

ಪ್ರಭುತ್ವ ಸಾಧಿಸಿರುವ ನ್ಯೂಜಿಲೆಂಡ್, ಗೆಲವಿಗಾಗಿ ಲಂಕನ್ನರಿಗೆ 405 ರನ್‍ಗಳ ಬೃಹತ್ ಗುರಿ ನೀಡಿದೆ. ಪಂದ್ಯದ 4ನೇ ದಿನವಾದ ಭಾನುವಾರ ತನ್ನ ದ್ವಿತೀಯ ಇನಿಂಗ್ಸ್ ಅನ್ನು 267 ರನ್‍ಗಳಿಗೆ ಡಿಕ್ಲೇರ್ ಮಾಡಿಕೊಂಡ ನ್ಯೂಜಿಲೆಂಡ್, ಪ್ರವಾಸಿಗರಿಗೆ ಸವಾಲು ಒಡ್ಡಿತು. ಆನಂತರ, ತನ್ನ ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಶ್ರೀಲಂಕಾ, ದಿನಾಂತ್ಯದ ಹೊತ್ತಿಗೆ 3 ವಿಕೆಟ್ ನಷ್ಟಕ್ಕೆ 109 ರನ್ ಗಳಿಸಿದ್ದು, ಗೆಲವಿಗಾಗಿ ಇನ್ನೂ 296 ರನ್ ಪೇರಿಸಬೇಕಿದೆ. ಮಳೆಯಿಂದಾಗಿ ಆಗಾಗ ತೊಂದರೆಗೊಳಗಾಗುತ್ತಿರುವ ಈ ಪಂದ್ಯ ನಡೆಯುತ್ತಿರುವ ಇಲ್ಲಿನ ಪಿಚ್ ಈಗಾಗಲೇ ನಿರ್ಜೀವವಾಗಿದ್ದು, ಕೊನೆಯ ದಿನದಾಟದಲ್ಲಿ ಲಂಕಾಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಲಿದೆ.
ಲಾಥಮ್ ಶತಕ: ಭಾನುವಾರದ ದಿನದಾಟದಲ್ಲಿ ನ್ಯೂಜಿಲೆಂಡ್ ಆರಂಭಿಕ ಲಾಥಮ್ ಶತಕ ಸಿಡಿಸಿದ್ದು ವಿಶೇಷವಾಗಿತ್ತು. ಶನಿವಾರ ದಿನಾಂತ್ಯದ ಹೊತ್ತಿಗೆ 72 ರನ್ ಗಳಿಸಿದ್ದ ಲಾಥಮ್, ಭಾನುವಾರ ಕೇನ್ ವಿಲಿಯಮ್ಸನ್ ಜತೆಗೆ 2ನೇ ವಿಕೆಟ್‍ಗೆ 141 ರನ್‍ಗಳ ಜತೆಯಾಟ ನೀಡಿದರು. ಅರ್ಧಶತಕ ಪೂರೈಸಿ 72 ರನ್ ಗಳಿಸಿದ್ದ ಕೇನ್ ವಿಲಿಯಮ್ಸನ್, ಚಮೀರಾಗೆ ವಿಕೆಟ್ ಒಪ್ಪಿಸಿದ ನಂತರ, ಇನಿಂಗ್ಸ್ ಅಂತ್ಯದವರೆಗೂ ಅಜೇಯರಾಗುಳಿದ ಅವರು ಶತಕ ಸಿಡಿಸಿದರು.
ಆರಂಭದಲ್ಲೇ ಎಡವಿದ ಶ್ರೀಲಂಕಾ: ಕಿವೀಸ್ ನೀಡಿದ 405 ರನ್‍ಗಳ ಗುರಿಯೊಂದಿಗೆ ತನ್ನ ಇನಿಂಗ್ಸ್ ಆರಂಭಿಸಿದ ಶ್ರೀಲಂಕಾ, ತಂಡದ ಮೊತ್ತ ಕೇವಲ 54 ರನ್ ಆಗಿದ್ದಾಗ ಆರಂಭಿಕ ಕರುಣಾರತ್ನೆ ಅವರನ್ನು ಕಳೆದುಕೊಂಡಿತು. ಈ ವಿಕೆಟ್ ಪಡೆದಿದ್ದು ಟಿಮ್ ಸೌಥೀ. ಅಲ್ಲಿಗೆ ಲಂಕಾ, 64 ರನ್‍ಗಳಿಗೆ 2 ಪ್ರಮುಖ ವಿಕೆಟ್ ಕಳೆದುಕೊಂಡಂತಾಯಿತು. ಇದಾದ ಮೇಲೆ ಜತೆಯಾದ, ಕುಸಲ್ ಮೆಂಡಿಸ್ ಹಾಗೂ ಚಂಡೀಮಲ್ 3ನೇ ವಿಕೆಟ್‍ಗೆ 45 ರನ್ ಸೇರಿಸಿದರು.
ಮೆಕಲಂ ಸಾಧನೆ : ಈ ಪಂದ್ಯದಲ್ಲಿ ಎರಡು ಸಿಕ್ಸರ್ ಗಳಿಸಿದ ನಾಯಕ ಬ್ರೆಂಡಾನ್ ಮೆಕಲಂ, ಕ್ರಿಕೆಟ್ ಇತಿಹಾಸದಲ್ಲಿ 100 ಸಿಕ್ಸರ್ ಬಾರಿಸಿದ 2ನೇ ಕ್ರಿಕೆಟಿಗ ಎಂಬ ಖ್ಯಾತಿ ಪಾತ್ರರಾಗಿದ್ದಾರೆ. ಭಾನುವಾರ ದಿನದಾಟದಲ್ಲಿ 6 ಎಸೆತಗಳಲ್ಲಿ 2 ಸಿಕ್ಸರ್ ಸಹಿತ 17 ರನ್ ಗಳಿಸಿದರು. ಈ ಹಿಂದೆ, ಆಸ್ಟ್ರೇಲಿಯಾದ ಆ್ಯಡಮ್ ಗಿಲ್‍ಕ್ರಿಸ್ಟ್ ಈ ಸಾಧನೆ ಮಾಡಿದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.