

ಬೆಂಗಳೂರು: ರಾಜೀವ್ ಗಾಂಧಿ ಖೇಲ್ ರತ್ನ 2015ರ ಪ್ರಶಸ್ತಿಗೆ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರನ್ನು ಆಯ್ಕೆ ಮಾಡಿರುವ ವಿಚಾರ ಈಗ ರಾಜ್ಯ ಹೈಕೋರ್ಟ್ ಮೆಟ್ಟಿಲೇರಿದೆ.
ಸಾನಿಯಾ ಮಿರ್ಜಾ ಅವರನ್ನು ಪ್ರಸಕ್ತ ಸಾಲಿನ ಖೇಲ್ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ನಿಯಮಾವಳಿಗೆ ವಿರುದ್ಧವಾಗಿದೆ ಎಂದು ಆರೋಪಿಸಿ ಅಂತಾರಾಷ್ಟ್ರೀಯ ಪ್ಯಾರಾಲಿಂಪಿಕ್ ಕ್ರೀಟಾಪಟು ಬೆಂಗಳೂರಿನ ಎಚ್.ಎನ್.ಗಿರೀಶ್ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿದಾರರ ಪರ ವಕೀಲ ಎಂ.ಎಸ್. ಶ್ಯಾಮಸುಂದರ್, ಕೋರ್ಟ್ ಕಲಾಪ ಮುಕ್ತಾಯದ ವೇಳೆಯಲ್ಲಿ ಈ ಪ್ರಕರಣವನ್ನು ನ್ಯಾ.ಎ.ಎಸ್.ಬೋಪಣ್ಣ ಅವರಿದ್ದ ಏಕಸದಸ್ಯ ಪೀಠದ ಗಮನಕ್ಕೆ ತಂದರು.
ಇದೇ 29ರಂದು ಪ್ರಶಸ್ತಿ ನೀಡಿಕೆ ಸಮಾರಂಭ ಆಯೋಜನೆಗೊಂಡಿರುವ ಹಿನ್ನೆಲೆಯಲ್ಲಿ ತುರ್ತಾಗಿ ಈ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು ಎಂದು ಕೋರಿದರು. ದಿನದ ಕಲಾಪದ ಅವಧಿ ಪೂರ್ಣಗೊಂಡ ಕಾರಣ ನ್ಯಾಯಮೂರ್ತಿಗಳು ಈ ಪ್ರಕರಣದ ವಿಚಾರಣೆ ಬುಧವಾರ ಕೈಗೆತ್ತಿಕೊಳ್ಳುವುದಾಗಿ ಅರ್ಜಿದಾರರ ಪರ ವಕೀಲರಿಗೆ ಮೌಖಿಕವಾಗಿ ತಿಳಿಸಿದರು.