 6 ಬೌಂಡರಿ ಮತ್ತು 8 ಸಿಕ್ಸರ್ ಸೇರಿದಂತೆ ಅಜೇಯ 89 ರನ್ ಸಿಡಿಸಿ ಆರ್‌ಸಿಬಿಗೆ ಅಚ್ಚರಿಯ ಗೆಲವು ತಂದುಕೊಟ್ಟಿದ್ದರು. ಡಿವಿಲಿಯರ್ಸ್ ಅವರು ಇನಿಂಗ್ಸ್‌ನ 19ನೇ ಓವರ್ ಎಸೆದ ತಮ್ಮದೇ ದೇಶದ ಹಾಗೂ ವಿಶ್ವದ ನಂಬರ್ ಒನ್ ಬೌಲರ್ ಡೇಲ್ ಸ್ಟೇಯ್ನ್‌ಗೆ 3 ಸಿಕ್ಸರ್ ಮತ್ತು 1 ಬೌಂಡರಿ ಒಳಗೊಂಡಂತೆ ಒಟ್ಟು 24 ರನ್ ಚಚ್ಚುತ್ತಲೇ ಪಂದ್ಯದ ದಿಕ್ಕು ಬದಲಾಯಿತು. ಏಕೆಂದರೆ ಅಂತಿಮ 2 ಓವರುಗಳಲ್ಲಿ ಗೆಲ್ಲಲು 28 ರನ್‌ಗಳು ಬೇಕಿದ್ದರಿಂದ ಕೊನೆಯ ಓವರಿನಲ್ಲಿ ಬರೀ 4 ರನ್‌ಗಳನ್ನಷ್ಟೇ ಗಳಿಸುವ ಅವಕಾಶ ಆರ್‌ಸಿಬಿ ಮುಂದೆ ಇತ್ತು. ಹೈದರಾಬಾದ್ ತಂಡದ ಮಾರ್ಗದರ್ಶಕ ಪಾತ್ರ ಖುಷಿ ತಂದಿದೆ. ತಮ್ಮ ಅನುಭವವನ್ನು ಕ್ರಿಕೆಟಿಗರಿಗೆ ಧಾರೆಯರೆಯುವ ಉತ್ತಮ ವೇದಿಕೆ ತಮಗೆ ಲಭಿಸಿದೆ ಎಂದು ಹೇಳಿರುವ ಲಕ್ಷ್ಮಣ್, ಮುಂದಿನ ಪಂದ್ಯಗಳಲ್ಲಿ ಸನ್‌ರೈಸರ್ಸ್ ಮತ್ತೆ ಗೆಲವಿನ ಹಾದಿಗೆ ಮರಳುವ ವಿಶ್ವಾಸವಿದೆ ಎಂದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.