ಆರ್ಸಿಬಿಗೆ ಅಳಿವು-ಉಳಿವಿನ ಪ್ರಶ್ನೆ
ರಾಂಚಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂದಿನ ಎಲ್ಲ ಪಂದ್ಯಗಳಲ್ಲೂ ಗೆಲವು ದಾಖಲಿಸಿದರೂ ಸಹ ಏಳನೇ ಆವೃತ್ತಿಯ ಐಪಿಎಲ್ ಟಿ-20 ಪಂದ್ಯಾವಳಿಯಲ್ಲಿ ಪ್ಲೇಆಫ್ ಸುತ್ತಿಗೆ ಅರ್ಹತೆ ಪಡೆಯುವುದು ಅಷ್ಟು ಸುಲಭವಲ್ಲ. ಇತರೆ ಪಂದ್ಯಗಳಲ್ಲಿನ ಫಲಿತಾಂಶದ ಮೇಲೆಯೇ ಅದರ ಭವಿಷ್ಯ ನಿಂತಿದೆ.
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿರುವ ರಾಯಲ್ ಚಾಲೆಂಜರ್ಸ್ ಮುಂದೆ ಇದೀಗ ಮತ್ತೊಂದು ದೊಡ್ಡ ಸವಾಲಿದೆ. ಜೆಎಸ್ಸಿಎ ಅಂತಾರಾಷ್ಟ್ರೀಯ ಕ್ರೀಡಾಂಗಣದ ಸಂಕೀರ್ಣದಲ್ಲಿ ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಆರ್ಸಿಬಿ ತಂಡಕ್ಕೆ ಎರಡು ಬಾರಿಯ ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಾಗಲಿದೆ.
ಒಂದು ವೇಳೆ ಈ ಪಂದ್ಯದಲ್ಲಿ ಸೋಲನುಭವಿಸಿದರೆ, ಆರ್ಸಿಬಿ ಪಡೆ ಪಂದ್ಯಾವಳಿಯಿಂದಲೇ ಗಂಟುಮೂಟೆ ಕಟ್ಟಬೇಕಾಗುತ್ತದೆ. ಗೆಲುವು ದಾಖಲಿಸಿದರೆ ಮಾತ್ರ ಅವಕಾಶದತ್ತ ಕಾಯಬಹುದು.
ಆರ್ಸಿಬಿ ಆಡಿರುವ 10 ಪಂದ್ಯಗಳ ಪೈಕಿ ಕೇವಲ 4 ಗೆಲವು ಮತ್ತು 6 ಸೋಲುಗಳೊಂದಿಗೆ 8 ಅಂಕಗಳ ಸಂಪಾದನೆಯಲ್ಲಷ್ಟೇ ಇದೆ. ಇನ್ನುಳಿದ 4 ಪಂದ್ಯಗಳಲ್ಲಿ ಗೆದ್ದರೂ ಅದರ ಅಂಕ 16ಕ್ಕೆ ಏರಲಿದೆ. ಆದರೂ ಪ್ಲೇಆಫ್ ಸುತ್ತು ಖಚಿತವಿಲ್ಲ. ಅದಕ್ಕಾಗಿ 18 ಅಂಕಗಳಾದರೂ ಬೇಕು. ಹಾಗಾಗಿ, ಇನ್ನುಳಿದ ಪಂದ್ಯಗಳಲ್ಲಿ ಆಡಲಿರುವ ತಂಡಗಳ ಫಲಿತಾಂಶದ ಮೇಲೆ ಆರ್ಸಿಬಿ ತಂಡ ಪ್ಲೇಆಫ್ ಸುತ್ತಿಗೆ ಪ್ರವೇಶಿಸುವ ಬಗ್ಗೆ ನಿರ್ಧಾರವಾಗಲಿದೆ.
ಮತ್ತೊಂದೆಡೆ 2010 ಮತ್ತು 2011ರಲ್ಲಿ ನಿರಂತರ ಚಾಂಪಿಯನ್ ಆಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿಯೂ ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ಮೇಲಾಗಿ ನಾಳಿನ ಪಂದ್ಯ ನಾಯಕ ಮಹೇಂದ್ರ ಸಿಂಗ್ ಧೋನಿಯ ತವರು ನೆಲ ರಾಂಚಿಯಲ್ಲಿಯೇ ನಡೆಯುತ್ತಿರುವುದರಿಂದ ಅದರ ಪಾಲಿಗಿದು ಪ್ರತಿಷ್ಠೆಯ ಸಮರ. ಹಾಗಾಗಿ, ನಾಯಕ ಧೋನಿ ಮಾತ್ರ ಯಾವುದೇ ಕಾರಣಕ್ಕೂ ಎದುರಾಳಿಗೆ ಗೆಲವು ಬಿಟ್ಟುಕೊಡದಿರಲು ಉತ್ತಮ ರಣತಂತ್ರ ರೂಪಿಸಿಕೊಂಡು ಹೋರಾಟಕ್ಕೆ ಕಾಯುತ್ತಿದ್ದಾರೆ.
ಚೆನ್ನೈ ಕಿಂಗ್ಸ್ 10 ಪಂದ್ಯಗಳನ್ನಾಡಿದ್ದು, 8 ಗೆಲವು ಮತ್ತು 2 ಸೋಲುಗಳೊಂದಿಗೆ 16 ಅಂಕಗಳಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ನಾಳೆ ಆರ್ಸಿಬಿ ವಿರುದ್ಧ ಗೆದ್ದರೆ ತನ್ನ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳುವುದರ ಜೊತೆಗೆ ಪ್ಲೇ-ಆಫ್ ಸುತ್ತು ಪ್ರವೇಶಿಸುವದನ್ನು ಬಹುತೇಕ ಖಾತ್ರಿ ಪಡಿಸಿಕೊಂಡಂತಾಗುತ್ತದೆ. ಕಳೆದ ಪಂದ್ಯಗಳಲ್ಲಿ ರಾಯಲ್ ಚಾಲೆಂಜರ್ಸ್ ತಂಡ ಡೆಲ್ಲಿ ಡೇರ್ಡೆವಿಲ್ಸ್ ಪಡೆಯನ್ನು ಸೋಲಿಸಿತ್ತು. ಯುವರಾಜ್ ಸಿಂಗ್ರ ಸಾಹಸಮಯ ಬ್ಯಾಟಿಂಗ್ನಿಂದಾಗಿ ಆರ್ಸಿಬಿಗೆ ಭರ್ಜರಿ ಗೆಲವು ಲಭಿಸಿತ್ತು.
ಆದರೆ, ಆರ್ಸಿಬಿ ತಂಡದಲ್ಲಿ ನಾಯಕ ವಿರಾಟ್ ಕೊಹ್ಲಿಯ ಭಾರಿ ವೈಫಲ್ಯ ಹಾಗೂ ಕ್ರಿಸ್ ಗೇಯ್ಲ್ ನಿರೀಕ್ಷಿತಮಟ್ಟದಲ್ಲಿ ಅಬ್ಬರಿಸದೇ ಇರುವುದು ದೊಡ್ಡ ಚಿಂತೆಯಾಗಿದೆ. ಇನ್ನು ದಕ್ಷಿಣ ಆಫ್ರಿಕಾ ಮೂಲದ ಎಬಿ ಡಿವಿಲಿಯರ್ಸ್ ಕೂಡ ತಂಡದ ಪ್ರಮುಖ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ. ಬೌಲಿಂಗ್ನಲ್ಲಿ ಮಿಚೆಲ್ ಸ್ಟಾರ್ಕ್, ಅಲ್ಬಿ ಮಾರ್ಕೆಲ್, ವರುಣ್ ಆರುಣ್, ಅಶೋಕ್ ದಿಂಡಾ, ಹರ್ಷಲ್ ಪಟೇಲ್ ಮತ್ತು ಸ್ಪಿನ್ನರ್ಗಳಾದ ಮುತ್ತಯ್ಯ ಮುರಳೀಧರನ್, ಯುಜವೇಂದ್ರ ಚಾಹಲ್ ಪ್ರಮುಖರಾಗಿದ್ದಾರೆ.
ಮತ್ತೊಂದೆಡೆ ಚೆನ್ನೈ ಸೂಪರ್ ಕಿಂಗ್ಸ್ ಪಡೆ ಬ್ಯಾಟಿಂಗ್ ಮತ್ತು ಬೌಲಿಂಗ್ಗಳೆರಡರಲ್ಲೂ ಹೆಚ್ಚು ಪರಿಣಾಮಕಾರಿಯಾಗಿ ಮುಂದಡಿ ಇಡುತ್ತಿದೆ. ಇದೀಗ ಆಸ್ಟ್ರೇಲಿಯಾದ ಅನುಭವಿ ಸ್ಫೋಟಕ ಬ್ಯಾಟ್ಸ್ಮನ್ ಡೇವಿಡ್ ಹಸ್ಸಿ ಸಹ ತಂಡ ಸೇರಿಕೊಂಡಿರುವುದು ಅದರ ಬಲ ಮತ್ತಷ್ಟು ಹೆಚ್ಚಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

