ಕಡೇ ಪಂದ್ಯದಲ್ಲೂ ಆರ್ಸಿಬಿ ಸೋಲು

ಬೆಂಗಳೂರು: ಉತ್ತಮ ರನ್ ಮಳೆ ಸುರಿಸಬಹುದಾಗಿದ್ದ ಅಂಗಣದಲ್ಲೂ ಸದ್ದಿಲ್ಲದ, ಸತ್ವರಹಿತ ಬ್ಯಾಟಿಂಗ್ ಪ್ರದರ್ಶನದ ಜೊತೆಗೆ ಸ್ವಾರಸ್ಯವಿಲ್ಲದ, ವೈವಿಧ್ಯಮಯ ಕಾಣದ ದುರ್ಬಲ ದಾಳಿಯ ಪರಿಣಾಮವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮತ್ತೊಂದು ಸೋಲು ಬಂದೆರಗಿದೆ. ಇದರೊಂದಿಗೆ ರಾಯಲ್ ಚಾಲೆಂಜರ್ಸ್ ತಂಡದ ಆಟಗಾರರು ಸೋಲಿನ ಕಹಿ ಭಾವನೆಯೊಂದಿಗೆ ಏಳನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟಿ-20 ಕ್ರಿಕೆಟ್ ಟೂರ್ನಿಗೆ ವಿದಾಯ ಹೇಳಬೇಕಾಗಿದೆ.
ನಗರದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಎರಡು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ 8 ವಿಕೆಟ್ಗಳಿಂದ ರಾಯಲ್ ಚಾಲೆಂಜರ್ಸ್ ತಂಡವನ್ನು ಸುಲಭವಾಗಿ ಸದೆಬಡಿಯಿತು.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ರಾಯಲ್ ಚಾಲೆಂಜರ್ಸ್ ತಂಡ ತವರು ನೆಲದ ಲಾಭ ಪಡೆದುಕೊಳ್ಳಲಿಲ್ಲ. ನಿಗದಿತ 20 ಓವರುಗಳಲ್ಲಿ 6 ವಿಕೆಟ್ ನಷ್ಟಕ್ಕೆ 154 ರನ್ಗಳಿಸಲಷ್ಟೇ ಶಕ್ತವಾಯಿತು.
ನಾಲ್ಕನೇ ಕ್ರಮಾಂಕದಲ್ಲಿ ಆಡಲಿಳಿದ ನಾಯಕ ವಿರಾಟ್ ಕೊಹ್ಲಿ (73ರನ್, 49 ಎಸೆತ, 2 ಬೌಂಡರಿ, 5 ಸಿಕ್ಸರ್) ಸ್ಫೋಟಕ ಅರ್ಧಶತಕ ಬಿಟ್ಟರೆ ಇತರೆ ದಾಂಡಿಗರ ವೈಫಲ್ಯದಿಂದಾಗಿ ತಂಡಕ್ಕೆ ಬೃಹತ್ ಮೊತ್ತ ಸಂಪಾದಿಸಲಾಗಲಿಲ್ಲ. ಕೊಹ್ಲಿ ಅವರು ನಾಲ್ಕನೇ ವಿಕೆಟ್ಗೆ ಯುವರಾಜ್ ಜೊತೆ 55 ರನ್ ಹಾಗೂ ಐದನೇ ವಿಕೆಟ್ಗೆ ಡಿವಿಲಿಯರ್ಸ್ ಜೊತೆ 42 ರನ್ ಪೇರಿಸಿದ್ದೇ ರಾಯಲ್ ಚಾಲೆಂಜರ್ಸ್ ಬ್ಯಾಟಿಂಗ್ನ ವೈಶಿಷ್ಟ್ಯ ಎನಿಸಿತು.
ಆತಿಥೇಯ ತಂಡದ ಮೊತ್ತ 33 ರನ್ಗಳಾಗುವಷ್ಟರಲ್ಲಿ ಅಗ್ರಕ್ರಮಾಂಕದ ಮೂವರು ದಾಂಡಿಗರು ಪೆವಿಲಿಯನ್ ಸೇರಿದರು. ಮಧ್ಯಮ ಹಂತದಲ್ಲಿ ಯುವರಾಜ್ ಸಿಂಗ್ (25ರನ್, 24 ಎಸೆತ, 2 ಬೌಂಡರಿ) ಸ್ಫೋಟಿಸುವ ಪ್ರಯತ್ನ ಮಾಡಿದರಾದರೂ ಅಷ್ಟೇ ವೇಗದಲ್ಲಿ ಪೆವಿಲಿಯನ್ಗೂ ಸೇರಿದರು.
ಈ ಮೊದಲೇ ಪ್ಲೇಆಫ್ ಸುತ್ತಿನ ಹಾದಿಯಿಂದ ಹೊರಬಿದ್ದಿದ್ದ ಆರ್ಸಿಬಿ ತಂಡಕ್ಕೆ ಇಂದಿನ ಪಂದ್ಯ ಮಹತ್ವದ್ದಾಗಿರಲಿಲ್ಲ. ಹಾಗೆಂದು ರಾಯಲ್ ಚಾಲೆಂಜರ್ಸ್ ಆಟದಲ್ಲಿ ಉತ್ಸಾಹ ಅಥವಾ ಹೋರಾಡಬೇಕೆನ್ನುವ ಛಲ ಕಂಡುಬರಲಿಲ್ಲ. ಬ್ಯಾಟ್ಸ್ಮನ್ಗಳು ಮೈಚಳಿಬಿಟ್ಟು, ಉತ್ಸಾಹದಿಂದ ಎದುರಾಳಿ ಬೌಲರ್ಗಳ ಮುಗಿಬೀಳುವಲ್ಲಿ ಹಿಂದೆ ಬಿದ್ದರು.
ಚೆನ್ನೈ ಪರ ಹಿರಿಯ ಎಡಗೈ ಮಧ್ಯಮ ವೇಗಿ ಆಶಿಶ್ ನೆಹ್ರಾ 2 ವಿಕೆಟ್ ಉರುಳಿಸಿದರು.
ಚೆನ್ನೈ ವಿಜಯೋತ್ಸವ: 155 ರನ್ಗಳ ಗುರಿ ಪಡೆದಿದ್ದ ಚೆನ್ನೈ ಸೂಪರ್ ಕಿಂಗ್ಸ್ ಇನ್ನೂ 14 ಎಸೆತಗಳು ಉಳಿದಿರುವಂತೆಯೇ ಕೇವಲ 2 ವಿಕೆಟ್ ಒಪ್ಪಿಸಿ 160 ರನ್ಗಳೊಂದಿಗೆ ಸುಲಭವಾಗಿ ಗೆಲವಿನಿಂದ ಕುಣಿದು ಕುಪ್ಪಳಿಸಿತು.
ಇನಿಂಗ್ಸ್ ಆರಂಭಿಸಿದ ಡ್ವೈನ್ ಸ್ಮಿತ್ (34ರನ್, 17 ಎಸೆತ, 4 ಬೌಂಡರಿ, 1 ಸಿಕ್ಸರ್) ಮತ್ತು ಫಫ್ ಡು ಪ್ಲೆಸಿಸ್ (ಅಜೇಯ 54, 43 ಎಸೆತ, 3 ಬೌಂಡರಿ, 3 ಸಿಕ್ಸರ್) ಮೊದಲ ವಿಕೆಟ್ಗೆ ಕೇವಲ 26 ಎಸೆತಗಳಲ್ಲಿ 57 ರನ್ ಪೇರಿಸಿ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟರು.
ಮಧ್ಯಮ ಹಂತದಲ್ಲಿ ನಾಯಕ ಮಹೇಂದ್ರ ಸಿಂಗ್ ಧೋನಿ (ಅಜೇಯ 49, 28 ಎಸೆತ, 4 ಬೌಂಡರಿ, 3 ಸಿಕ್ಸರ್) ಅಬ್ಬರಿಸಿ ಚೆನ್ನೈ ತಂಡದ ಗೆಲವು ಖಾತ್ರಿಪಡಿಸಿದರು. ಮೊನಚಿಲ್ಲದ ಆರ್ಸಿಬಿ ದಾಳಿಯನ್ನು ಸುಲಭವಾಗಿ ದಂಡಿಸಿದ ಚೆನ್ನೈ ದಾಂಡಿಗರು ಹೆಚ್ಚು ಶ್ರಮಪಡಲಿಲ್ಲ.
ಇಂದಿನ ಪಂದ್ಯದಲ್ಲಿ ಆರ್ಸಿಬಿ ತಂಡ ಕ್ರಿಸ್ ಗೇಯ್ಲ್, ಮುತ್ತಯ್ಯ ಮುರಳೀಧರನ್, ಅಶೋಕ್ ದಿಂಡಾ ಮತ್ತು ಅಬು ನೆಚಿಮ್ ಅಹ್ಮದ್ರನ್ನು ಕೈಬಿಟ್ಟು, ರವಿ ರಾಮ್ಪಾಲ್, ರೈಲೀ ರುಸ್ಸೋ, ವಿಜಯ್ ಜೋಲ್ ಮತ್ತು ಶದಾಬ್ ಜಕಾತಿಗೆ ಸ್ಥಾನ ನೀಡಿತ್ತು. ಚೆನ್ನೈ ತಂಡದಲ್ಲಿ ಜಾನ್ ಹಾಸ್ಟಿಂಗ್ಸ್ ಮತ್ತು ಪವನ್ ನೇಗಿ ಬದಲು ಆಶಿಶ್ ನೆಹ್ರಾ ಮತ್ತು ಸ್ಯಾಮುಯೆಲ್ ಬದ್ರಿಗೆ ಅವಕಾಶ ಕಲ್ಪಿಸಲಾಗಿತ್ತು.
ಸ್ಕೋರ್ ವಿವರ
ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್ಗಳಲ್ಲಿ 6 ವಿಕೆಟ್ಗೆ 154
ರೊಸೋ ಬಿ ನೆಹ್ರಾ 1, ಟಕಾವಾಲೆ ಎಲ್ಬಿ ಅಶ್ವಿನ್ 19, ವಿಜಯ್ ಜೋಲ್ ಬಿ ಶರ್ಮಾ 13, ಕೊಹ್ಲಿ ಬಿ ನೆಹ್ರಾ 73, ಯುವರಾಜ್ ಸಿ ರೈನಾ ಬಿ ಜಡೇಜಾ 25, ಡಿವಿಲಿಯರ್ಸ್ ಬಿ ನೆಹ್ರಾ 10, ರಾಣಾ ಅಜೇಯ 5, ಸ್ಟಾರ್ಕ್ ಅಜೇಯ 2, ಇತರೆ (ಲೆಗ್ಬೈ-2, ವೈಡ್-4) 6. ವಿಕೆಟ್ ಪತನ: 1-2, 2-31, 3-33, 4-88, 5-130, 6-150.
ಬೌಲಿಂಗ್ ವಿವರ: ನೆಹ್ರಾ 4-0-33-3, ಬದ್ರಿ 3-0-29-0, ಅಶ್ವಿನ್ 4-0-33-1, ಇಶಾಂತ್ ಶರ್ಮಾ 3-0-16-1, ರೈನಾ 4-0-27-0, ಜಡೇಜಾ 2-0-14-1.
ಚೆನ್ನೈ ಸೂಪರ್ ಕಿಂಗ್ಸ್ 17.4 ಓವರ್ಗಳಲ್ಲಿ 2 ವಿಕೆಟ್ಗೆ 160
ಡ್ವೈನ್ ಸ್ಮಿತ್ ಸಿ ಕೊಹ್ಲಿ ಬಿ ರಾಮ್ಪಾಲ್ 34, ಫಫ್ ಡು ಪ್ಲೆಸಿಸ್ ಅಜೇಯ 54, ಸುರೇಶ್ ರೈನಾ, ಸ್ಟಂಪ್ ಟಕಾವಾಲೆ ಬಿ ಯುವರಾಜ್ 18, ಮಹೇಂದ್ರ ಸಿಂಗ್ ಧೋನಿ ಅಜೇಯ 49, ಇತರೆ (ಬೈಸ್-4, ವೈಡ್-1) 5 ವಿಕೆಟ್ ಪತನ: 1-57, 2-85.
ಬೌಲಿಂಗ್ ವಿವರ: ಶಹಬಾಜ್ ಜಕಾತಿ, 3.4-0-41-0, ಆರ್. ರಾಮ್ಪಾಲ್ 2-0-21-1, ಮಿಚೆಲ್ ಸ್ಟಾರ್ಕ್ 3-0-33-0, ಯಜ್ವೇಂದ್ರ ಚಹಾಲ್ 4-0-24-0, ಎಸ್. ರಾಣಾ 1-0-7-0, ಯುವರಾಜ್ 4-0-30-1.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


