ರಾಜ್ಯಕ್ಕೆ ಮತ್ತೆ 3 ಬೆಳ್ಳಿ ಗರಿ

ರಾಷ್ಟ್ರೀಯ ಕ್ರೀಡಾಕೂಟ: ವಾಲಿಬಾಲ್ ಫೈನಲ್ ಸೋತ ವನಿತೆಯರು,ಬಾಸ್ಕೆಟ್‍ಬಾಲ್‍ನಲ್ಲಿ ಕಂಚಿನ ಸಂಭ್ರಮ
ತಿರುವನಂತಪುರ: ಆತಿಥೇಯ ಕೇರಳ ವಾಲಿಬಾಲ್ ಆಟಗಾರ್ತಿಯರ ಹೊಂದಾಣಿಕೆಯ ಪ್ರದರ್ಶನದ ಮುಂದೆ ಹಿನ್ನಡೆ ಅನುಭವಿಸಿದ ಕರ್ನಾಟಕ ವನಿತೆಯರ ವಾಲಿಬಾಲ್ ತಂಡ, 35ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದೆ.

ಶುಕ್ರವಾರ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ  ಕರ್ನಾಟಕ ತಂಡವನ್ನು 3-1 ಅಂಕಗಳಿಂದ ಮಣಿಸಿದ ಕೇರಳ ವನಿತೆಯರು ಚಿನ್ನದ ಪದಕವನ್ನು ಬಾಚಿಕೊಂಡರು. ಆರಂಭದಿಂದಲೇ ಕೇರಳ ತಂಡ ಉತ್ತಮ ಪ್ರದರ್ಶನ ತೋರಿದ ಹಿನ್ನೆಲೆಯಲ್ಲಿ ಕರ್ನಾಟಕ 19-25, 25-23, 24-26, 12-25 ಅಂಕಗಳ ಅಂತರದಲ್ಲಿ  ಸೋಲನುಭವಿಸಿತು.

ಮಹಿಳೆಯರ ಬ್ಯಾಸ್ಕೆಟ್ ನಲ್ಲಿ ಕರ್ನಾಟಕದ ವನಿತೆಯರ ತಂಡ ಕಂಚಿಗೆ ತೃಪ್ತಿಪಟ್ಟಿತು. ಮಹಾರಾಷ್ಟ್ರ ವಿರುದ್ಧ ತೀವ್ರ ಹಣಾಹಣಿಯಿಂದ ಕೂಡಿದ್ದ ಪಂದ್ಯದಲ್ಲಿ, ಅಂತಿಮ ಕ್ಷಣದವರೆಗೂ ನಿಯಂತ್ರಣ ಸಾಧಿಸಿದ ಹಿನ್ನೆಲೆಯಲ್ಲಿ ರಾಜ್ಯ ವನಿತೆಯರು ಸ್ವಲ್ಪ ಅಂತರದಲ್ಲಿ ಗೆಲುವನ್ನು ತಮ್ಮದಾಗಿಸಿಕೊಂಡರು. ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಕರ್ನಾಟಕ 74-70 ಅಂಕಗಳ ಅಂತರದಲ್ಲಿ ಗೆದ್ದು ಬೀಗಿತು. ಈವರೆಗೆ ಕರ್ನಾಟಕ 8 ಚಿನ್ನ, 20 ಬೆಳ್ಳಿ, 24 ಕಂಚು, ಸೇರಿದಂತೆ 52 ಪದಕಗಳನ್ನು ಸಂಪಾದಿಸಿದೆ.

ಪುರುಷರ ಕಬಡ್ಡಿ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಹರ್ಯಾಣ ವಿರುದ್ಧ 25-27 ಅಂಕಗಳ ಅಂತರದಲ್ಲಿ ಸೋಲನುಭವಿಸಿತು. ಈ ಮೂಲಕ ಕೂದಲೆಳೆಯ ಅಂತರದಲ್ಲಿ ಬೆಳ್ಳಿಗೆ ತೃಪ್ತಿಪಟ್ಟಿತು.

ಮಹಿಳೆಯರ ರಿಲೇಯಲ್ಲಿ ಬೆಳ್ಳಿ: ಕರ್ನಾಟಕ ವನಿತೆಯರು 4/400 ಮೀ. ಓಟದಲ್ಲಿ ಬೆಳ್ಳಿ ಪದಕ ಸಂಪಾದಿಸಿದ್ದಾರೆ. ರಾಜ್ಯದ ಓಟಗಾರ್ತಿಯರಾದ  ವಿಜಯಕುಮಾರಿ, ರೀನಾ ವರ್ಗೀಸ್, ಅರ್ಪಿತಾ ಎಂ.ಎಂ, ಪೂವಮ್ಮ ಎಂ.ಆರ್, ಬೆಳ್ಳಿ ಪದಕ ಪಡೆದಿದ್ದಾರೆ. 3:42.66 ನಿಮಿಷದಲ್ಲಿ ಗುರಿ ತಲುಪಿದ  ರಾಜ್ಯದ ಓಟಗಾರ್ತಿಯರು ದ್ವಿತಿಯ ಸ್ಥಾನ ಪಡೆದು ಬೆಳ್ಳಿ ಪದಕ ಪಡೆದರು. ಕೇರಳದ ಓಟಗಾರ್ತಿಯರು 3:35.34 ನಿಮಿಷದಲ್ಲಿ ಗುರಿ ಮುಟ್ಟಿದ ಚಿನ್ನದ ಪದಕಕ್ಕೆ  ಕೊರಳೊಡ್ಡಿದರು. ಇನ್ನು ಹರ್ಯಾಣದ 3:43.83 ನಿಮಿಷದಲ್ಲಿ ಗುರಿ ತಲುಪಿ ಕಂಚಿಗೆ ತೃಪ್ತಿಪಟ್ಟರು. ಪುರುಷರ ಪೋಲ್ ವಾಲ್ಟ್‍ನಲ್ಲಿ ಕರ್ನಾಟಕದ ಬಾಲಕೃಷ್ಣನ್ (4.90 ಮೀ.) 3ನೇ ಸ್ಥಾನ ಪಡೆದು ಕಂಚಿನ ಪದಕ ಪಡೆದರು.

ಹೆಚ್ಚಿದ ನಿರಾಸೆ: ಅಥ್ಲೆಟಿಕ್ಸ್‍ನಲ್ಲಿ ಕರ್ನಾಟಕದ ಮಹಿಳೆಯರು 4/400 ಮೀ. ರಿಲೇಯಲ್ಲಿ ಹಾಗೂ ಪುರುಷರ ವಿಭಾಗದಲ್ಲಿ ಪೋಲ್ ವಾಲ್ಟ್ ಹೊರತುಪಡಿಸಿ ಉಳಿದ ಎಲ್ಲಾ ಸ್ಪರ್ಧೆಯಲ್ಲೂ ನಿರಾಸೆ ಅನುಭವಿಸಿದೆ.ಮಹಿಳಿಯರ ಡಿಸ್ಕಸ್ ಥ್ರೋನಲ್ಲಿ ಪ್ರಿಯಾಂಕ ಜೆ.ಎಸ್ (41.54 ಮೀ.) 8 ನೇ ಸ್ಥಾನ ಪಡೆದರು. ಮಹಿಳೆಯರ 800 ಮೀ. ನಲ್ಲಿ  ಶೃತಿ ಕೆ.ಸಿ (2:19.14 ನಿ.) 7ನೇ ಸ್ಥಾನ ಪಡೆದರು.

ಪುರುಷರ 800 ಮೀ.ನಲ್ಲಿ ರಾಜ್ಯದ ಓಟಗಾರ ಭರತ್ ಕೆ.ಎ (1:55.61 ನಿ.) 6ನೇ ಸ್ಥಾನ ಪಡೆದು ನಿರಾಸೆ ಅನುಭವಿಸಿದರು. ಮಹಿಳೆಯರ 200 ಮೀ.ನಲ್ಲಿ ಪ್ರಿಯಾಂಕ (25.18 ¸.ಸೆ ) 5ನೇ ಸ್ಥಾನ ಪಡೆದರೆ, ಪುರುಷರ 3000 ಮೀ. ಸ್ಟೀಪಲ್ ಚೇಸ್‍ನಲ್ಲಿ ಮಂಜು ಗೌಡ (9:08.85 ನಿ.) 6ನೇ ಸ್ಥಾನ ಪಡೆದರು. ಮಹಿಳೆಯರ ತ್ರಿಪ್ಟಲ್ ಜಂಪ್ ನಲ್ಲಿ  ಐಶ್ವರ್ಯ, ಜಾಯ್ ಲಿನ್ ಲೊಬೊ ಅಗ್ರ 10 ಸ್ಥಾನದಲ್ಲಿ ಕಾಣಿಸಿಕೊಳ್ಳಲು ವಿಫಲರಾದರು. ಪುರುಷರ 4/400 ಮೀ. ರಿಲೇನಲ್ಲಿ ಕರ್ನಾಟಕ (3:14.15 ನಿ.) 5ನೇ ಸ್ಥಾನ ಪಡೆದು ಮುಗ್ಗರಿಸಿದರು.

ಜೂಡೊನಲ್ಲಿ ಬೆಳ್ಳಿ: ಗುರುವಾರ ನಡೆದ ಜೂಡೊ 78ಕ್ಕೂ ಹೆಚ್ಚಿನ ಕೆ.ಜಿ ವಿಭಾಗದಲ್ಲಿ ರಾಜ್ಯದ ದೇವಿಶ್ರೀ ಕೆ ಮುತ್ತು, ಪಂಜಾಬ್ ನ ರಾಜ್ ವಿಂದರ್ ಕೌರ್ ವಿರುದ್ಧ ಫೈನಲ್‍ನಲ್ಲಿ ಸೋತು ಬೆಳ್ಳಿ ಪದಕ ಪಡೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com