

ಮೆಲ್ಬರ್ನ್: ಬಹುನಿರೀಕ್ಷಿತ ವಿಶ್ವಕಪ್ ಟೂರ್ನಿಯ ಉದ್ಘಾಟನಾ ಸಮಾರಂಭ ಫೆ.12ರ ಗುರುವಾರದಂದು ಕ್ರೈಸ್ಟ್‍ಚರ್ಚ್ ಹಾಗೂ ಮೆಲ್ಬರ್ನ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಕ್ರೈಸ್ಟ್ ಚರ್ಚ್‍ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ನ್ಯೂಜಿಲೆಂಡ್‍ನ ಖ್ಯಾತ ಕಲಾವಿದರಾದ ಸೊಲೊ3 ಮಿಯೋ, ಗಿನ್ನಿ ಬ್ಲ್ಯಾಕ್‍ಮೊರ್ ಮತ್ತು ಹೇಯ್ಲಿ ವೆಸ್ಟೆನ್ರಾ ಸೇರಿದಂತೆ ಮಾಜಿ ಕ್ರಿಕೆಟಿಗರಾದ ರಿಚರ್ಡ್ ಹ್ಯಾಡ್ಲಿ, ಸ್ಟೀಫನ್ ಫ್ಲೆಮಿಂಗ್ ಹಾಗೂ ಪ್ರಸಕ್ತ ಕಿವೀಸ್ ತಂಡದ ನಾಯಕ ಬ್ರೆಂಡನ್ ಮೆಕಲಂ ಉಪಸ್ಥಿತರಿರುತ್ತಾರೆ. ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಹಾಲಿ ಹಾಗೂ ಮಾಜಿ ವಿಶ್ವಕಪ್ ಆಟಗಾರರು ಉಪಸ್ಥಿತರಿದ್ದು, ಸಾಂಸ್ಕೃತಿಕ ಮತ್ತು ಸಂಗೀತ ಪ್ರದರ್ಶನ ನಡೆಯಲಿದೆ.
ನಂತರ ಬಾನಂಗಳದಲ್ಲಿ ಪಟಾಕಿಗಳ ಚಿತ್ತಾರ, ಹಾಗೂ ಇನ್ನಷ್ಟೇ ಪ್ರಕಟವಾಗಬೇಕಿರುವ ವಿಶೇಷ ಸಂದರ್ಭ ಒಳಗೊಂಡಿದೆ. ಈ ಕಾರ್ಯಕ್ರಮದಲ್ಲಿ ಆಸ್ಟ್ರೇಲಿಯಾದ ಖ್ಯಾತ ಕಲಾವಿದರು ಪ್ರದರ್ಶನ ನೀಡಲಿದ್ದು, ಫೆ.14ರಿಂದ ಆರಂಭವಾಗಲಿರುವ ಮಹತ್ವದ ಟೂರ್ನಿಗೆ ಅದ್ಧೂರಿ ಆರಂಭ ನೀಡಲಿದೆ.