ಮಚ್ಚಾರಂಡ, ಮಂಡೇಪಂಡ ಮುನ್ನಡೆ
ವಿರಾಜಪೇಟೆ: ಇಲ್ಲಿ ನಡೆಯುತ್ತಿರುವ ತಾತಂಡ ಕೊಡವ ಕಪ್ ಹಾಕಿ ಉತ್ಸವ 16ನೇ ದಿನವಾದ ಬುಧವಾರ ಒಟ್ಟು ಆರು ತಂಡಗಳು ಎದುರಾಳಿ ತಂಡಗಳನ್ನು ಮಣಿಸಿ ಮುಂದಿನ ಹಂತಕ್ಕೆ ಪ್ರವೇಶಿಸಿದವು. ಪ್ರತಿಕ್ಷಣವೂ ಪ್ರೇಕ್ಷಕರಿಗೆ ಹಾಕಿ ರಸದೌತಣ ಬಡಿಸಿದ ಬಲಿಷ್ಠ ನೆಲಮಕ್ಕಡ ತನ್ನ ಗೆಲುವಿನ ಓಟ ಮುಂದುವರಿಸಿದ್ದರೆ, ತಂಡದ ಮಂಜು ನಾಲ್ಕು ಗೋಲು ಬಾರಿಸುವುದರೊಂದಿಗೆ ಪಂದ್ಯಕ್ಕೆ ಮಿಂಚಿನ ಸಂಚಲನ ತಂದುಕೊಟ್ಟರು.
ಮೊದಲನೇ ಪಂದ್ಯದಲ್ಲಿ ಚೇಂದಂಡ ತಂಡ ಬಲಿಷ್ಠ ಪೆಮ್ಮಂಡ ತಂಡವನ್ನು 2-0 ಗೋಲುಗಳ ಅಂತರದಿಂದ ಕೆಡವಿತು. ಚೇಂದಂಡ ತಂಡದ ಪರವಾಗಿ ರೋಶನ್ ಮತ್ತು ಬೋಪಣ್ಣನವರು ತಲಾ 1 ಗೋಲು ದಾಖಲಿಸಿದರು. ಚೇಂದಂಡ ತಂಡದ ಎದುರು ಪೆಮ್ಮಂಡ ತಂಡದ ಆಟಗಾರರು ಯಾವುದೇ ಪ್ರತಿರೋಧ ತೋರಲಿಲ್ಲ.
ಎರಡನೇ ಪಂದ್ಯದಲ್ಲಿ ಮಚ್ಚಾರಂಡ ತಂಡ ಮೇಚಿಯಂಡ ತಂಡವನ್ನು 4-0 ಗೋಲುಗಳಿದ ಭರ್ಜರಿಯಾಗಿ ಮಣಿಸಿತು. ಮಚ್ಚಾರಂಡ ತಂಡದ ಪರವಾಗಿ ಕರುಂಬಯ್ಯ ಮತ್ತು ತಮ್ಮಯ್ಯ ತಲಾ 1 ಗೋಲು ದಾಖಲಿಸಿದರೆ, ಅಪ್ಪಣ್ಣ 2 ಗೋಲು ದಾಖಲಿಸಿ ಜಯದ ರೂವಾರಿಯೆನ್ನಿಸಿಕೊಂಡರು.
3ನೇ ಪಂದ್ಯದಲ್ಲಿ ಬಲಿಷ್ಠ ಮಂಡೇಪಂಡ ತಂಡ ಕುಂಡ್ಯೋಳಂಡ ತಂಡವನ್ನು 3-1 ಗೋಲುಗಳಿಂದ ಪರಾಭವಗೊಳಿಸಿತು. ಮಂಡೇಪಂಡ ತಂಡದ ಪರವಾಗಿ ಬೋಪಣ್ಣ ಒಂದು ಗೋಲು ದಾಖಲಿಸಿದರೆ, ಸಾಜನ್ 2 ಗೋಲು ದಾಖಲಿಸಿ ತಂಡಕ್ಕೆ ಜಯ ತಂದುಕೊಟ್ಟರು. ಕುಂಡ್ಯೋಳಂಡ ತಂಡದ ಪರವಾಗಿ ದೇವಯ್ಯ 1 ಗೋಲು ದಾಖಲಿಸಿ ತಂಡದ ಸೋಲಿನ ಅಂತರವನ್ನು ಕುಗ್ಗಿಸಲು ನೆರವಾದರು.
ಮಂಜು ಮಿಂಚು: ನಾಲ್ಕನೇ ಪಂದ್ಯದಲ್ಲಿ ನೆಲಮಕ್ಕಡ ತಂಡ ಓಡಿಯಂಡ ತಂಡವನ್ನು 6-0 ಗೋಲುಗಳಿಂದ ಭರ್ಜರಿಯಾಗಿ ಸೋಲಿಸಿತು. ನೆಲಮಕ್ಕಡ ತಂಡದ ಪರವಾಗಿ ಮಂಜು ನಾಲ್ಕು ಗೋಲು ಬಾರಿಸುವುದರ ಮೂಲಕ ಪ್ರೇಕ್ಷಕರ ಕಣ್ಮಣಿಯಾದರು. ಉಳಿದೆರಡು ಗೋಲುಗಳನ್ನು ಶಾಜಿ ಮತ್ತು ರಾಹುಲ್ ಪಾಲಾಯಿತು. ಉತ್ತಮ ಆಟಗಾರರನ್ನು ಒಳಗೊಂಡ ಓಡಿಯಂಡ ತಂಡದ ಆಟಗಾರರು ಬುಧವಾರ ಮೈದಾನದಲ್ಲಿ ಉತ್ತಮ ತಾಳಮೇಳ ಪ್ರದರ್ಶಿಸುವಲ್ಲಿ ವಿಫಲರಾಗಿ ನೆಲಮಕ್ಕಡ ತಂಡದ ವಿರುದ್ಧ ಸೋಲೊಪ್ಪಿಕೊಳ್ಳಬೇಕಾಯಿತು. ಐದನೇ ಪಂದ್ಯದಲ್ಲಿ ಬಲಿಷ್ಠ ತಂಡವಾಗ ಮುಕ್ಕಾಟಿರ(ಬೇತ್ರಿ) ತಂಡ ತೀತಮಾಡ ತಂಡದ ಎದುರು 0-2 ಗೋಲುಗಳಿಂದ ಶರಣಾಯಿತು. ತೀತಮಾಡ ತಂಡದ ಪರವಾಗಿ ಕುಶಾಲಪ್ಪ ಮತ್ತು ಆತಿಕ್ ತಲಾ ಒಂದು ಗೋಲು ದಾಖಲಿಸಿ ಜಯ ತಂದುಕೊಟ್ಟರು.
ಮೇ 6ರಂದು ಕಾರಣಾಂತರದಿಂದ ಮುಂದೂಡಲ್ಪಟ್ಟಿದ್ದ ಚೇಂದಿರ ಮತ್ತು ಬೇಪಾಡಿಯಂಡ ತಂಡಗಳ ನಡುವಿನ ಪಂದ್ಯದಲ್ಲಿ ಚೇಂದಿರ ತಂಡ 4-2 ಗೋಲುಗಳಿಂದ ಜಯಭೇರಿ ಬಾರಿಸಿತು.
ಎರಡೂ ತಂಡದ ಆಟಗಾರರು ಮೈದಾನದಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಕೊನೆಯಲ್ಲಿ ವಿಜಯಲಕ್ಷ್ಮೀ ಚೇಂದಿರ ತಂಡದ ಕಡೆ ಒಲಿದಳು. ಚೇಂದಿರ ತಂಡದ ಪರವಾಗಿ ವಿನು, ರೋಶನ್, ಪ್ರೀತಂ, ಪುನೀತ್ ತಲಾ 1 ಗೋಲು ದಾಖಲಿಸಿದರು. ಬೇಪಾಡಿಯಂಡ ತಂಡದ ಪರವಾಗಿ ಪೊನ್ನಣ್ಣ ಉತ್ತಮ ಆಟ ಪ್ರದರ್ಶಿಸಿ 2 ಗೋಲು ಬಾರಿಸಿದರೂ ತಂಡದ ಸೋಲನ್ನು ತಪ್ಪಿಸಲಾಗಲಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

