ಕ್ರೀಡೆ

ಬಾಂಗ್ಲಾದೇಶ ಪ್ರವಾಸಕ್ಕೆ ಮೂವರು ಕನ್ನಡಿಗರು

Published On :

ಮುಂಬೈ: ಬಾಂಗ್ಲಾದೇಶ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಭಾರತ ತಂಡ ಪ್ರಕಟಿಸಲಾಗಿದ್ದು, ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ. ಎಡಗೈ ಅನುಭವಿ ಬ್ಯಾಟ್ಸ್‌ಮನ್ ಸುರೇಶ್ ರೈನಾ ಹೆಗಲಿಗೆ ನಾಯಕತ್ವದ ಜವಾಬ್ದಾರಿ ಹೊರಿಸಲಾಗಿದೆ.
ಕರ್ನಾಟಕದ ಮೂವರು ಆಟಗಾರರಿಗೆ ತಂಡದಲ್ಲಿ ಸ್ಥಾನ ದೊರೆತಿರುವುದು ವಿಶೇಷ. ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಕೋಲ್ಕತಾ ನೈಟ್ ರೈಡರ್ಸ್ ತಂಡದ ಆಟಗಾರ ರಾಬಿನ್ ಉತ್ತಪ್ಪ ಅಲ್ಲದೆ, ಆಲ್‌ರೌಂಡರ್ ಸ್ಟುವರ್ಟ್ ಬಿನ್ನಿ ಮತ್ತು ಮಧ್ಯಮ ವೇಗದ ಬೌಲರ್ ಆರ್. ವಿನಯ್‌ಕುಮಾರ್ ಅವರು ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ಮೂವರು ಕನ್ನಡಿಗರಾಗಿದ್ದಾರೆ. ರಾಬಿನ್ ಉತ್ತಪ್ಪ 2008ರಲ್ಲಿ ಏಕದಿನ ಪಂದ್ಯವಾಡಿದ್ದು, 6 ವರ್ಷಗಳ ನಂತರ ತಂಡಕ್ಕೆ ಮರಳಿದ್ದಾರೆ.
ರಾಷ್ಟ್ರೀಯ ಆಯ್ಕೆ ಸಮಿತಿ ಮುಖ್ಯಸ್ಥ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ನಡೆದ ಮ್ಯಾರಥಾನ್ ಸಭೆಯ ಬಳಿಕ ಬಿಸಿಸಿಐ ಕಾರ್ಯದರ್ಶಿ ಸಂಜಯ್ ಪಟೇಲ್ ಆಟಗಾರರ ಪಟ್ಟಿ ಬಿಡುಗಡೆ ಮಾಡಿದರು.  
ಧೋನಿ ಮತ್ತು ಕೊಹ್ಲಿ ಹೊರತಾಗಿ ಇನ್ನಿತರ ಪ್ರಮುಖ ಆಟಗಾರರಾದ ರೋಹಿತ್ ಶರ್ಮಾ, ಶಿಖರ್ ಧವನ್, ಆರ್. ಅಶ್ವಿನ್, ರವೀಂದ್ರ ಜಡೇಜಾ ಮತ್ತು ಶಮಿ ಅಹ್ಮದ್ ಅವರಿಗೂ ಸಹ ವಿಶ್ರಾಂತಿ ನೀಡಲಾಗಿದೆ. ಧೋನಿ ಬದಲು ವೃದ್ಧಿಮಾನ್ ಸಹಾ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿರ್ವಹಿಸಲಿದ್ದಾರೆ.
ಬಾಂಗ್ಲಾದೇಶ ಪ್ರವಾಸದಲ್ಲಿ ಭಾರತ ತಂಡದ ಆಟಗಾರರು ಆತಿಥೇಯ ತಂಡದ ವಿರುದ್ಧ ಜೂನ್ 15, 17 ಮತ್ತು 19ರಂದು ಕ್ರಮವಾಗಿ ಮೂರು ಏಕದಿನ ಪಂದ್ಯಗಳನ್ನಾಡಲಿದ್ದಾರೆ. ಈ ಪಂದ್ಯಗಳು ಢಾಕಾದಲ್ಲಿ ನಡೆಯಲಿವೆ.
ಇಂಗ್ಲೆಂಡ್ ಸರಣಿಗೆ ಜಹೀರ್ ಇಲ್ಲ: ಈ ಮಧ್ಯೆ ಜೂನ್ 28ರಿಂದ ಆರಂಭವಾಗಲಿರುವ ಇಂಗ್ಲೆಂಡ್ ಪ್ರವಾಸಕ್ಕೂ ಭಾರತದ ಟೆಸ್ಟ್ ತಂಡವನ್ನು ಇಂದೇ ಆಯ್ಕೆ ಮಾಡಲಾಯಿತು. ಈ ಪ್ರವಾಸದಲ್ಲಿ ಭಾರತದ ಆಟಗಾರರು ಐದು ಟೆಸ್ಟ್, ಐದು ಏಕದಿನ ಹಾಗೂ ಒಂದು ಟಿ-20 ಪಂದ್ಯವನ್ನು ಆಡಲಿದ್ದಾರೆ. ಮೊದಲಿಗೆ ಟೆಸ್ಟ್ ಸರಣಿ ನಡೆಯಲಿದ್ದು ಅದಕ್ಕಾಗಿ ಮಾತ್ರ ತಂಡ ಪ್ರಕಟಿಸಲಾಗಿದೆ. ಏಕದಿನ ಸರಣಿಗಾಗಿ ನಂತರದಲ್ಲಿ ತಂಡವನ್ನು ಆಯ್ಕೆ ಮಾಡಲಾಗುತ್ತದೆ.
ಡಿಸೆಂಬರ್ 2012ರಲ್ಲಿ ತಮ್ಮ ಕೊನೆಯ ಟೆಸ್ಟ್ ಪಂದ್ಯವಾಡಿದ್ದ ಗೌತಮ್ ಗಂಭೀರ್ ಮತ್ತೆ ಭಾರತ ಟೆಸ್ಟ್ ತಂಡಕ್ಕೆ ಮರಳಿದ್ದರೆ, ಹಿರಿಯ ಬೌಲರ್ ಜಹೀರ್ ಖಾನ್‌ರನ್ನು ಕೈಬಿಡಲಾಗಿದೆ. ಕರ್ನಾಟಕದ ಸ್ಟುವರ್ಟ್ ಬಿನ್ನಿ ಸಹ ಟೆಸ್ಟ್ ತಂಡಕ್ಕೆ ಅಚ್ಚರಿಯಾಗಿ ಆಯ್ಕೆಯಾಗಿದ್ದಾರೆ.
ಧೋನಿ ತಂಡವನ್ನು ಮುನ್ನಡೆಸಲಿದ್ದು, ಕೊಹ್ಲಿ ಸೇರಿದಂತೆ ಇತರೆ ಕೆಲ ಪ್ರಮುಖ ಆಟಗಾರರು ವಿಶ್ರಾಂತಿ ನಂತರ ಇಂಗ್ಲೆಂಡ್ ಪ್ರವಾಸಕ್ಕಾಗಿ ಮತ್ತೆ ತಂಡಕ್ಕೆ ಮರಳಲಿದ್ದಾರೆ.

ಬಾಂಗ್ಲಾ ಏಕದಿನ ಸರಣಿಗೆ ತಂಡ
ಸುರೇಶ್ ರೈನಾ (ನಾಯಕ), ರಾಬಿನ್ ಉತ್ತಪ್ಪ, ಅಜಿಂಕ್ಯಾ ರಹಾನೆ, ಚೇತೇಶ್ವರ ಪೂಜಾರ, ಅಂಬಟಿ ರಾಯುಡು, ಮನೋಜ್ ತಿವಾರಿ, ಕೇದಾರ್ ಜಾಧವ್, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಪರ್ವೇಜ್ ರಸೂಲ್, ಅಕ್ಷರ್ ಪಟೇಲ್, ಆರ್. ವಿನಯ್‌ಕುಮಾರ್, ಉಮೇಶ್ ಯಾದವ್, ಸ್ಟುವರ್ಟ್ ಬಿನ್ನಿ, ಮೋಹಿತ್ ಶರ್ಮಾ, ಅಮಿತ್ ಮಿಶ್ರಾ.

ಇಂಗ್ಲೆಂಡ್ ಪ್ರವಾಸಕ್ಕೆ ಟೆಸ್ಟ್ ತಂಡ
ಮಹೇಂದ್ರ ಸಿಂಗ್ ಧೋನಿ (ನಾಯಕ), ಮುರಳಿ ವಿಜಯ್, ಶಿಖರ್ ಧವನ್, ಗೌತಮ್ ಗಂಭೀರ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯಾ ರಹಾನೆ, ರೋಹಿತ್ ಶರ್ಮಾ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಈಶ್ವರ್ ಪಾಂಡೆ, ಇಶಾಂತ್ ಶರ್ಮಾ, ಸ್ಟುವರ್ಟ್ ಬಿನ್ನಿ, ವರುಣ್ ಆರುಣ್, ವೃದ್ಧಿಮಾನ್ ಸಹಾ, ಪಂಕಜ್ ಸಿಂಗ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.