ಅವಧಿ ಮೂರು... ಸಾಧನೆ ನೂರಾರು

ಮೈಲಾರಲಿಂಗ ದಿಂಡಲಕೊಪ್ಪ
ಬೆಂಗಳೂರು: ಕರ್ನಾಟಕ ರಾಜ್ಯ ಒಲಿಂಪಿಕ್ಸ್ ಸಂಸ್ಥೆಗೆ (ಕೆಒಎ) ಮೇ 18ರಂದು ಚುನಾವಣೆ ನಡೆಯಲಿದೆ. ಹಾಲಿ ಆಡಳಿತದ ಅವಧಿ ಬರುವ ಮೇ 26ಕ್ಕೆ ಕೊನೆಗೊಳ್ಳಲಿದೆ. ಪ್ರಸ್ತುತ ಕೆಒಎ ಅಧ್ಯಕ್ಷರಾಗಿರುವ ಕೆ. ಗೋವಿಂದರಾಜ್ ಸತತ ಮೂರನೇ ಅವಧಿ ಪೂರೈಸಿದ್ದು, ಮತ್ತೊಂದು ಅವಧಿಗೆ ಚುಕ್ಕಾಣಿ ಹಿಡಿಯಲು ಬಯಸಿದ್ದಾರೆ.
2002 ಮೇ 26ರಂದು ಮೊದಲ ಬಾರಿಗೆ ಕೆಒಎ ಅಧ್ಯಕ್ಷರಾಗಿ ಅಧಿಕಾರದ ಗದ್ದುಗೆ ಏರಿದ್ದ ಅವರು ತಮ್ಮ 12 ವರ್ಷಗಳ ಆಡಳಿತದಲ್ಲಿ ಕರ್ನಾಟಕದಲ್ಲಿ ಕ್ರೀಡೆಗೆ ಹೊಸ ಆಯಾಮ ನೀಡಿದ್ದಾರೆ. ಈಗ ಮತ್ತೊಂದು ಅವಧಿ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಕನ್ನಡಪ್ರಭಕ್ಕೆ ನೀಡಿದ ಸಂದರ್ಶನದಲ್ಲಿ ಅವರು ತಮ್ಮ ಅವಧಿಯಲ್ಲಿ ರಾಜ್ಯದಲ್ಲಾದ ಕ್ರೀಡಾ ಅಭಿವೃದ್ಧಿ ಹಾಗೂ ಭವಿಷ್ಯದ ಕನಸುಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.
ಟಿ 3ನೇ ಅವಧಿ ಪೂರೈಸುತ್ತೀದ್ದೀರಿ, ಈ ಬಗ್ಗೆ ಏನಂತೀರಿ?
ಕಳೆದ ಮೂರು ಅವಧಿಗಳಲ್ಲಿ ರಾಜ್ಯದಲ್ಲಿ ಕ್ರೀಡೆಗೆ ಒಂದು ಹೊಸ ದಿಕ್ಸೂಚಿ ತೋರಿಸಿದ ಆತ್ಮತೃಪ್ತಿ ನನಗಿದೆ. ಅಧಿಕಾರ ವಹಿಸಿಕೊಂಡ ಮೊದಲ ದಿನದಿಂದಲೇ ಕ್ರೀಡೆಗೆ ಒತ್ತು ನೀಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಕೇವಲ ಒಂದು ಕ್ರೀಡೆಯನ್ನಷ್ಟೇ ಅಲ್ಲ ಬದಲಾಗಿ ಎಲ್ಲಾ ಕ್ರೀಡೆಗಳ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸಿದ್ದೇನೆ. ಆ ಬಗ್ಗೆ ನನಗೆ ಹೆಮ್ಮೆ ಎನಿಸುತ್ತಿದೆ.
ಟಿ ಕ್ರೀಡಾಪಟುಗಳ ಏಳಿಗೆಗೆ ಶ್ರಮಿಸಿದ ಕುರಿತು ಒಂದಿಷ್ಟು?
ಕ್ರೀಡಾಪಟುಗಳ ಉತ್ತೇಜನಕ್ಕೆ, ಪ್ರೋತ್ಸಾಹಕ್ಕೆ ನಾನಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕಾಮನ್ವೆಲ್ತ್, ಏಷ್ಯನ್ ಗೇಮ್ಸ್, ರಾಷ್ಟ್ರೀಯ ಕ್ರೀಡಾಕೂಟ ಹಾಗೂ ಇನ್ನಿತರ ಪ್ರಮುಖ ಕ್ರೀಡೆಗಳಲ್ಲಿ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಗಿದೆ. ನಗದು ರೂಪದಲ್ಲಿ ಸಹಾಯ, ತರಬೇತಿಗೆ ಅಗತ್ಯವಾದ ಕಿಟ್ಗಳ ವಿತರಣೆ, ದಿನಭತ್ಯೆ, ಪ್ರಯಾಣದ ಖರ್ಚು, ವೈದ್ಯ ಸೌಲಭ್ಯ, ವಿಮೆ ಸೌಲಭ್ಯ... ಹೀಗೆ ಕ್ರೀಡಾಳುಗಳ ಬೆಳವಣಿಗೆಗೆ ಅನೇಕ ಉತ್ತಮ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದೇವೆ. ಬಹುಶಃ ನಮ್ಮ ರಾಜ್ಯದಲ್ಲೇ ಕ್ರೀಡಾಪಟುಗಳಿಗೆ ಹೆಚ್ಚಿನ ಉತ್ತೇಜನ ನೀಡಲಾಗುತ್ತಿದೆ ಎಂದು ಹೆಮ್ಮೆಯಿಂದ ಹೇಳುತ್ತೇನೆ.
ಟಿ ಕ್ರೀಡೆಗಳ ಬೆಳವಣಿಗೆಗೆ ಕೈಗೊಂಡ ಕ್ರಮಗಳು?
ಅನೇಕ ಜಿಲ್ಲೆಗಳಲ್ಲಿ, ಗ್ರಾಮೀಣ ಪ್ರದೇಶಗಳಲ್ಲಿ ಒಳಾಂಗಣ ಕ್ರೀಡಾಂಗಣಗಳ ನಿರ್ಮಾಣ, ಈಜು ಕೊಳಗಳ ಸ್ಥಾಪನೆ, ಬ್ಯಾಡ್ಮಿಂಟನ್ ಕೋರ್ಟ್, ಸಿಂಥೆಟಿಕ್ ಟ್ರ್ಯಾಕ್ಗಳ ನಿರ್ಮಾಣ ಸೇರಿದಂತೆ ಅನೇಕ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಇದರಿಂದ ಆಯಾ ಭಾಗದ ಕ್ರೀಡಾಳುಗಳು ಅಲ್ಲಿಯೇ ಕಲಿತು ಉತ್ತಮ ಕ್ರೀಡಾಪಟುಗಳಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ. ಕ್ರೀಡಾಳುಗಳಿಗಾಗಿ 'ಕ್ರೀಡಾರತ್ನ' ಸೇರಿದಂತೆ ಹಲವಾರು ಪ್ರಮುಖ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಹಾಗಾಗಿ, ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದಿಂದಲೂ ಹೆಚ್ಚೆಚ್ಚು ಪ್ರತಿಭಾನ್ವಿತರು ಬೆಳಕಿಗೆ ಬರುತ್ತಿರುವುದು ಈ ಎಲ್ಲ ಕಾರ್ಯಕ್ರಮಗಳ ಪ್ರಭಾವವೇ ಕಾರಣವಾಗಿದೆ.
ಟಿ ಕ್ರೀಡಾಳುಗಳಿಗೆ ಯಾವ ರೀತಿಯ ಸಹಕಾರ ನೀಡಿದ್ದೀರಿ?
ಅನೇಕ ಬಡ ಕ್ರೀಡಾ ಪ್ರತಿಭೆಗಳು ನಮ್ಮಲ್ಲಿದ್ದಾರೆ. ಆರ್ಥಿಕ ಸಮಸ್ಯೆಯಿಂದಾಗಿ ಎಲೆಮರೆಯ ಕಾಯಿಯಂತಾಗಿದ್ದಾರೆ. ಅಂತಹವರನ್ನು ಪ್ರೋತ್ಸಾಹಿಸಲು ಮತ್ತು ಆಸಕ್ತಿಯಿಂದ ಕ್ರೀಡೆಯಲ್ಲಿ ತಮ್ಮನ್ನು ತಾವು ತೊಡಕಿಸಿಕೊಳ್ಳುವ ಉದ್ದೇಶದಿಂದ ಅನೇಕ ದಿಟ್ಟ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರಮುಖವಾಗಿ ಅಗತ್ಯವಾಗಿ ಬೇಕಿರುವುದು ಆರ್ಥಿಕ ನೆರವು. ಇದನ್ನು ಮನಗಂಡು ಪ್ರತಿವರ್ಷ ಸುಮಾರು 20ರಿಂದ 25 ಕ್ರೀಡಾಳುಗಳಿಗೆ ನೆರವು ನೀಡಲಾಗುತ್ತದೆ. ಕ್ರೀಡಾ ಹಾಸ್ಟೆಲ್ಗಳಲ್ಲಿರುವವರಿಗೆ ನೀಡಲಾಗುವ ದಿನದ ಭತ್ಯೆಯಲ್ಲಿ 75ರಿಂದ 150ವರೆಗೆ ಹೆಚ್ಚಿಸಲಾಗಿದೆ. ಪ್ರತಿವರ್ಷ ನೀಡಲಾಗುವ ಕೆಒಎ ಪ್ರಶಸ್ತಿಯ ಮೊತ್ತವನ್ನು ಈ ಬಾರಿ 25ರಿಂದ 50 ಸಾವಿರಕ್ಕೆ ಏರಿಸಲಾಗಿದೆ. ರಾಷ್ಟ್ರಮಟ್ಟದಲ್ಲಿ ಭಾಗವಹಿಸುವ ಅಥ್ಲೀಟ್ಗಳಿಗೆ ದಿನದ ಭತ್ಯೆಯನ್ನು 150ರಿಂದ 200ವರೆಗೆ ಹೆಚ್ಚಿಸಲಾಗಿದೆ. ಮೇಲಾಗಿ ಕೆಒಎ ನೋಂದಾಯಿತ ಯಾವುದೇ ಸಂಸ್ಥೆ ರಾಷ್ಟ್ರಮಟ್ಟದ ಟೂರ್ನಿಯನ್ನು ನಡೆಸಲು ಮುಂದಾದರೆ ಅದಕ್ಕೆ 25 ಸಾವಿರಗಳ ನೆರವನ್ನೂ ನೀಡಲಾಗುತ್ತದೆ. ಹೀಗೆ ನಗದು ಬಹುಮಾನದ ಹೆಚ್ಚಳದಿಂದಾಗಿ ಕ್ರೀಡಾಪಟುಗಳಿಗೆ ತರಬೇತಿಗೆ ಬೇಕಾದ ಅಗತ್ಯ ಸೌಲಭ್ಯಗಳನ್ನು ಒದಗಿಸಿಕೊಳ್ಳಲು ಕೊಂಚ ಮಟ್ಟಿಗಾದರೂ ಭಾರ ಕಡಿಮೆಯಾಗಬೇಕೆಂಬ ಉದ್ದೇಶ ನಮ್ಮದಾಗಿದೆ.
ಟಿ ಕ್ರೀಡಾಪಟುಗಳ ಬದುಕಿಗೆ ಏನಾದರೂ ಆಸರೆ?
ಕ್ರೀಡಾಪಟುಗಳಿಗೆ ಬದುಕು ರೂಪಿಸಿಕೊಳ್ಳಲು ಅವರಿಗೆ ಉದ್ಯೋಗಾವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ. ಪೊಲೀಸ್ ಇಲಾಖೆಯಲ್ಲಿ ಕ್ರೀಡಾಳುಗಳಿಗೆ ನೇರವಾಗಿ ಉದ್ಯೋಗ ದೊರಕುವ ಸಂಬಂಧ ಗೃಹ ಸಚಿವರೊಂದಿಗೆ ಮಾತುಕತೆ ನಡೆಸಲಾಗಿದೆ. ಅದಕ್ಕೆ ಒಪ್ಪಿಗೆಯನ್ನೂ ಸೂಚಿಸಿರುವ ಅವರು ಅದಕ್ಕಾಗಿ ಸಮಿತಿಯೊಂದನ್ನು ರಚಿಸಿದ್ದು, ಈಗಾಗಲೇ ಅದು ತನ್ನ ಕಾರ್ಯ ಆರಂಭಿಸಿದೆ. ಜೊತೆಗೆ ಕೆಲ ಸಂಸ್ಥೆಗಳಲ್ಲೂ ಕ್ರೀಡಾಳುಗಳಿಗೆ ಉದ್ಯೋಗಾವಕಾಶ ನೀಡುವ ಸಂಬಂಧ ಸಂಬಂಧಿತರೊಂದಿಗೆ ಚರ್ಚೆ ನಡೆಸಲಾಗಿದ್ದು, ಸಾಕಾರಾತ್ಮಕ ಸ್ಪಂದನೆ ದೊರೆತಿದೆ.
ಟಿ ಸರ್ಕಾರದಿಂದ ಸಹಕಾರ ದೊರೆತಿದೆಯೇ?
ರಾಜ್ಯದಲ್ಲಿ ತಾವು ಏನೇ ಕ್ರೀಡೆಯ ಅಭಿವೃದ್ಧಿಗೆ ಶ್ರಮಿಸಿದ್ದರೆ ಅದಕ್ಕೆ ಸರ್ಕಾರದ ಸಹಕಾರವೂ ಕಾರಣ. ಕೆಒಎ ಹುಟ್ಟಿದಾಗಿನಿಂದ ಈವರೆಗೆ ಪ್ರತಿಯೊಬ್ಬ ಮುಖ್ಯಮಂತ್ರಿಯೂ ಹಾಗೂ ಕ್ರೀಡಾ ಸಚಿವರು ಕ್ರೀಡೆಯ ಏಳಿಗೆಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಸಹಕಾರದ ಸಹಾಯಹಸ್ತದಿಂದಲೇ ಇಂದು ಅನೇಕ ಜಿಲ್ಲೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಾಣಬಹುದಾಗಿದೆ. ಎಸ್.ಎಸ್. ಮಲ್ಲಿಕಾರ್ಜುನ ಅವರು ಕ್ರೀಡಾ ಸಚಿವರಾಗಿದ್ದಾಗ ರಾಜ್ಯಕ್ಕೆ ಕೇಂದ್ರದಿಂದ 100 ಕೋಟಿ ನೆರವು ಪಡೆದುಕೊಂಡು ಬಂದಿದ್ದೆವು. 2003ರಿಂದ 4 ಕಂತುಗಳಂತೆತಲಾ 25 ಕೋಟಿ ರಾಜ್ಯಕ್ಕೆ ಬಂದಿತ್ತು. ಇದರಿಂದ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಯಿತು.
ಟಿ ಆದರೂ ನಿಮ್ಮ ವಿರುದ್ಧ ಕೆಲವು ದೂರುಗಳಿವೆ ಏಕೆ?
ನಾನು ಪ್ರಾಮಾಣಿಕವಾಗಿ ಕ್ರೀಡೆಯ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಇದನ್ನು ಸಹಿಸದ ಕೆಲವರು ತಮ್ಮ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಯಾವುದೋ ಉಹಾಪೋಹಗಳಿಗೆ ಕಿವಿಗೊಡದೆ ತಮ್ಮ ಬಳಿ ಬಂದು ಈ ಕುರಿತು ಚರ್ಚಿಸಿದಲ್ಲಿ ಅವರಿಗೆ ಸ್ಪಷ್ಟ ಚಿತ್ರಣ ಸಿಗಲಿದೆ. ಸುಮ್ಮನೆ ಬೀದಿಯಲ್ಲಿ ನಿಂತು ಕೂಗಿದರೆ ಏನು ಪ್ರಯೋಜನ. ಕೆಲವರು ಅಂತಾರಾಷ್ಟ್ರೀಯ ಅಥ್ಲೀಟ್ಗಳೆಂದು ಬೀಗುತ್ತಾರೆ. ಆದರೆ, ಅಂತಹವರಿಂದ ಒಬ್ಬ ಅಥ್ಲೀಟ್ ಕೂಡ ಬೆಳಕಿಗೆ ಬಂದ ಉದಾಹರಣೆ ಇಲ್ಲ. ಮತ್ತೊಂದು ಪ್ರಮುಖ ವಿಚಾರವೆಂದರೆ ಇನ್ನೂ ಕ್ರೀಡಾ ಮಸೂದೆಗೆ ಸಂಸತ್ತಿನಲ್ಲಿ ಅನುಮೋದನೆ ದೊರೆತಿಲ್ಲ. ಹಾಗಾಗಿ, 12 ವರ್ಷಗಳಿಂದ ಆಡಳಿತದಲ್ಲಿ ಅಧಿಕಾರದಲ್ಲಿರುವವರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂಬ ನಿಯಮ ಇನ್ನೂ ಜಾರಿಯಾಗಿಲ್ಲ. ಅಂತೆಯೇ ಮತ್ತೊಂದು ಅವಧಿಗೆ ತಾವು ಸ್ಪರ್ಧಿಸುವುದು ನ್ಯಾಯಬದ್ಧವಾಗಿಯೇ ಇದೆ. ನಮ್ಮ ಬೈಲಾದಂತೆಯೇ ಚುನಾವಣೆ ನಡೆಯಲಿದೆ.
ಟಿ ಅಥ್ಲೆಟಿಕ್ ಸಂಸ್ಥೆಗೆ ನಿಮ್ಮ ಮಾನ್ಯತೆ ಏಕಿಲ್ಲ?
ಆ ಸಂಸ್ಥೆಯಲ್ಲಿನ ಅವ್ಯವಹಾರದ ಬಗ್ಗೆ ಗಮನ ಸೆಳೆದು ಅದಕ್ಕೆ ಮಾರ್ಚ್ 5, 2011ರಲ್ಲಿ ಶೋಕಾಸ್ ನೋಟೀಸ್ ನೀಡಲಾಗಿತ್ತು. ಆಗ ಸ್ವತಃ ಅಥ್ಲೆಟಿಕ್ ಸಂಸ್ಥೆ ಮಾರ್ಚ್ 12, 2011ರಂದು ತನ್ನ ಆಡಳಿತ ಮಂಡಳಿ ಸಭೆ ಕರೆದು ಕೆಒಎ ಮೇಲೆ ವಿನಾಕಾರಣ ಆರೋಪ ಹೊರಿಸಿ ನಮಗೆ ನೋಂದಣಿ ಬೇಡ ಎಂದು ಹಿಂದೆ ಸರಿದಿತ್ತು. ಈ ಕುರಿತು ಕೆಒಗೆ ಪತ್ರ ಬರೆದು ತಿಳಿಸಿತ್ತು. ಹಾಗಾಗಿ, ತಾನೇ ಕೆಒಎ ಸದಸ್ಯತ್ವ ಬೇಡವೆಂದು ಹಿಂದೆ ಸರಿದಿರುವ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಅದಕ್ಕೆ ಹಕ್ಕು ಚಲಾಯಿಸುವ ಅಧಿಕಾರವಿಲ್ಲ. ಆದರೆ, ಈಗ ಮೇ 6, 2014ರಂದು ಕೆಎಎಎ ಅಧ್ಯಕ್ಷ ಡಾ. ಜಿ. ಪರಮೇಶ್ವರ ಅವರು ಕೆಒಎ ಸದಸ್ಯತ್ವ ಬಯಸಿ ನಮಗೆ ಪತ್ರ ಬರೆದಿದ್ದಾರೆ. ಅದನ್ನು ಆಡಳಿತ ಮಂಡಳಿ ಸಭೆಯಲ್ಲಿಟ್ಟು, ಮತ್ತೆ ಅಥ್ಲೆಟಿಕ್ಸ್ ಸಂಸ್ಥೆಗೆ ಮಾನ್ಯತೆ ಕಲ್ಪಿಸಲಾಗುವುದು.
ತಮ್ಮ ಮುಂದಿನ ಗುರಿ ಏನು?
ಮತ್ತೊಂದು ಅವಧಿಗೆ ಆಯ್ಕೆಯಾದಲ್ಲಿ ಹಾಗೂ ಸದಸ್ಯರ ಸಹಕಾರ ದೊರೆತಲ್ಲಿ ರಾಜ್ಯದಲ್ಲಿ ಕ್ರೀಡೆಯ ಬೆಳವಣಿಗೆಗಾಗಿ ಇನ್ನೂ ಹೆಚ್ಚು ಶ್ರಮವಹಿಸಿ ದುಡಿಯುತ್ತೇನೆ ಎಂಬ ಭರವಸೆ ನೀಡುತ್ತೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರು ಸಮೀಪ ಸುಮಾರು 100 ಎಕರೆ ಪ್ರದೇಶದಲ್ಲಿ ಕ್ರೀಡಾ ಗ್ರಾಮ ಸ್ಥಾಪನೆಗೆ ಒಪ್ಪಿದ್ದಾರೆ. ಇಲ್ಲಿ ಎಲ್ಲಾ ಕ್ರೀಡೆಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುತ್ತದೆ. ಹೀಗೆ, ಇನ್ನೂ ಅನೇಕ ಯೋಜನೆಗಳು ತಮ್ಮ ಮುಂದಿವೆ.
ಕಳೆದ ಮೂರೂ ಅವಧಿಗಳಲ್ಲಿ ಎಲ್ಲರ ಸಹಕಾರ, ಪ್ರೋತ್ಸಾಹದ ನೆರವಿನಿಂದ ರಾಜ್ಯದಲ್ಲಿ ಕ್ರೀಡೆಯ ಏಳಿಗೆಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಅದಕ್ಕಾಗಿ ನನಗೆ ಹೆಚ್ಚು ತೃಪ್ತಿಯಿದೆ. ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಕಾರಣರಾದ ಪ್ರತಿಯೊಬ್ಬರಿಗೂ ನಾನು ಚಿರಋುಣಿ. ಮತ್ತೊಂದು ಅವಧಿಗೆ ಆಯ್ಕೆಯಾದರೆ, ಇನ್ನೂ ಉತ್ತಮ ಕೆಲಸ ಮಾಡಲು ತಮ್ಮಿಂದ ಅದೇ ಪ್ರೋತ್ಸಾಹ, ನೆರವು ಬಯಸುತ್ತೇನೆ.
ಟಿ ಕೆ. ಗೋವಿಂದರಾಜ
ಕರ್ನಾಟಕ ಒಲಿಂಪಿಕ್ಸ್ ಸಂಸ್ಥೆ ಅಧ್ಯಕ್ಷರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


