ಕ್ರೀಡೆ

ಮಿಲಿಯನ್ ಡಾಲರ್ ಆರ್ಮ್

ಮಿಲಿಯನ್ ಡಾಲರ್ ಆರ್ಮ್
Published On :

ಹಾಲಿವುಡ್ ಮತ್ತೊಂದು ಕ್ರೀಡಾ ಚಿತ್ರಕ್ಕೆ ಜನ್ಮ ಕೊಡುತ್ತಿದೆ. ಚಿತ್ರದ ಹೆಸರು 'ಮಿಲಿಯನ್ ಡಾಲರ್ ಆರ್ಮ್‌'. ನಿಮಗೆ ನೆನಪಿರಬಹುದು. ಕಳೆದ ವರ್ಷ ಇದೇ ಹೆಸರಿನ ರಿಯಾಲಿಟಿ ಶೋ ಭಾರತದಲ್ಲಿ ನಡೆದಿತ್ತು. ಭಾರತದಲ್ಲಿನ ಶ್ರೇಷ್ಠ ಕ್ರಿಕೆಟ್ ಪ್ರತಿಭೆಗಳನ್ನು ಹೆಕ್ಕಿ ಅವರನ್ನು ಬೇಸ್‌ಬಾಲ್ ಕ್ರೀಡಾಪಟುಗಳನ್ನಾಗಿ ಪರಿವರ್ತಿಸುವ ಒಂದು ವಿನೂತನ ಪ್ರಯೋಗ ಇದಾಗಿತ್ತು. ಇದೇ ಕುತೂಹಲಕಾರಿ ಕಥೆಯನ್ನಿಟ್ಟುಕೊಂಡು ಈ ಚಿತ್ರವನ್ನು ನಿರ್ಮಿಸಿದೆ, ಖ್ಯಾತ ಚಿತ್ರ ಸಂಸ್ಥೆ ಡಿಸ್ನಿ ಪಿಕ್ಚರ್ಸ್. ಇದೆಲ್ಲಕ್ಕಿಂತ ಮಿಗಿಲಾಗಿ ಭಾರತೀಯರ ಹೆಮ್ಮೆಯ ಸಂಗೀತ ನಿರ್ದೇಶಕ ಹಾಗೂ ಎರಡು ಆಸ್ಕರ್ ಗೆದ್ದ ಹೆಗ್ಗಳಿಕೆ ಹೊಂದಿರುವ ಎ.ಆರ್. ರೆಹಮಾನ್ ಸಂಗೀತ ಈ ಚಿತ್ರಕ್ಕಿದೆ.
ಅಂದಹಾಗೆ, ಚಿತ್ರದ ಕಥೆಯ ಬಗ್ಗೆ ಮತ್ತಷ್ಟು ಸವಿಸ್ತಾರವಾಗಿ ಹೇಳಬೇಕೆಂದರೆ ಇದು ಅಮೆರಿಕದ ಕ್ರೀಡಾ ಪ್ರತಿನಿಧಿಯ ಕಥೆ. ಅವರ ಹೆಸರು ಜೆ.ಬಿ. ಬರ್ನ್‌ಸ್ಟೇಯ್ನ್. ನ್ಯೂಯಾರ್ಕ್‌ನ ಬ್ಯಾರಿ ಬಾಂಡ್ ಹಾಗೂ ಬ್ಯಾರಿ ಸ್ಯಾಂಡರ್ಸ್ ಎಂಬ ಎರಡು ಕ್ರೀಡಾ ಸಂಸ್ಥೆಗಳ ಪ್ರತಿನಿಧಿಯಾಗಿ ಇವರು ಸೇವೆ ಸಲ್ಲಿಸುತ್ತಿದ್ದಾರೆ. ಮೂಲತಃ ಈ ಎರಡೂ ಸಂಸ್ಥೆಯಗಳು ಬೇಸ್‌ಬಾಲ್ ಕ್ರೀಡೆಗೆ ಸಂಬಂಧಪಟ್ಟವಾಗಿವೆ. ಈ ಸಂಸ್ಥೆಗಳಿಗೆ ಪ್ರತಿಭಾನ್ವಿತ ಕ್ರೀಡಾಪಟುಗಳನ್ನು ಆಯ್ಕೆಮಾಡಿ ತಂದು ಸೇರಿಸುವುದೇ ಬರ್ನ್ ಸ್ಟೇಯ್ನ್ ಜವಾಬ್ದಾರಿ. ಇದೇ ಕಾರ್ಯಕ್ರಮದಲ್ಲಿ ನಿರತರಾದ ಬರ್ನ್‌ಸ್ಟೇಯ್ನ್‌ಗೆ ಅದೊಂದು ದಿನ ಮಿಂಚಿನ ಐಡಿಯಾ ಹೊಳೆಯುತ್ತೆ. ಕ್ರಿಕೆಟ್ ಹಾಗೂ ಬೇಸ್‌ಬಾಲ್ ಎರಡರ ನಡುವೆ ಕೆಲವು ಸ್ವಾಮ್ಯತೆಗಳಿವೆ. ಹೀಗಿರುವಾಗ, ಭಾರತ ಹಾಗೂ ಏಷ್ಯಾದ ಇತರ ರಾಷ್ಟ್ರಗಳಲ್ಲಿ ಕ್ರಿಕೆಟ್ ಪ್ರತಿಭೆಗಳನ್ನು ಕರೆತಂದು ಸೂಕ್ತ ತರಬೇತಿ ನೀಡಿದರೆ, ಅವರು ಉತ್ತಮ ಬೇಸ್‌ಬಾಲ್ ಪ್ರತಿಭೆಗಳಾಗಿ ಹೊರಹೊಮ್ಮುವಂತೆ ಮಾಡಬಹುದು. ಅಲ್ಲದೆ, ಅಮೆರಿಕದಲ್ಲಿ ಊರೂರು ಸುತ್ತಾಡಿ ಬೇಸ್‌ಬಾಲ್ ಪ್ರತಿಭೆಗಳನ್ನು ಹುಡುಕುವ ಬದಲು, ಕ್ರಿಕೆಟ್ ಆರಾಧಿಸುವ ದೇಶಗಳಲ್ಲಿ ಜಾಲಾಡಿದರೆ, ಸಾಕಷ್ಟು ಪ್ರತಿಭಾವಂತರನ್ನು ಕರೆತರಬಹುದು ಎಂಬ ಯೋಚನೆ ಬರುತ್ತೆ.
ಈ ಹಿನ್ನೆಲೆಯಲ್ಲಿ ಅವರು ಭಾರತಕ್ಕೆ ಬಂದು, ಮಿಲಿಯನ್ ಡಾಲರ್ ಆರ್ಮ್ ಎಂಬ ಒಂದು ರಿಯಾಲಿಟಿ ಶೋ ಆರಂಭಿಸುತ್ತಾರೆ. ಈ ರಿಯಾಲಿಟಿ ಶೋನಲ್ಲಿ ಜಯಗಳಿಸಿದ, ಭಾರತದವರೇ ಆದ ರಿಂಕು ಸಿಂಗ್ ಹಾಗೂ ದಿನೇಶ್ ಪಟೇಲ್‌ರನ್ನು ಬರ್ನ್‌ಸ್ಟೇಯ್ನ್ ಆಯ್ಕೆ ಮಾಡಿ ಅಮೆರಿಕಕ್ಕೆ ಕರೆದೊಯ್ಯುತ್ತಾರೆ. ಅಲ್ಲಿ ಅವರು, ಪೀಟ್ಸ್‌ಬರ್ಗ್ ಪೈರೇಟ್ಸ್ ಎಂಬ ತಂಡವನ್ನು ಸೇರಿಕೊಳ್ಳುತ್ತಾರೆ. ಆದರೆ, ಮುಂದೆ ಬರ್ನ್‌ಸ್ಟೇಯ್ನ್ ಲೆಕ್ಕಾಚಾರ ತಲೆಕೆಳಗಾಗುತ್ತದೆ. ಏಕೆಂದರೆ, ಕ್ರಿಕೆಟ್‌ಗೆ ಒಗ್ಗಿ ಹೋಗಿದ್ದ ರಿಂಕು ಹಾಗೂ ದಿನೇಶ್, ಬೇಸ್‌ಬಾಲ್‌ಗೆ ಹೊಂದಿರಕೊಳ್ಳಲು ತಿಣುಕಾಡುತ್ತಾರೆ. ಅಲ್ಲದೆ, ಬದಲಾದ ಪರಿಸರ, ಮನೆಯಿಂದ ದೂರ ಉಳಿದ ಸಂಕಟ, ಇವೆಲ್ಲವೂ ಸೇರಿ ಅವರು ಒಂದು ರೀತಿ ಸ್ಟ್ರಗಲ್ ಮಾಡುವಂತಾಗುತ್ತದೆ. ಇದು ಬರ್ನ್‌ಸ್ಟೇಯ್ನ್‌ಗೆ ಸವಾಲಾಗಿ ಪರಿಣಮಿಸುತ್ತದೆ. ಕೊನೆಗೇನಾಗುತ್ತೆ, ಬರ್ನ್‌ಸ್ಟೇಯ್ನ್ ತಮ್ಮ ಕನಸು ನನಸು ಮಾಡಿಕೊಳ್ಳುವಲ್ಲಿ ಸಫಲರಾಗುತ್ತಾರಾ, ರಿಂಕು ಮತ್ತು ದಿನೇಶ್ ತಮ್ಮ ಒತ್ತಡಗಳಿಂದ ಮುಕ್ತರಾಗಿ ಬೇಸ್‌ಬಾಲ್ ಪ್ರತಿಭೆಗಳಾಗಿ ಹೊರಹೊಮ್ಮುತ್ತಾರಾ? ಎನ್ನುವುದೇ ಕಥೆಯ ಕುತೂಹಲಕಾರಿ ಅಂಶ.
ಚಿತ್ರಕ್ಕೆ ಕ್ರೇಗ್ ಗಿಲ್ಲೆಸ್ಬಿ ನಿರ್ದೇಶನವಿದ್ದು, ಅಮೆರಿಕದ ರಿಯಾಲಿಟಿ ಶೋ ಆದ ಮ್ಯಾಡ್‌ಮ್ಯಾನ್ ಸೂಪರ್ ಸ್ಟಾರ್ ಈ ಚಿತ್ರದಲ್ಲಿ ಬರ್ನ್‌ಸ್ಟೇಯ್ನ್ ಪಾತ್ರವನ್ನು ನಿರ್ವಹಿಸಿದ್ದಾರೆ.


-ಚೇತನ್ ಓ.ಆರ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.