ಕುಸಿದ ಕರ್ನಾಟಕದಿಂದ ತಿರುಗೇಟು

ವೇಗದ ಬೌಲರ್‍ಗಳಿಗೆ ಭರ್ಜರಿ ಸಾಥ್ ನೀಡುತ್ತಿರುವ ಎಂಸಿಎ ಕ್ರಿಕೆಟ್ ಮೈದಾನವು ಆತಿಥೇಯ ಮಹಾರಾಷ್ಟ್ರ ಮತ್ತು ಪ್ರವಾಸಿ ಕರ್ನಾಟಕ ನಡುವಣದ ರಣಜಿ ಪಂದ್ಯವನ್ನು...
ವಿನಯ್ ಕುಮಾರ್
ವಿನಯ್ ಕುಮಾರ್
Updated on: 
ಪುಣೆ: ವೇಗದ ಬೌಲರ್‍ಗಳಿಗೆ ಭರ್ಜರಿ ಸಾಥ್ ನೀಡುತ್ತಿರುವ ಎಂಸಿಎ ಕ್ರಿಕೆಟ್ ಮೈದಾನವು ಆತಿಥೇಯ ಮಹಾರಾಷ್ಟ್ರ ಮತ್ತು ಪ್ರವಾಸಿ ಕರ್ನಾಟಕ ನಡುವಣದ ರಣಜಿ ಪಂದ್ಯವನ್ನು ಆರಂಭದಲ್ಲೇ ಕೌತುಕಗೊಳಿಸಿದ್ದು, ಪಂದ್ಯದ ಎರಡನೇ ದಿನದಾಟದ ಮುಕ್ತಾಯಕ್ಕೆ ಹಾಲಿ ಚಾಂಪಿಯನ್ ಕರ್ನಾಟಕ ಮತ್ತೊಮ್ಮೆ ಪಂದ್ಯದಲ್ಲಿ ಹಿಡಿತ ಸಾಧಿಸಿದೆ. 
ಹ್ಯಾಟ್ರಿಕ್ ಪ್ರಶಸ್ತಿಯ ಕನಸಿನಲ್ಲಿರುವ ಕರ್ನಾಟಕ, ಮೊದಲ ಇನ್ನಿಂಗ್ಸ್‍ನಲ್ಲಿ ಆತಿಥೇಯರ ವಿರುದ್ಧ 32 ರನ್‍ಗಳ ಮಹತ್ವದ ಹಿನ್ನಡೆ ಅನುಭವಿಸಿದರೂ, ಬಳಿಕ ಎರಡನೇ ಇನ್ನಿಂಗ್ಸ್‍ನಲ್ಲಿ ಮಹಾರಾಷ್ಟ್ರದ ವಿರುದ್ಧ ತಿರುಗಿಬಿದ್ದು ತಿರುಗೇಟು ನೀಡಿದೆ. ಅದರ ಮೇಲಿನ ಕ್ರಮಾಂಕವನ್ನು ಅಸ್ಥಿರಗೊಳಿಸುವ ಕಾಯಕದಲ್ಲಿ ತಕ್ಕಮಟ್ಟಿಗೆ ಯಶ ಕಂಡಿರುವ ನಿಮಿತ್ತ ಬಹುಶಃ ಮತ್ತೊಂದು ರಣಜಿ ಪಂದ್ಯವು ಮೂರೇ ದಿನಕ್ಕೆ ಮುಕ್ತಾಯವಾಗುವ ಸಂಭವವಿದೆ. 
ಮಹಾ ತತ್ತರ ಹಾಗೂ ಚೇತರಿಕೆ: ಕರ್ನಾಟಕದ ವಿರುದ್ಧ ಸಂಘಟಿತ ದಾಳಿ ನಡೆಸಿ ಅದರ ಮೊದಲ ಇನ್ನಿಂಗ್ಸ್ ಅನ್ನು 180 ರನ್‍ಗಳಿಗೆ ನಿಯಂತ್ರಿಸಿದ ಮಹಾರಾಷ್ಟ್ರ ಬಳಿಕ ಬ್ಯಾಟಿಂಗ್‍ಗೆ ಇಳಿದು ತತ್ತರಿಸಿ ಬಳಿಕ ಚೇತರಿಸಿಕೊಂಡಿತು. ವೇಗಿಗಳಾದ ವಿನಯ್ ಕುಮಾರ್ ಮತ್ತು ಶ್ರೀನಾಥ್ ಅರವಿಂದ್ ತಲಾ 2 ವಿಕೆಟ್ ಪಡೆದು ಆತಿಥೇಯರನ್ನು ಘಾಸಿಗೊಳಿಸಿದರು. ಇದರ ಫಲವಾಗಿ ಮಹಾರಾಷ್ಟ್ರ 30 ಓವರ್‍ಗಳಲ್ಲಿ 4 ವಿಕೆಟ್‍ಗೆ 70 ರನ್ ಗಳಿಸಿತ್ತು. ಆ ಮೂಲಕ 102 ರನ್‍ಗಳ ಮುನ್ನಡೆ ಕಂಡಿದೆ. ರಾಹುಲ್ ತ್ರಿಪಾಠಿ ಮತ್ತು ನಾಯಕ ಕೇದಾರ್ ಜಾಧವ್ ಕ್ರಮವಾಗಿ 31 ಮತ್ತು 10 ರನ್ ಗಳಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಆರಂಭಿಕ ಹೊಡೆತವನ್ನು ಮೆಟ್ಟಿನಿಂತ ಈ ಜೋಡಿ 5ನೇ ವಿಕೆಟ್‍ಗೆ ಮುರಿಯದ 31 ರನ್ ಕಲೆಹಾಕಿದೆ. ಉಳಿದ ಆರು ವಿಕೆಟ್‍ಗಳಿಂದ ಇನ್ನಷ್ಟು ರನ್ ಕ್ರೋಡಿsೀಕರಿಸಿ ಆ ಮೂಲಕ ಪ್ರವಾಸಿಗರಿಗೆ ಸ್ಪರ್ಧಾತ್ಮಕ ಮೊತ್ತದ ಗುರಿ ನೀಡಲು ಮಹಾರಾಷ್ಟ್ರ ಕಾರ್ಯತಂತ್ರ ಹೆಣೆದಿದೆ. ವೇಗಿಗಳಿಗೆ ಪಿಚ್ ಪೂರಕವಾಗಿ ಸ್ಪಂದಿಸುತ್ತಿರುವುದರಿಂದ ಕರ್ನಾಟಕ ಇದರ ಲಾಭಪಡೆಯಬೇಕಿದೆ. 
ಜತೆಗೆ ಸಾಧ್ಯವಾದಷ್ಟು ಶೀಘ್ರಗತಿಯಲ್ಲಿ ಮಹಾರಾಷ್ಟ್ರದ ಎರಡನೇ ಇನ್ನಿಂಗ್ಸ್‍ಗೆ ಇತಿಶ್ರೀ ಹಾಡಬೇಕಿದೆ. ಏಕೆಂದರೆ, 200 ಇಲ್ಲವೇ 250+ ರನ್ ಗುರಿ ಕೂಡ ಈ ಪಿಚ್‍ನಲ್ಲಿ ತ್ರಾಸದಾಯಕವಾಗುವ ಲಕ್ಷಣಗಳಿದ್ದು, ವಿನಯ್ ಪಡೆಗೆ ಸದ್ಯ ಅಕ್ಷರಶಃ ಮಾಡು ಇಲ್ಲವೇ ಮಡಿ ಹೋರಾಟದ ಅನಿವಾರ್ಯತೆ ಬಂದೊದಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com