ಆರ್ಸಿಬಿಗೆ ಅರ್ಥವಿಲ್ಲದ ಕದನ
ಬೆಂಗಳೂರು: ಈಗಾಗಲೇ ಪ್ಲೇ ಆಫ್ ಸುತ್ತು ಪ್ರವೇಶಿಸುವ ಹಾದಿಯಿಂದ ಹೊರದಬ್ಬಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡ ಇನ್ನೇನಿದ್ದರೂ ಐಪಿಎಲ್ನ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಗೌರವಕ್ಕಾಗಿ ಹೋರಾಟ ನಡೆಸಬೇಕಷ್ಟೇ.
ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಗುರುವಾರ ನಡೆದ ಪಂದ್ಯದಲ್ಲಿ ಸೋಲನುಭವಿಸುವ ಮೂಲಕ ಮುನ್ನಡೆಗಾಗಿ ಇದ್ದ ಸ್ವಲ್ಪ ಅವಕಾಶವನ್ನೂ ಕೂಡ ಸಂಪೂರ್ಣವಾಗಿ ಕಳೆದುಕೊಂಡ ರಾಯಲ್ ಚಾಲೆಂಜರ್ಸ್ ಮುಂದಿನ ಪಂದ್ಯದಲ್ಲಿ ಗೆಲವಿನ ಮೂಲಕ ಏಳನೇ ಆವೃತ್ತಿಗೆ ವಿದಾಯ ಹೇಳುವ ಲೆಕ್ಕಾಚಾರದಲ್ಲಿದೆ. ಆದರೆ, ಆರ್ಸಿಬಿ ತಂಡಕ್ಕೆ ಕೊನೆಯ ಲೀಗ್ ಪಂದ್ಯದಲ್ಲಿ ಪ್ರಬಲ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸವಾಲು ಎದುರಾಗುತ್ತಿದ್ದು, ಗೆಲವು ಸುಲಭದ ಮಾತಲ್ಲ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆಯಲಿರುವ ಈ ಪಂದ್ಯದಲ್ಲಿ ಆರ್ಸಿಬಿ ತವರಿನ ಲಾಭ ಹೊಂದಿದ್ದರೂ, ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೂ ಸಹ ಇಲ್ಲಿ ಹೆಚ್ಚು ಸಂಖ್ಯೆಯ ಪ್ರೇಕ್ಷಕರ ಬೆಂಬಲವಿದೆ. ಮೇಲಾಗಿ ಚೆನ್ನೈ ಕಿಂಗ್ಸ್ ಈಗಾಗಲೇ ಪ್ಲೇಆಫ್ ಸುತ್ತಿಗೆ ತನ್ನ ಸ್ಥಾನ ಖಚಿತಪಡಿಸಿಕೊಂಡಿರುವ ಹಿನ್ನೆಲೆಯಲ್ಲಿ ಹೆಚ್ಚು ಆತ್ಮವಿಶ್ವಾಸದಿಂದ ಪುಟಿಯುತ್ತಿದ್ದು, ಆರ್ಸಿಬಿ ವಿರುದ್ಧ ಗೆಲ್ಲುವ ಉತ್ತಮ ಅವಕಾಶವನ್ನು ಹೊಂದಿದೆ. ಆರ್ಸಿಬಿ ಪಡೆ ಈ ಬಾರಿ ಒಂದೆರೆಡು ಪಂದ್ಯಗಳನ್ನು ಹೊರತುಪಡಿಸಿ ಟೂರ್ನಿಯಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಒಂದು ತಂಡವಾಗಿ, ಸಾಂಘಿಕ ಶಕ್ತಿ ಪ್ರದರ್ಶನ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ತಂಡದ ದೈತ್ಯ ಬ್ಯಾಟ್ಸ್ಮನ್ಗಳಾಗಿದ್ದ ಕ್ರಿಸ್ ಗೇಯ್ಲ್, ಎಬಿ ಡಿವಿಲಿಯರ್ಸ್, ಯುವರಾಜ್ ಸಿಂಗ್ ಮತ್ತು ನಾಯಕ ವಿರಾಟ್ ಕೊಹ್ಲಿ ಪಂದ್ಯದುದ್ದಕ್ಕೂ ಮಿಂಚು ಹರಿಸಲಿಲ್ಲ. ಒಬ್ಬೊಬ್ಬರು ಆಗೊಮ್ಮೆ-ಈಗೊಮ್ಮೆ ಎನ್ನುವ ರೀತಿಯಲ್ಲಿ ಸ್ಫೋಟಿಸಿದರು. ಕಳೆದ ಆರನೇ ಆವೃತ್ತಿಯಲ್ಲಿ 600 ರನ್ಗಳಿಸಿ ಮಿಂಚಿದ್ದ ವಿರಾಟ್ ಕೊಹ್ಲಿ ಈ ಬಾರಿ ಬಹುತೇಕ ಪಂದ್ಯಗಳಲ್ಲಿ ವಿಫಲರಾದರು. ಇವರ ವೈಫಲ್ಯದಿಂದಾಗಿ ಗೆದ್ದುಕೊಳ್ಳಬಹುದಾಗಿದ್ದ ಅನೇಕ ಪಂದ್ಯಗಳಲ್ಲಿ ಸೋಲಿನ ಕಹಿ ಉಣ್ಣುವಂತಾಯಿತು. ಪಂದ್ಯದಿಂದ ಪಂದ್ಯಕ್ಕೆ ಬೌಲಿಂಗ್ ವಿಭಾಗ ಕೂಡ ಸುಧಾರಣೆಗೊಳ್ಳುವ ಬದಲು ಕಳಪೆ ಪ್ರದರ್ಶನಕ್ಕೆ ಅಂಟಿಕೊಂಡಿತು. ಯೆಜುವೇಂದ್ರ ಚಾಹಲ್ ಮತ್ತು ಮಿಚೆಲ್ ಸ್ಟಾರ್ಕ್ ಹೊರತುಪಡಿಸಿ ಉಳಿದೆಲ್ಲ ಬೌಲರ್ಗಳು ಸಾಕಷ್ಟು ಪರದಾಡಿದರು.
ಮತ್ತೊಂದೆಡೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಬ್ಯಾಟಿಂಗ್ ಮತ್ತು ಬೌಲಿಂಗ್ಗಳೆರಡರಲ್ಲೂ ಗುಣಮಟ್ಟದ ಪ್ರದರ್ಶನ ನೀಡುತ್ತಿದೆ. ಕಳೆದ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಸೋಲನುಭವಿಸಿದರೂ ಆತಂಕಕ್ಕೊಳಗಾಗುವ ಪರಿಸ್ಥಿತಿಯಲ್ಲೇನೂ ಚೆನ್ನೈ ತಂಡವಿಲ್ಲ. ಮಹೇಂದ್ರ ಸಿಂಗ್ ಧೋನಿ ಪರಿಣಾಮಕಾರಿಯಾಗಿಯೇ ನಾಯಕತ್ವದ ಹೊಣೆ ನಿರ್ವಹಿಸುವ ಮೂಲಕ ತಂಡವನ್ನು ಗುರಿಯೆಡೆಗೆ ಕೊಂಡೊಯ್ಯುವಲ್ಲಿ ಸಫಲರಾಗಿದ್ದಾರೆ.
ಆರಂಭಿಕ ಆಟಗಾರರಾಗಿರುವ ಡ್ವೈನ್ ಸ್ಮಿತ್, ಸುರೇಶ್ ರೈನಾ, ಡೇವಿಡ್ ಹಸ್ಸಿ, ಫಫ್ ಡು ಪ್ಲೆಸಿಸ್, ಆಲ್ರೌಂಡರ್ ರವೀಂದ್ರ ಜಡೇಜಾ ಹಾಗೂ ಬೌಲಿಂಗ್ನಲ್ಲಿ ಮೋಹಿತ್ ಶರ್ಮಾ, ಅಶ್ವಿನ್, ಜಡೇಜಾ, ಈಶ್ವರ್ ಪಾಂಡೆ, ಸ್ಯಾಮುಯೆಲ್ ಬದ್ರಿ, ಬೆನ್ ಹಿಲ್ಫೆನ್ಹಾಸ್ ಭರವಸೆ ಮೂಡಿಸಿದ್ದಾರೆ. ಮುಖ್ಯವಾಗಿ ಚೆನ್ನೈ ತಂಡದಲ್ಲಿ ಬಹುತೇಕ ಆಟಗಾರರು ಉತ್ತಮ ಫಾರ್ಮ್ನಲ್ಲಿರುವುದರಿಂದ ಆರ್ಸಿಬಿ ತಂಡದ ಮುಂದೆ ಕಠಿಣ ಸವಾಲು ನಿಲ್ಲುವುದರಲ್ಲಿ ಅನುಮಾನವೇ ಇಲ್ಲ.
ನಾಳಿನ ಪಂದ್ಯದಲ್ಲಿ ಕ್ರೀಡಾಂಗಣ ಅಭಿಮಾನಿಗಳಿಂದ ತುಂಬಿತುಳುಕುವ ನಿರೀಕ್ಷೆಯಿದೆ. ಟಿಕೆಟ್ಗಳು ಪೂರ್ಣವಾಗಿ ಮಾರಾಟಗೊಂಡಿದ್ದು, ಆಲ್ಲೈನ್ನಲ್ಲಿ ಚೆನ್ನೈ ತಂಡದ ಅಭಿಮಾನಿಗಳೇ ಹೆಚ್ಚು ಸಂಖ್ಯೆಯಲ್ಲಿ ಟಿಕೆಟ್ಗಳನ್ನು ಖರೀದಿಸಿದ್ದಾರೆ. ಹಾಗಾಗಿ, ಆರ್ಸಿಬಿಗೆ ಸರಿಸಮನಾಗಿ ಚೆನ್ನೈ ತಂಡಕ್ಕೂ ಸಹ ಇಲ್ಲಿ ಅಭಿಮಾನಿಗಳಿಂದ ಉತ್ತಮ ಬೆಂಬಲ ದೊರೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

