ಸನ್ರೈಸರ್ಸ್ಗೆ ರಾಜಸ್ಥಾನ ರಾಯಲ್ಸ್ ಚಿಂತೆ

ಅಹ್ಮದಾಬಾದ್: ರಾಜಸ್ಥಾನ ರಾಯಲ್ಸ್ ತಂಡ ಪ್ರಸಕ್ತ ಏಳನೇ ಐಪಿಎಲ್ ಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಸದ್ಯ ಉತ್ತಮ ಸ್ಥಿತಿಯಲ್ಲಿದ್ದು, ತನ್ನ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳುವ ಉದ್ದೇಶದೊಂದಿಗೆ ಮುಂದಿನ ಹೋರಾಟಕ್ಕೆ ಸಜ್ಜಾಗಿ ನಿಂತಿದೆ.
ಇನ್ನೊಂದೆಡೆ, ಅಸ್ಥಿರ ಪ್ರದರ್ಶನದ ಮೂಲಕ ಸಂಕಷ್ಟದ ಪರಿಸ್ಥಿತಿಗೆ ಸಿಲುಕಿರುವ ಸನ್ರೈಸರ್ಸ್ ಹೈದರಾಬಾದ್ ತಂಡದ ಆಟಗಾರರು ಹೇಗಾದರೂ ಮಾಡಿ ಮುಂದಿನ ಪಂದ್ಯದಲ್ಲಿ ಮತ್ತೆ ಗೆಲವಿನ ಲಹರಿಗೆ ಮರಳಿ, ಸೆಮಿಫೈನಲ್ ಹಾದಿಗೆ ಹೋರಾಟ ನಡೆಸಬೇಕೆನ್ನುವ ಲೆಕ್ಕಾಚಾರ ಹೊಂದಿದೆ.
ರಾಜಸ್ಥಾನ ರಾಯಲ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡಗಳ ಆಟಗಾರರು ಮೊಟೆರಾದ ಸರ್ದಾರ್ ಪಟೇಲ್ ಕ್ರೀಡಾಂಗಣದಲ್ಲಿ ಗುರುವಾರ ಪರಸ್ಪರ ಮುಖಾಮುಖಿಯಾಗಲಿದ್ದು, ತಮ್ಮ ಎದುರಾಳಿಗಳ್ನು ಸೆರೆ ಹಿಡಿಯಲು ಹೊಸ-ಹೊಸ ಯೋಜನೆಗಳೊಂದಿಗೆ ಅಖಾಡದಲ್ಲಿ ಹೋರಾಟಕ್ಕೆ ನಿಂತಿವೆ.
ಇದೇ ಅಂಕಣದಲ್ಲಿ ನಡೆದ ತನ್ನ ಕಳೆದ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ ತಂಡ 10 ರನ್ಗಳಿಂದ ಅಚ್ಚರಿಯ ಗೆಲವು ದಾಖಲಿಸಿತ್ತು. ಪ್ರಾರಂಭದಲ್ಲಿ ಗೆಲ್ಲುವ ಆಸೆಯನ್ನೇ ಕೈಬಿಟ್ಟಂತಿದ್ದ ರಾಜಸ್ಥಾನ ತಂಡ ಕೇವಲ 2 ರನ್ಗಳ ಅಂತರದಲ್ಲಿ ಅದೂ ಬರೀ 8 ಎಸೆತಗಳಲ್ಲೇ ಎದುರಾಳಿಯ 6 ವಿಕೆಟ್ಗಳನ್ನು ಕಬಳಿಸಿ ನಂಬಲರ್ಹ ಗೆಲವು ತನ್ನದಾಗಿಸಿಕೊಂಡಂತಾಗಿತ್ತು.
ಈ ಪಂದ್ಯದಲ್ಲಿ ಪ್ರವೀಣ್ ತಾಂಬೆ ಹ್ಯಾಟ್ರಿಕ್ ಹಾಗೂ ನಾಯಕ ಶೇನ್ ವ್ಯಾಟ್ಸನ್ ಓವರ್ ಹ್ಯಾಟ್ರಿಕ್ ಸಾಧನೆ ಮಾಡುವ ಮೂಲಕ ಆಟಕ್ಕೆ ನಾಟಕೀಯ ತಿರುವು ನೀಡಿದ್ದರು.
ರಾಜಸ್ಥಾನ ತಂಡ ಪ್ರತಿಭಾನ್ವಿತ ಬ್ಯಾಟ್ಸ್ಮನ್ಗಳು ಮತ್ತು ಭರವಸೆಯ ಬೌಲರ್ಗಳನ್ನು ಒಳಗೊಂಡಿದೆ. ಯುವಕ ಕರುಣ್ ನಾಯರ ಮತ್ತು ಅಜಿಂಕ್ಯಾ ರಹಾನೆ ಹಾಗೂ ಮಧ್ಯಮ ಹಂತದಲ್ಲಿ ಸಂಜು ಸ್ಯಾಮ್ಸನ್ ಮತ್ತು ಸ್ಟೀವನ್ ಸ್ಮಿತ್ ಉತ್ತಮ ಬ್ಯಾಟ್ಸ್ಮನ್ಗಳಾಗಿದ್ದಾರೆ. ಇನ್ನು ವ್ಯಾಟ್ಸನ್ ಅವರು ಬ್ಯಾಟಿಂಗ್ ಮತ್ತು ಬೌಲಿಂಗ್ಗಳೆರಡರಲ್ಲೂ ಎಂದಿನ ತಮ್ಮ ಕರಾಮತ್ತು ಪ್ರದರ್ಶಿಸುವಲ್ಲಿ ಯಶಸ್ವಿಯಾಗುತ್ತಿರುವುದು ರಾಜಸ್ಥಾನದ ಪಾಲಿಗೆ ದೊಡ್ಡ ಶಕ್ತಿಯಾಗಿದೆ.
ಇನ್ನು ಕಳೆದ ಪಂದ್ಯದ ಮೂಲಕ ಹೊಸ ಆಶಾಕಿರಣ ಮೂಡಿಸಿದ 42ರ ಲೆಗ್ ಸ್ಪಿನ್ನರ್ ಪ್ರವೀಣ್ ತಾಂಬೆ ಹೊರತಾಗಿ ಟಿಮ್ ಸೌಥಿ ಮತ್ತು ಜೇಮ್ಸ್ ಫಾಕ್ನರ್ ಅವರು ರಾಜಸ್ಥಾನ ತಂಡದಲ್ಲಿನ ಮತ್ತಿಬ್ಬರು ತಜ್ಞ ಬೌಲರ್ಗಳಾಗಿದ್ದಾರೆ.
ಆದರೆ, ಸನ್ರೈಸರ್ಸ್ ಪಡೆ ಉತ್ತಮ ಆಟಗಾರರನ್ನು ಹೊಂದಿದ್ದರೂ ಗಮನ ಸೆಳೆಯುತ್ತಿಲ್ಲ. ಆಟದ ಎಲ್ಲಾ ವಿಭಾಗಗಳಲ್ಲೂ ತಂಡ ಅಸ್ಥಿರ ಪ್ರದರ್ಶನ ನೀಡುತ್ತಿದೆ. ತಂಡದ ನೀರಸ ಪ್ರದರ್ಶನದಿಂದ ನಾಯಕ ಶಿಖರ್ ಧವನ್ ತೀವ್ರ ನೊಂದುಕೊಂಡಿದ್ದಾರೆ. ಆರಂಭಿಕರಾದ ಧವನ್ ಹಾಗೂ ಆರೋನ್ ಫಿಂಚ್ ವಿಫಲರಾಗುತ್ತಿರುವುದರಿಂದ ತಂಡ ಆರಂಭದಿಂದಲೇ ಸಂಕಷ್ಟಕ್ಕೆ ಗುರಿಯಾಗುತ್ತ ನಡೆದಿದೆ. ಮಧ್ಯಮ ಹಂತದಲ್ಲಿ ಕೂಡ ಒತ್ತಡವನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಯಶಸ್ಸು ಕಾಣುತ್ತಿಲ್ಲ.
ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಉತ್ತಮ ರೀತಿಯಲ್ಲಿ ಬ್ಯಾಟಿಂಗ್ ಸದ್ದು ಮಾಡುತ್ತಿದ್ದರೂ ಸಹ ಉಳಿದವರಿಂದ ಅವರಿಗೆ ಬೆಂಬಲ ಇಲ್ಲವಾಗಿದೆ. ಇನ್ನು ಆಲ್ರೌಂಡರ್ ಡಾರೆನ್ ಸಾಮಿ ಕೂಡ ಬೇಷ್ ಎನ್ನುವಂತಹ ಪ್ರದರ್ಶನ ನೀಡುತ್ತಿಲ್ಲ.
ಬೆಂಗಳೂರಿನಲ್ಲಿ ನಡೆದ ತನ್ನ ಕಳೆದ ಪಂದ್ಯವನ್ನು ಸನ್ರೈಸರ್ಸ್ ತಂಡ ಗೆದ್ದುಕೊಳ್ಳುವ ಉತ್ತಮ ಅವಕಾಶ ಹೊಂದಿತ್ತು. ಆರ್ಸಿಬಿ ತಂಡಕ್ಕೆ ಅಂತಿಮ 2 ಓವರುಗಳಲ್ಲಿ 24 ರನ್ಗಳು ಬೇಕಿದ್ದಾಗ ವಿಶ್ವದ ನಂಬರ್ ಒನ್ ಬೌಲರ್ ದಕ್ಷಿಣ ಆಫ್ರಿಕಾದ ಡೇಲ್ ಸ್ಟೇಯ್ನ್ ದಾಳಿಗಿಳಿದರು. ಸ್ಟೇಯ್ನ್ರನ್ನು ದಂಡಿಸುವುದು ಯಾವುದೇ ದಾಂಡಿಗನಿಗೂ ಕಷ್ಟದ ಕೆಲಸ. ಹಾಗಾಗಿ, ಗೆಲವು ಹೈದರಾಬಾದ್ ತಂಡಕ್ಕೆ ಬಹುತೇಕ ಖಚಿತ ಎಂದೇ ಎಲ್ಲರೂ ಭಾವಿಸಿದ್ದರು.
ಆದರೆ, ದಕ್ಷಿಣ ಆಫ್ರಿಕಾದವರೇ ಆದ ಎಬಿ ಡಿವಿಲಿಯರ್ಸ್ ಕ್ರೀಸ್ನಲ್ಲಿದ್ದುದರಿಂದ ಸನ್ರೈಸರ್ಸ್ ಆಟಗಾರರಲ್ಲಿ ಸ್ವಲ್ಪ ಅಂಜಿಕೆಯೂ ಇತ್ತು. ಆದರೆ, ಸ್ಟೇಯ್ನ್ ಎಸೆದ 19ನೇ ಓವರಿನಲ್ಲಿ ಡಿವಿಲಿಯರ್ಸ್ 24 ರನ್ ಚಚ್ಚುವ ಮೂಲಕ ಹೈದರಾಬಾದ್ನಿಂದ ಗೆಲವು ಕಸಿದುಕೊಂಡರು.
ಆದರೂ ಸಹ ಸ್ಟೇಯ್ನ್ ಅಲ್ಲದೆ ಭುವನೇಶ್ವರ್ ಕುಮಾರ್ ಮತ್ತು ಇಶಾಂತ್ ಶರ್ಮಾ ಹಾಗೂ ಸಾಮಿ ಮತ್ತು ಇರ್ಫಾನ್ ಪಠಾಣ್ರಂತಹ ಅಂತಾರಾಷ್ಟ್ರೀಯ ಅನುಭವಿ ದಾಳಿಕಾರರು ತಂಡದಲ್ಲಿರುವದರಿಂದ ಸನ್ರೈಸರ್ಸ್ ಪಡೆಯನ್ನು ರಾಯಲ್ಸ್ ಹಗುರವಾಗಿ ಕಾಣಲು ಸಾಧ್ಯವಿಲ್ಲ. ಇನ್ನು ಯುವ ಸ್ಪಿನ್ನರ್ ಕರಣ್ ಶರ್ಮಾ ಕೂಡ ಉತ್ತಮ ರೀತಿಯಲ್ಲಿ ಜವಾಬ್ದಾರಿ ಹೊರುತ್ತಿದ್ದಾರೆ.
ಹಾಗಾಗಿ, ರಾಜಸ್ಥಾನ ರಾಯಲ್ಸ್ ವಿರುದ್ಧ ಸನ್ರೈಸರ್ಸ್ ಹೈದರಾಬಾದ್ ಆಟಗಾರರು ಕಠಿಣ ಸವಾಲು ನಿಲ್ಲಿಸಬಲ್ಲದು. ಹಾಗೆಯೇ ರಾಜಸ್ಥಾನ ಕೂಡ ಹೈದರಾಬಾದ್ಗೆ ಕಠಿಣ ಎದುರಾಳಿಯೇ ಆಗಿರುವುದರಿಂದ ವಿಜಯಲಕ್ಷ್ಮಿ ಒಲಿಸಿಕೊಳ್ಳುವುದು ಎರಡೂ ತಂಡಗಳ ಆಟಗಾರರಿಗೆ ಸುಲಭವಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


