ಪಂಜಾಬ್ನ ಏಟು ಮರೆಯದ ಚೆನ್ನೈಗೆ ಸೇಡಿನ ತವಕ
ಕಟಕ್: ಅಬುಧಾಬಿಯಲ್ಲಿ ಆಡಲಾದ ಐಪಿಎಲ್ ಟೂರ್ನಿಯ ಮೊದಲ ಹಂತದ ಮೊದಲ ಸುತ್ತಿನ ಸೆಣಸಿನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಕೊಟ್ಟ ಏಟನ್ನು ಚೆನ್ನೈ ಸೂಪರ್ ಕಿಂಗ್ಸ್ ಮರೆತಿಲ್ಲ.
ಆ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮೊದಲು ಬ್ಯಾಟ್ ಮಾಡಿ 205 ರನ್ಗಳ ಬೃಹತ್ ಮೊತ್ತ ಪೇರಿಸಿದ್ದರೂ, ಪಂಜಾಬ್ನ ಸ್ಫೋಟಕ ಬ್ಯಾಟಿಂಗ್ನಿಂದಾಗಿ ಗೆಲುವನ್ನೇ ತಂದುಕೊಳ್ಳಲಾಗಲಿಲ್ಲ. ಗ್ಲೆನ್ ಮ್ಯಾಕ್ಸ್ವೆಲ್ರ ರನ್ ಹೊಳೆಯ ಮಧ್ಯೆ ಚೆನ್ನೈ ಕೊಚ್ಚಿ ಹೋಗಿತ್ತು.
ಆದರೀಗ, ಎರಡನೇ ಸುತ್ತಿನಲ್ಲಿ ಇದೇ ಪಂಜಾಬ್ನ್ನು ಎದುರಿಸಲಿರುವ ಚೆನ್ನೈ ಸೂಪರ್ ಕಿಂಗ್ಸ್ ಸೇಡು ತೀರಿಸಿಕೊಳ್ಳುವ ಉದ್ದೇಶ ಹೊಂದಿದೆ. ಪಂಜಾಬ್ನ್ನು ಸೆರೆಹಿಡಿಯಲು ಹೊಸ ಬಲೆ ಹೆಣೆದುಕೊಂಡಿದೆ. ಅದರಲ್ಲೂ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಅಪಾಯಕಾರಿ ಬ್ಯಾಟ್ಸ್ಮನ್ಗಳಾದ ಮ್ಯಾಕ್ಸ್ವೆಲ್ ಮತ್ತು ಡೇವಿಡ್ ಮಿಲ್ಲರ್ ಅವರನ್ನು ಬೇಗನೆ ಪೆವಿಲಿಯನ್ಗೆ ಕಳುಹಿಸದೇ ಗೆಲವು ನಿರೀಕ್ಷಿಸಲಾಗದು ಎಂಬುದನ್ನು ಚೆನ್ನಾಗಿ ಅರಿತಿರುವ ಚೆನ್ನೈ ಅದಕ್ಕಾಗಿ ಸೂಕ್ತ ರಣತಂತ್ರ ರೂಪಿಸಿಕೊಂಡಿದೆ.
ಬಾರಾಬತಿ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ನಡೆಯಲಿರುವ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳ ನಡುವಿನ ಕದನದಲ್ಲಿ ಅಭಿಮಾನಿಗಳು ರೋಚಕ ಕದನ ನಿರೀಕ್ಷಿಸಿದ್ದಾರೆ.
ಕಿಂಗ್ಸ್ ಪಂಜಾಬ್ ಕೂಡ ಚೆನ್ನೈ ಸೂಪರ್ ಕಿಂಗ್ಸ್ ಬಗ್ಗೆ ಹೆಚ್ಚು ಎಚ್ಚರಿಕೆಯಿಂದಲೇ ಇದೆ. ಸೋಮವಾರ ರಾತ್ರಿ ನಡೆದ ಪಂದ್ಯದಲ್ಲಿ ಡೆಲ್ಲಿ ಡೇರ್ಡೆವಿಲ್ಸ್ ವಿರುದ್ಧ ಚೆನ್ನೈ ಗುಡುಗಿದ್ದನ್ನು ನೋಡಿದರೆ, ಪಂಜಾಬ್ಗೆ ಅದು ಎಚ್ಚರಿಕೆ ಗಂಟೆಯಾಗಿದೆ.
ನಾಯಕ ಮಹೇಂದ್ರ ಸಿಂಗ್ ಧೋನಿ ಸಾರಥ್ಯದ ಚೆನ್ನೈ ಪಡೆ ಈಗ ಸತತ ಏಳನೇ ಗೆಲವಿನ ನಿರೀಕ್ಷೆಯಲ್ಲಿದೆ. ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಪಂಜಾಬ್ ಎದುರು ಸೋತಿದ್ದು ಬಿಟ್ಟರೆ, ನಂತರದ ಆರೂ ಪಂದ್ಯಗಳಲ್ಲಿ ರೋಚಕ ಗೆಲವು ದಾಖಲಿಸಿ ಮುನ್ನುಗ್ಗುತ್ತಿರುವ ಚೆನ್ನೈ ತಂಡದ ಆಟಗಾರರು ಹೆಚ್ಚು ಆತ್ಮವಿಶ್ವಾಸದಿಂದ ಬೀಗುತ್ತಿದ್ದಾರೆ. ಹಾಗಾಗಿ, ಚೆನ್ನೈ ಬಗ್ಗೆ ಪಂಜಾಬ್ ಎಚ್ಚರಿಕೆಯ ಹೆಜ್ಜೆ ಎನ್ನಿಡಬೇಕಿದೆ.
ಈ ಮಧ್ಯೆ ಪಂಜಾಬ್ ಸಹ ಇದುವರೆಗೆ ಅದ್ಭುತ ಪ್ರದರ್ಶನ ನೀಡಿದೆ. ಸತತ ಐದು ಪಂದ್ಯಗಳ್ನು ಗೆದ್ದುಕೊಂಡು ರಾಜಾರೋಷವಾಗಿ ಮುಂದೆ ಹೆಜ್ಜೆ ಹಾಕುತ್ತಿದ್ದ ಪಂಜಾಬ್ ಆಟಗಾರರು, ಕಳೆದ ಪಂದ್ಯದಲ್ಲಿ ಮುಂಬೈ ವಿರುದ್ಧ ಮೊದಲ ಸೋಲು ಉಂಡಿದ್ದರು. ಈ ಸೋಲಿನಿಂದ ಪಾಠ ಕಲಿತಿರುವ ಜಾರ್ಜ್ ಬೇಯ್ಲಿ ಸಾರಥ್ಯದ ಪಂಜಾಬ್ ಹುಡುಗರು ಮತ್ತೆ ಗೆಲವಿನ ಲಹರಿಗೆ ಮರಳಿದರೆ ಅಚ್ಚರಿಯೇನಿಲ್ಲ.
ಮ್ಯಾಕ್ಸ್ವೆಲ್ ಮತ್ತು ಮಿಲ್ಲರ್ ಜೊತೆಗೆ ವೀರೇಂದ್ರ ಸೆಹ್ವಾಗ್ ಮತ್ತು ನಾಯಕ ಬೇಯ್ಲಿ ಬ್ಯಾಟಿಂಗ್ನ ಶಕ್ತಿಯಾಗಿದ್ದಾರೆ. ಗುರಿ ಎಷ್ಟೇ ದೊಡ್ಡದಿದ್ದರೂ ಇವರ ಸಾಮರ್ಥ್ಯದಿಂದ ತಂಡ ಶಿಖರವನ್ನೂ ಏರಬಹುದು.
ಇನ್ನು ಬೌಲಿಂಗ್ನಲ್ಲಿ ಕೂಡ ಮಿಚೆಲ್ ಜಾನ್ಸನ್, ಬಾಲಾಜಿ, ಸಂದೀಪ್ ಶರ್ಮಾ, ಅಕ್ಷರ್ ಪಟೇಲ್, ರಿಷಿ ಧವನ್ ಉತ್ತಮ ದಾಳಿ ನಡೆಸಬಲ್ಲರು. ಹಾಗಾಗಿ, ಚೆನ್ನೈ ಮತ್ತು ಪಂಜಾಬ್ ನಡುವಿನ ಹೋರಾಟ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

