ಕ್ರೀಡೆ

ಬೆಂಗಳೂರಿಗೆ ಕಾಲಿಟ್ಟ ಬಬಲ್ ಫುಟ್ಬಾಲ್

ಬೆಂಗಳೂರಿಗೆ ಕಾಲಿಟ್ಟ ಬಬಲ್ ಫುಟ್ಬಾಲ್
ಬಬಲ್ ಫುಟ್ ಬಾಲ್ (ಸಂಗ್ರಹ ಚಿತ್ರ)
Published On :

ಬೆಂಗಳೂರು: ಫುಟ್ಬಾಲ್‍ನ ವಿಭಿನ್ನ ಮಾದರಿಯಾಗಿರುವ ಬಬಲ್ ಫುಟ್ಬಾಲ್ ಬೆಂಗಳೂರಿಗೆ ಕಾಲಿಟ್ಟಿದೆ. ಈ ಮಾದರಿಯನ್ನು ನಗರಕ್ಕೆ ಪರಿಚಯಿಸಲು ಇಂಡಿಯಾ ಫುಟ್ಬಾಲ್ ಟೂರ್ ಸಂಸ್ಥೆ  ಪ್ರಯತ್ನ ಮಾಡಿದೆ.

ಎಂಟಿವಿ ರೋಡೀಸ್ ನ ನಿರೂಪಕ ರಣ್ವಿಜಯ್  ಸಿಂಗ್ ಅವರ ತಂಡವು ಬೆಂಗಳೂರಿನ ಸ್ಥಳೀಯ ತಂಡದ ವಿರುದ್ಧ ಪಂದ್ಯವನ್ನು ಆಡಿತು. ಮನರಂಜನೆಯಿಂದ ಕೂಡಿರುವ ಈ ಮಾದರಿಯ  ಪಂದ್ಯದಲ್ಲಿ ರಣ್ವಿಜಯ್  ತಂಡ ಗೆಲುವು ಸಾಧಿಸಿತು. ಇಂಡಿಯಾ ಫುಟ್ಬಾಲ್ ಟೂರ್ ಸಂಸ್ಥೆ 5 ಎ ಸೈಡ್ ಟೂರ್ನಿಯನ್ನು ದೇಶದ ಪ್ರಮುಖ 8 ನಗರಗಳಲ್ಲಿ ಆಯೋಜಿಸುತ್ತಿದ್ದು, ಒಟ್ಟು 256  ತಂಡಗಳು ಭಾಗವಹಿಸಲಿವೆ. ಇದರ ಭಾಗವಾಗಿ ಬೆಂಗಳೂರಿನಲ್ಲಿಯೂ ಪಂದ್ಯ ಜರುಗಿದೆ. ಅಂದಹಾಗೆ ಈ ಪಂದ್ಯಾವಳಿಯ ಫೈನಲ್ ಪಂದ್ಯವನ್ನು ಗೋವಾದಲ್ಲಿ ನಡೆಸಲಾಗುತ್ತಿದೆ.

ಅಲ್ಲಿ ಗೆದ್ದ ತಂಡ 2017ರಲ್ಲಿ ಥಾಯ್ಲೆಂಡ್ ನಲ್ಲಿ ನಡೆಯಲಿರುವ ಬಬಲ್ ಫುಟ್ಬಾಲ್ ವಿಶ್ವಕಪ್ ನಲ್ಲಿ ಭಾರತ ತಂಡದ ಆಯ್ಕೆಗೆ ಅರ್ಹತೆ ಪಡೆಯಲಿದೆ. ಈ ಆಟದಲ್ಲಿ ಆಟಗಾರರು ತಮ್ಮ ಸುತ್ತಲೂ  ಬಬಲ್ ಗಳ ಮಾದರಿಯ ಬಲೂನ್ ಅನ್ನು ಧರಿಸಿಕೊಂಡಿರುತ್ತಾರೆ. ಈ ವೇಳೆ ಆಟಗಾರರು ಏಳುತ್ತಾ ಬೀಳುತ್ತಾ ಗೋಲು ಬಾರಿಸುವುದು ಹೆಚ್ಚು ಆನಂದ ನೀಡುತ್ತದೆ. ``ಹವ್ಯಾಸಿ ಫುಟ್ಬಾಲ್  ಆಟಗಾರರಿಗೆ ಉತ್ತೇಜನ ನೀಡುವುದು ಈ ಟೂರ್ನಿಯ ಪ್ರಮುಖ ಉದ್ದೇಶವಾಗಿದ್ದು, ವೃತ್ತಿಪರ ಆಟಗಾರರಂತೆ ಈ ಆಟಗಾರರು ಮನ್ನಣೆ ಪಡೆಯಬೇಕು'' ಎಂದು ಟೂರ್ನಿಯ ಆಯೋಜಕ  ಅದ್ರಶ್ ಸಂಸ್ಥೆ ಸಹ ಸಂಸ್ಥಾಪಕ ಶ್ರೀಹರ್ಷ ಹೇಳುತ್ತಾರೆ.

ಏನಿದು ಬಬಲ್ ಫುಟ್ಬಾಲ್?: ಈ ಮಾದರಿಯಲ್ಲಿ ಪ್ರತಿ ತಂಡ ಐವರು ಆಟಗಾರರನ್ನು ಹೊಂದಿದ್ದು, ಆಟಗಾರರು ಬಬಲ್ ಗಳ ಬಲೂನ್ ಅನ್ನು ಧರಿಸಿರುತ್ತಾರೆ. 30 ನಿಮಿಷಗಳ ಪಂದ್ಯ  ಇದಾಗಿದ್ದು, ಆಟಗಾರರು ಗೋಲು ಹೊಡೆಯುವ ಪ್ರಯತ್ನದಲ್ಲಿ ಬಿದ್ದು ಉರುಳಾಡುತ್ತಿರುತ್ತಾರೆ. ಮತ್ತೆ ಮೇಲೆದ್ದು ಗೋಲು ಹೊಡೆಯುವ ಪ್ರಯತ್ನ ನಡೆಸುವ ಪರಿ ಆಟಗಾರರು ಸೇರಿದಂತೆ ಪ್ರೇಕ್ಷಕರನ್ನು ನಗಿಸುತ್ತದೆ. ಈ ಕ್ರೀಡೆಯನ್ನು ಹೊರಾಂಗಣ ಮತ್ತು ಒಳಾಂಗಣ ಕ್ರೀಡಾಂಗಣದಲ್ಲಿ ಆಡಬಹುದಾಗಿದೆ. ಈ ಬಬಲ್ ಫುಟ್ಬಾಲ್ ಆಸ್ಟ್ರೇಲಿಯಾ, ಆಸ್ಟ್ರಿಯಾ, ಕೆನಡಾ,  ಡೆನ್ಮಾರ್ಕ್, ಈಜಿಪ್ಟ್, ಜರ್ಮನಿ, ಇಟಲಿ, ಐರ್ಲೆಂಡ್, ಲೆಬನಾನ್, ನಾರ್ವೆ, ನ್ಯೂಜಿಲೆಂಡ್, ಹಾಲೆಂಡ್, ಸ್ಕಾಟ್ಲೆಂಡ್, ಸ್ವೀಡನ್, ಸ್ಪೇನ್ ಮತ್ತು ಪೊಲೆಂಡ್‍ಗಳಲ್ಲಿ ಜನಪ್ರಿಯವಾಗಿದ್ದು, ಈಗಷ್ಟೇ ಭಾರತಕ್ಕೆ ಕಾಲಿಟ್ಟಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.