ಕ್ರೀಡೆ

ಐಪಿಎಲ್: ತಪ್ಪದ ಬುಕ್ಕಿಗಳ ಹಾವಳಿ

Published On :

ಕೋಲ್ಕತಾ: ಪ್ರಸಕ್ತ ಐಪಿಎಲ್ ಪಂದ್ಯಾವಳಿಯ ವೇಳೆ ಬುಕ್ಕಿಗಳು ಆಟಗಾರರನ್ನು ಸಂಪರ್ಕಿಸಿರುವ ಬಗ್ಗೆ ಬಿಸಿಸಿಐ-ಐಪಿಎಲ್‌ನ ಹಂಗಾಮಿ ಅಧ್ಯಕ್ಷ ಸುನಿಲ್ ಗಾವಸ್ಕರ್ ಒಪ್ಪಿಕೊಂಡಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸುನಿಲ್ ಗಾವಸ್ಕರ್ ಅವರು ಇಬ್ಬರು ಬುಕ್ಕಿಗಳು ಆಟಗಾರರನ್ನು ಸಂಪರ್ಕಿಸಿದ್ದು, ಈ ಮಾಹಿತಿಯನ್ನು ಭ್ರಷ್ಟಾಚಾರ ನಿಗ್ರಹ ಸಮಿತಿಗೆ ವರದಿ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ಬ್ರೆಂಡನ್ ಮೆಕಲಂ ಅವರನ್ನು ಬುಕ್ಕಿಗಳು ಸಂಪರ್ಕಿಸಿದ್ದರ ಉದ್ದೇಶಿಸಿ ಮಾತನಾಡಿದ ಗಾವಸ್ಕರ್, ಭ್ರಷ್ಟಾಚಾರ ನಿಗ್ರಹ ಹಾಗೂ ಭದ್ರತಾ ಸಮಿತಿಯೊಂದಿಗೆ ಆಟಗಾರರ ನಡುವಣ ಮಾತುಕತೆಯನ್ನು ಸೋರಿಕೆಯಾಗದಂತೆ ಗೌಪ್ಯ ಕಾಪಾಡಿಕೊಳ್ಳುವುದಾಗಿ ತಿಳಿಸಿದ್ದಾರೆ.
ಐಪಿಎಲ್ ಕಡೆಯಿಂದ ಯಾವುದೇ ಮಾಹಿತಿಗಳು ಸೋರಿಕೆಯಾಗಿಲ್ಲ. ಹಾಗಾಗಿ ಎಲ್ಲಿಂದ ಈ ಮಾಹಿತಿ ಸೋರಿಕೆಯಾಗಿದೆ ಎಂದು ತಿಳಿದಿಲ್ಲ. ಈ ಬಾರಿ ಪ್ರತಿ ತಂಡದ ಜತೆಗೆ ನೈತಿಕ ಅಧಿಕಾರಿಗಳನ್ನು ನಿಯೋಜಿಸಿದ್ದು, ಆಟಗಾರರು ಬುಕ್ಕಿಗಳನ್ನು ಸಂಪರ್ಕಿಸಿದರೆ ಸುಲಭವಾಗಿ ಇವರಿಗೆ ಮಾಹಿತಿ ನೀಡಬಹುದಾಗಿದೆ ಎಂದರು.
ಕೆಲವು ಬಾರಿ ಆಟಗಾರರು ಏನು ಮಾಡಬೇಕು ಎಂಬುದರ ಬಗ್ಗೆ ತಿಳಿದಿರುವುದಿಲ್ಲ. ಈ ಪ್ರಕರಣಗಳ ಮಹತ್ವ ಹಾಗೂ ಗೌಪ್ಯತೆಯ ಬಗ್ಗೆಯು ಅರಿತಿರುವುದಿಲ್ಲ. ಹಾಗಾಗಿ ನೈತಿಕ ಅಧಿಕಾರಿಗಳನ್ನು ತಂಡದ ಜತೆ ನಿಯೋಜಿಸಿರುವುದು ಆಟಗಾರರಿಗೆ ಸುಲಭವಾಗಲಿದೆ.
ಇನ್ನು ಖ್ಯಾತಿ ಹಾಗೂ ಹಣದ ನಡುವೆಯೂ ಯುವ ಹಾಗೂ ಪ್ರತಿಭಾನ್ವಿತ ಆಟಗಾರರು ತಮ್ಮ ವೃತ್ತಿಜೀವನವನ್ನು ಸರಿಯಾದ ಮಾರ್ಗದಲ್ಲಿ ಕಟ್ಟುಕೊಳ್ಳಲು ನೆರವು ನೀಡಲು ಯಾವ ರೀತಿ ಯೋಜನೆ ರೂಪಿಸಲಾಗಿದೆ ಎಂಬುದರ ಬಗ್ಗೆ ಗಾವಸ್ಕರ್ ಮಾಹಿತಿ ನೀಡಿದರು.
ಕ್ರೀಡೆಯ ದಂತಕತೆಗಳಾದ ಸಚಿನ್, ದ್ರಾವಿಡ್, ವಿವಿಎಸ್ ಲಕ್ಷ್ಮಣ್ ಹಾಗೂ ಅನಿಲ್ ಕುಂಬ್ಳೆ ಅವರನ್ನು ಸಂಪರ್ಕಿಸಿದ್ದು, ಅವರೊಂದಿಗೆ ಮಾತುಕತೆ ನಡೆಸಿ ಯುವ ಕ್ರಿಕೆಟಿಗಳು ತಮ್ಮ ಒತ್ತಡ ಪರಿಸ್ಥಿತಿಗಳನ್ನು ನಿಭಾಯಿಸಿ ಸರಿಯಾದ ಹಾದಿಯಲ್ಲಿ ವೃತ್ತಿ ಜೀವನವನ್ನು ರೂಪಿಸಿಕೊಳ್ಳಲು ಮಾರ್ಗದರ್ಶನ ನೀಡಲಾಗುವುದು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.