ಕ್ರೀಡೆ

ಮೋದಿ ಗೆಲವು, ಆರ್‌ಸಿಎ ವಜಾ

Published On :

ಜೈಪುರ: ಬಿಸಿಸಿಐಗೆ ಸೆಡ್ಡು ಹೊಡೆದು ನಿಂತ ಲಲಿತ್ ಮೋದಿ ರಾಜಸ್ಥಾನ ಕ್ರಿಕೆಟ್ ಸಂಸ್ಥೆಯ ಚುನಾವಣೆಯಲ್ಲಿ ಗೆಲವು ಸಾಧಿಸಿದ್ದಾರೆ. ಆದರೆ ಇದನ್ನು ನಿರಾಕರಿಸಿರುವ ಬಿಸಿಸಿಐ, ಆರ್‌ಸಿಎಯನ್ನು ವಜಾಗೊಳಿಸುವ ಮೂಲಕ ಮೋದಿಗೆ ತಿರುಗೇಟು ನೀಡುವ ಪ್ರಯತ್ನ ನಡೆಸಿದೆ. ಈ ಮೂಲಕ ಬಿಸಿಸಿಐ ಹಾಗೂ ಆರ್‌ಸಿಎ ನಡುವಣ ಹಗ್ಗ ಜಗ್ಗಾಟ ಮತ್ತಷ್ಟು ಜಟಿಲವಾಗಿ ಪರಿಣಮಿಸಿದೆ.  ಆರ್‌ಸಿಎ ಚುನಾವಣೆಯಲ್ಲಿ ಮೊದಿಯ ಸ್ಪರ್ಧೆಯನ್ನು ಬಿಸಿಸಿಐ ಪ್ರಶ್ನಿಸಿತ್ತು. ಆನಂತರ ಈ ವಿಷಯ ಸುಪ್ರೀಂ ಕೋರ್ಟ್ ಮೆಟ್ಟಿಲೆರಿತ್ತು. ನಂತರ ಸುಪ್ರೀಂ ಕೋರ್ಟ್ ಮೋದಿ ಸ್ಪರ್ಧೆಗೆ ಅವಕಾಶ ನೀಡಿ ನಿವೃತ್ತ ನ್ಯಾಯಮೂರ್ತಿ ಎನ್.ಎಮ್ ಕಸ್ಲಿವಾಲ್ ಅವರನ್ನು ಚುನಾವಣೆಯ ವೀಕ್ಷಕರನ್ನಾಗಿ ನೇಮಿಸಿ ಡಿಸೆಂಬರ್ 19ರಂದು ಚುನಾವಣೆ ನಡೆಸಲಾಗಿತ್ತು. ಹಾಗಾಗಿ ಸತತ ಹಲವು ತಿಂಗಳಿನಿಂದ ಲಕೋಟೆಯಲ್ಲಿ ಮುಚ್ಚಿಡಲಾಗಿದ್ದ ಫಲಿತಾಂಶವನ್ನು ಮಂಗಳವಾರ ಸುಪ್ರೀಂ ಕೋರ್ಟ್ ರಾಜಸ್ಥಾನ ಕ್ರಿಕೆಟ್ ಸಂಸ್ಥೆ ಚುನಾವಣೆಯ ಫಲಿತಾಂಶವನ್ನು ಬೆಳಕಿಗೆ ತಂದಿತು. ನಿರೀಕ್ಷೆಯಂತೆ ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿ 24-5 ಅಂತರದಲ್ಲಿ ಗೆಲವು ದಾಖಲಿಸಿದ್ದಾರೆ.
ಈ ಫಲಿತಾಂಶ ಹೊರಬೀಳುತ್ತಿದ್ದಂತೆ ಬಿಸಿಸಿಐ ಈ ನಿರ್ಧಾರವನ್ನು ನಿರಾಕರಿಸಿದ್ದು, ಆರ್‌ಸಿಎಯನ್ನು ತನ್ನ ವ್ಯಾಪ್ತಿಯಿಂದ ವಜಾಗೊಳಿಸಿದೆ. ಹಾಗಾಗಿ ಮತ್ತೊಂದು ಕಾನೂನು ಸಮರ ನಡೆಸಲು ವೇದಿಕೆ ಸೃಷ್ಠಿಯಾಗಿದೆ.
ಆರ್‌ಸಿಎನ ಒಟ್ಟು 33 ಮತಗಳಲ್ಲಿ ಲಲಿತ್ ಮೋದಿ ವಿರುದ್ಧದ ಅಭ್ಯರ್ಥಿ ರಾಮ್‌ಪಾಲ್ ಶರ್ಮಾ ಕೇವಲ 5 ಮತಗಳನ್ನು ಪಡೆಯುವ ಮೂಲಕ ತೀವ್ರ ಹಿನ್ನಡೆ ಅನುಭವಿಸಿದ್ದಾರೆ.
ಈ ಚುನಾವಣೆಯಲ್ಲಿ ಲಲಿತ್ ಮೊದಿಯವರು ಅಧ್ಯಕ್ಷರಾಗಿ ಆಯ್ಕೆಯಾದರೆ, ಸೋಮೆಂದ್ರ ತಿವಾರಿ ಕಾರ್ಯದರ್ಶಿಯಾಗಿ, ಪವನ್ ಗೋಯಲ್ ಅವರು ಖಜಾಂಚಿಯಾಗಿ ಆಯ್ಕೆಯಾಗಿದ್ದಾರೆ. ಇನ್ನು ಮೊದಿಯವರ ಆಪ್ತ ಕಾನೂನು ಸಲಹೆಗಾರರಾಗಿರುವ ಮೊಹಮೂದ್ ಅಬ್ದಿ ಸಂಸ್ಥೆಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಈ ಹಿನ್ನಡೆಯನ್ನು ಅನುಭವಿಸಿದ ನಂತರ ಬಿಸಿಸಿಐ ಆರ್‌ಸಿಎಯನ್ನೇ ವಜಾಗೊಳಿಸುವ ನಿರ್ಧಾರ ತೆಗೆದುಕೊಂಡಿದ್ದು, ಅಡ್-ಆಕ್ ಸಮಿತಿಯನ್ನು ರಚಿಸಲು ನಿರ್ಧರಿಸಿದೆ. ಬಿಸಿಸಿಐ ಆರ್‌ಸಿಎನ ಸಹ ಸಂಸ್ಥೆಗಳ ಜತೆಗಿನ ವ್ಯವಹಾರವನ್ನು ಮುಂದುವರಿಸಲು ಈ ನಿರ್ಧಾರ ತೆಗೆದುಕೊಂಡಿದೆ.
ಐಪಿಎಲ್‌ನಲ್ಲಿ ಭಾರಿ ಪ್ರಮಾಣದ ಹಣಕಾಸಿನ ಅವ್ಯವಹಾರ ನಡೆಸಿದ ಹಿನ್ನೆಲೆಯಲ್ಲಿ ಬಿಸಿಸಿಐ ಲಲಿತ್ ಮೋದಿ ಅವರನ್ನು ತನ್ನ ವ್ಯಾಪ್ತಿಯಿಂದ ನಿಷೇಧಗೊಳಿಸಿತ್ತು. ಹಾಗಾಗಿ ಮತ್ತೆ ಬಿಸಿಸಿಐಗೆ ಮರಳುವ ಉದ್ದೇಶದೊಂದಿಗೆ ಲಲಿತ್ ಮೋದಿ ರಾಜಸ್ಥಾನ ಕ್ರಿಕೆಟ್ ಸಂಸ್ಥೆ ಚುನಾವಣೆಗೆ ಸ್ಪರ್ಧಿಸಿದ್ದರು. ಈ ಸ್ಪರ್ಧೆಯನ್ನು ಬಿಸಿಸಿಐ ಪ್ರಶ್ನಿಸುವ ಮೂಲಕ ಈ ಹಗ್ಗ ಜಗ್ಗಾಟ ಸುಪ್ರೀಂ ಕೋರ್ಟ್ ಅಂಗಳಕ್ಕೆ ಸಾಗಿತ್ತು.
ಬಿಸಿಸಿಐಗೆ ಮರಳಲು ಮೊದಲ ಮೆಟ್ಟಿಲು: ಲಲಿತ್ ಮೋದಿ
ಬಿಸಿಸಿಐ ವಿರುದ್ಧ ತೊಡೆ ತಟ್ಟಿ ರಾಜಸ್ಥಾನ ಕ್ರಿಕೆಟ್ ಸಂಸ್ಥೆಯ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿರುವ ಐಪಿಎಲ್‌ನ ಮಾಜಿ ಮುಖ್ಯಸ್ಥ ಲಲಿತ್ ಮೋದಿ, ತಾವು ಮತ್ತೆ ಬಿಸಿಸಿಐಗೆ ಮರಳಲು ಇದು ಮೊದಲ ಹೆಜ್ಜೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಇದು ಅತ್ಯಂತ ದೊಡ್ಡ ಗೆಲವು. ಆರ್‌ಸಿಎ ಸೌಲಭ್ಯ ವಂಚಿತವಾಗಿದ್ದು, ನಾನು ಕಳೆದ ನಾಲ್ಕು ವರ್ಷಗಳಿಂದ ಹೋರಾಟ ನಡೆಸಿ ಮತ್ತೆ ಆರ್‌ಸಿಎಗೆ ಮರಳಲು ಪ್ರಯತ್ನಿಸಿದ್ದೇನೆ ಎಂದು ತಿಳಿಸಿದ್ದಾರೆ.
ಈ ಗೆಲವು ಬಿಸಿಸಿಐಗೆ ಮರಳಲು ಹಾದಿ ಮಾಡಿಕೊಡುವುದೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಮೋದಿ, ಈ ಅಂಶವನ್ನು ನಿರಾಕರಿಸುವಂತಿಲ್ಲ. ನಾವು ಕ್ರಿಕೆಟ್ ಅನ್ನು ಶುದ್ಧಿಕರಿಸಬೇಕಿದೆ. ಈ ನಿಟ್ಟಿನಲ್ಲಿ ಐಪಿಎಲ್ ವಿಷಯದಲ್ಲಿ ಸುಪ್ರೀಂ ಕೋರ್ಟ್ ನ್ಯಾ. ಮುದ್ಗಲ್ ಸಮಿತಿ ನೇಮಿಸುವ ಮೂಲಕ ಪ್ರಮುಖ ನಿರ್ಧಾರ ತೆಗೆದುಕೊಂಡಿದೆ ಎಂದು ತಿಳಿಸಿದರು.
ಬಿಸಿಸಿಐ ಆರ್‌ಸಿಎಯನ್ನು ವಜಾಗೊಳಿಸಿರುವ ನಿರ್ಧಾರ ಕೇಳಿ ಆಘಾತವಾಗಿದೆ. ಇದು ಬಿಸಿಸಿಐನಿಂದ ಕಟುವಾದ ನಿಲುವು. ಕೇವಲ ಒಬ್ಬ ವ್ಯಕ್ತಿಯಿಂದಾಗಿ ಇಡೀ ಸಂಸ್ಥೆಯನ್ನೇ ವಜಾಗೊಳಿಸುವುದು ಬೇಸರದ ಸಂಗತಿ. ಶಿವಲಾಲ್‌ಅವರು ಸಂಸ್ಥೆಯ ಮೇಲೆ ಕಾಳಜಿ ಹಾಗೂ ನ್ಯಾಯಾಂಗಕ್ಕೆ ಗೌರವ ತೋರುವ ವಿಶ್ವಾಸವಿದೆ.
- ಶರದ್ ಪವಾರ್, ಬಿಸಿಸಿಐ ಮಾಜಿ ಅಧ್ಯಕ್ಷ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.