ಮುರಳಿ, ಜಡೇಜಾ ವಾಪಸ್?

ಮುಂದಿನ ವರ್ಷ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಸೀಮಿತ ಓವರ್‍ಗಳ ಸರಣಿಗಾಗಿ ಭಾರತ ತಂಡವನ್ನು ಶನಿವಾರ (ಡಿ.19) ಆಯ್ಕೆ ಮಾಡಲಾಗುತ್ತಿದ್ದು, ದ.ಆಫ್ರಿಕಾ ವಿರುದ್ಧದ ಸರಣಿಗೆ..
ಆಯ್ಕೆ ಸಮಿತಿ ಅಧ್ಯಕ್ಷ ಸಂದೀಪ್ ಪಾಟೀಲ್ ಮತ್ತು ತಂಡ (ಸಂಗ್ರಹ ಚಿತ್ರ)
ಆಯ್ಕೆ ಸಮಿತಿ ಅಧ್ಯಕ್ಷ ಸಂದೀಪ್ ಪಾಟೀಲ್ ಮತ್ತು ತಂಡ (ಸಂಗ್ರಹ ಚಿತ್ರ)

ಮುಂಬೈ: ಮುಂದಿನ ವರ್ಷ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಸೀಮಿತ ಓವರ್‍ಗಳ ಸರಣಿಗಾಗಿ ಭಾರತ ತಂಡವನ್ನು ಶನಿವಾರ (ಡಿ.19) ಆಯ್ಕೆ ಮಾಡಲಾಗುತ್ತಿದ್ದು, ದ.ಆಫ್ರಿಕಾ ವಿರುದ್ಧದ  ಸರಣಿಗೆ ಕೈಬಿಡಲ್ಪಟ್ಟಿದ್ದ ಆಲ್‍ರೌಂಡರ್ ರವೀಂದ್ರ ಜಡೇಜಾ ಸೇರಿದಂತೆ ಮುರಳಿ ವಿಜಯ್ ಹಾಗೂ ಮೊಹಮದ್ ಶಮಿ ರಾಷ್ಟ್ರೀಯ ತಂಡಕ್ಕೆ ವಾಪಸಾಗುವ ನಿರೀಕ್ಷೆಯಲ್ಲಿದ್ದಾರೆ.

ಕಾಂಗರೂ ಪಡೆಯ ವಿರುದ್ಧ ಐದು ಏಕದಿನ ಹಾಗೂ ಎರಡು ಟಿ20 ಪಂದ್ಯಗಳ ಸರಣಿಯು ಜನವರಿ 15ರಿಂದ ಶುರುವಾಗಲಿದೆ. ಸಂದೀಪ್ ಪಾಟೀಲ್ ಸಾರಥ್ಯದ ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ತಂಡದಲ್ಲಿ ಯಾರ್ಯಾರು ಸ್ಥಾನ ಪಡೆಯುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಇನ್ನು ತಂಡದ ನಾಯಕ ಎಂ.ಎಸ್. ಧೋನಿಗೂ ಈ ಸರಣಿ ಸತ್ವಪರೀಕ್ಷೆಯಂತಿದೆ. ದ.ಆಫ್ರಿಕಾ  ವಿರುದ್ಧದ ಸರಣಿಯಲ್ಲಿ ಸೋಲನುಭವಿಸಿದ ನಂತರ ಪ್ರಸಕ್ತ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿಯಲ್ಲಿಯೂ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿರುವ ಎಂ.ಎಸ್.  ಧೋನಿ ಪಾಲಿಗೆ ಈ ಆಸ್ಟ್ರೇಲಿಯಾ ಸರಣಿ ಮಹತ್ವಪೂರ್ಣವೆನಿಸಿದೆ.

ಈ ಸರಣಿಯಲ್ಲೇನಾದರೂ ಅವರು ವಿಫಲವಾದರೆ, ಮಾರ್ಚ್ ತಿಂಗಳಿನಲ್ಲಿ ತವರಿನಲ್ಲಿ ಶುರುವಾಗಲಿರುವ ಐಸಿಸಿ ವಿಶ್ವ ಟಿ20 ಪಂದ್ಯಾವಳಿಯಲ್ಲಿ ಅವರು ತಂಡದ ಸಾರಥಿಯಾಗಿ ಉಳಿಯುವುದು  ಕಷ್ಟ ಸಾಧ್ಯವಾಗಲಿದೆ. ಅಂದಹಾಗೆ 27 ವರ್ಷದ ಆಲ್‍ರೌಂಡರ್ ರವೀಂದ್ರ ಜಡೇಜಾ ಕಳಪೆ ಫಾರ್ಮ್ ನಿಂದಾಗಿ ದ.ಆಫ್ರಿಕಾ ವಿರುದ್ಧದ ಸೀಮಿತ ಓವರ್‍ಗಳ ಸರಣಿಯಿಂದ ಕೈಬಿಡಲ್ಪಟ್ಟಿದ್ದರು.  ಆದರೆ, ಇದೇ ಹರಿಣಗಳ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ ಅವರು 23 ವಿಕೆಟ್‍ಗಳನ್ನು ಗಳಿಸಿದ್ದರು. ಇನ್ನು ಕರ್ನಾಟಕದಿಂದ ಸ್ಟುವರ್ಟ್ ಬಿನ್ನಿಯನ್ನು ಆಯ್ಕೆಸಮಿತಿ  ಪರಿಗಣಿಸುತ್ತದೋ ಇಲ್ಲವೋ ಎಂಬುದು ಕೂಡ ಅಷ್ಟೇನೂ ಖಚಿತವಾಗಿಲ್ಲ. ಆಲ್ ರೌಂಡರ್ ಎನ್ನುವ ಕಾರಣಕ್ಕೆ ಅವರು ಸ್ಥಾನ ಪಡೆದರೂ ಅಚ್ಚರಿಯಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com