
ಸಿಡ್ನಿ: ತವರಿನಲ್ಲಿ ಗೆಲವಿನ ನಾಗಾಲೋಟದಲ್ಲಿ ತೇಲುತ್ತಿರುವ ಆಸ್ಟ್ರೇಲಿಯಾ ವಿರುದ್ಧ ತ್ರಿಕೋನ ಏಕದಿನ ಸರಣಿಯ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದ್ದ ಭಾರತ ತಂಡಕ್ಕೆ ವರುಣ ವರವಾಗಿ ಪರಿಣಮಿಸಿದ್ದಾನೆ.
ಆರಂಭಿಕ ಎರಡೂ ಪಂದ್ಯಗಳಲ್ಲಿ ಸೋತು ಸುಣ್ಣವಾಗಿದ್ದ ಟೀಂ ಇಂಡಿಯಾ ತಂಡ ಅಂಕಪಟ್ಟಿಯಲ್ಲಿ ಖಾತೆ ತೆರೆದಿರಲಿಲ್ಲ. ಹಾಗಾಗಿ ಆಸ್ಟ್ರೇಲಿಯಾ ವಿರುದ್ಧ ಗೆದ್ದರೆ ಮಾತ್ರ ಭಾರತದ ಆಸೆ ಜೀವಂತವಾಗಿ ಉಳಿಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆನಂತರ, ಇಂಗ್ಲೆಂಡ್ ವಿರುದ್ಧ ಸಾಧಾರಣ ಗೆಲವು ದಾಖಲಿಸಿದ್ದರೂ ಫೈನಲ್‍ಗೆ ಪ್ರವೇಶಿಸಬಹುದಿತ್ತು. ಒಂದು ವೇಳೆ ಭಾರತ ಈ ಪಂದ್ಯದಲ್ಲಿ ಸೋತಿದ್ದರೆ, ಇಂಗ್ಲೆಂಡ್ ವಿರುದ್ಧ ಬೋನಸ್ ಅಂಕಗಳ ಜಯದ ಜತೆಗೆ ಹೆಚ್ಚು ರನ್‍ರೇಟ್ ಅನ್ನು ಕಾಯ್ದುಕೊಳ್ಳಬೇಕಾದ ಅನಿವಾರ್ಯತೆ ಇತ್ತು.
ಆದರೆ, ಸೋಮವಾರ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದ ಹಿನ್ನೆಲೆಯಲ್ಲಿ ಉಭಯ ತಂಡಗಳಿಗೂ 2 ಅಂಕಗಳನ್ನು ಹಂಚಲಾಯಿತು. ಹಾಗಾಗಿ ಭಾರತ ತಂಡ ಮುಂದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸಾಧಾರಣ ಗೆಲವು ದಾಖಲಿಸಿದರೂ ಅಂತಿಮ ಸುತ್ತಿಗೆ ಲಗ್ಗೆ ಹಾಕಲಿದೆ.
ಅಂಕಪಟ್ಟಿಯಲ್ಲಿ ಆಸ್ಟ್ರೇಲಿಯಾ 15 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಇಂಗ್ಲೆಂಡ್ ತಂಡ ಭಾರತದ ವಿರುದ್ಧ ಬೋನಸ್ ಗೆಲವಿನೊಂದಿಗೆ 5 ಅಂಕ ಸಂಪಾದಿಸಿತ್ತು. ಇನ್ನು ಭಾರತ ಈ ಪಂದ್ಯ ಫಲಿತಾಂಶ ಪಡೆಯದ ಹಿನ್ನೆಲೆಯಲ್ಲಿ 2 ಅಂಕ ಸಂಪಾದಿಸಿದೆ. ಮುಂದಿನ ಪಂದ್ಯದಲ್ಲಿ ಭಾರತ ಸಾಧಾರಣ ಗೆಲವು ದಾಖಲಿಸಿದರೂ ನಾಲ್ಕು ಅಂಕ ಪಡೆದು ಮುಂದಿನ ತನ್ನ ಖಾತೆಯಲ್ಲಿ 6 ಅಂಕವನ್ನು ಹೊಂದುವ ಅವಕಾಶವಿದೆ. ಹಾಗಾಗಿ ಈ ಪಂದ್ಯದಲ್ಲಿ ವರುಣ ಭಾರತಕ್ಕೆ ವರವಾಗಿದ್ದಾನೆ ಎಂದೇ ಭಾವಿಸಬಹುದು.
ಭಾರತ ಹಾಗೂ ಇಂಗ್ಲೆಂಡ್ ನಡುವೆ ಶುಕ್ರವಾರ ನಡೆಯಲಿರುವ ಅಂತಿಮ ಲೀಗ್ ಹಂತದ ಪಂದ್ಯ ಉಭಯರ ಪಾಲಿಗೆ ಸೆಮಿ ಫೈನಲ್ ಪಂದ್ಯವಾಗಿ ಪರಿಣಮಿಸಿದೆ. ಕಾರಣ ಈ ಪಂದ್ಯದಲ್ಲಿ ಗೆಲವು ದಾಖಲಿಸುವ ತಂಡ ಫೈನಲ್ ಹಂತಕ್ಕೆ ಪ್ರವೇಶಿಸಲಿದೆ. ಹಾಗಾಗಿ ಮುಂದಿನ ಪಂದ್ಯ ಹೆಚ್ಚು ಎರಡೂ ತಂಡಗಳ ಪಾಲಿಗೆ ಮಹತ್ವದ್ದಾಗಿದೆ. ವರುಣನ ಕಾಟ: ಪಂದ್ಯ ಆರಂಭಕ್ಕೂ ಮುನ್ನ ಮಳೆ ಸುರಿದ ಪರಿಣಾಮ ಪಂದ್ಯವನ್ನು 40 ನಿಮಿಷಗಳ ಕಾಲ ತಡವಾಗಿ ಆರಂಭಿಸಲಾಯಿತು. ನಂತರ ಭಾರತದ ಇನಿಂಗ್ಸ್ ನಲ್ಲಿ 2.4 ಓವರ್ ಆಗಿದ್ದಾಗ ಮತ್ತೆ ಧಾರಾಕಾರವಾಗಿ ಮಳೆ ಸುರಿದ ಹಿನ್ನೆಲೆಯಲ್ಲಿ ಪಂದ್ಯವನ್ನು ಕೆಲ ಕಾಲ ಸ್ಥಗಿತಗೊಳಿಸಲಾಗಿತ್ತು.
ಒಂದು ಗಂಟೆ 10 ನಿಮಿಷಗಳ ಕಾಲದ ನಂತರ ಮತ್ತೆ ಪಂದ್ಯ ಆರಂಭವಾಯಿತು. ಆಗ ಉಭಯ ತಂಡಗಳಿಗೆ 44 ಓವರ್ ನೀಡಲಾಯಿತು. ಆನಂತರ ಸ್ವಲ್ಪ ಕಾಲ ನಿಂತಿದ್ದ ಮಳೆ 16 ಓವರ್ ನಂತರ ಮತ್ತೆ ಆರಂಭವಾಯಿತು. ನಿರಂತರವಾಗಿ ಮಳೆ ಸುರಿದ ಪರಿಣಾಮ ಪಂದ್ಯವನ್ನು ಅಧಿಕೃತವಾಗಿ ರದ್ದುಗೊಳಿಸಲಾಯಿತು.
ಕೇವಲ 16 ಓವರ್ ಆಟ
ಸೋಮವಾರದ ಪಂದ್ಯದಲ್ಲಿ ಮೈದಾನದಲ್ಲಿ ತಂಡಗಳ ಆಟಕ್ಕಿಂತ ಮಳೆಯ ಆಟವೇ ಜೋರಾಗಿತ್ತು. ಹಾಗಾಗಿ ದಿನದಾಟದಲ್ಲಿ ಕೇವಲ 16 ಓವರ್ ಗಳು ಮಾತ್ರ ನಡೆದವು.
ಆರಂಭದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಬೇಯ್ಲಿ ತೇವವಾಗಿದ್ದ ಪಿಚ್‍ನ ಲಾಭ ಪಡೆಯಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಇದರಿಂದ ಮೊದಲು
ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ಭಾರತದ ಆರಂಭಿಕರು ಆರಂಭದಿಂದಲೇ ಪರದಾಡಿದರು. ಇನಿಂಗ್ಸ್ ಆರಂಭಿಸಿದ ಶಿಖರ್ ಧವನ್ ತಮ್ಮ ವೈಫಲ್ಯದ ಸರಣಿಯನ್ನು
ಮುಂದುವರಿಸಿದರು.
ತಂಡದ ಮೊತ್ತ 24 ರನ್ ಆಗಿದ್ದಾಗ 8 ರನ್ ಗಳಿಸಿದ್ದ ಧವನ್, ಮಿಚೆಲ್ ಸ್ಟಾರ್ಕ್ ಎಸೆತದಲ್ಲಿ ಪಿsಜಿಚ್‍ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಇನ್ನು 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್
ಮಾಡಿದ ಅಂಬಟಿ ರಾಯುಡು ಸಹ 23 ರನ್ ದಾಖಲಿಸಿ ಮಿಚೆಲ್ ಮಾರ್ಶ್ ಎಸೆತದಲ್ಲಿ ವಾರ್ನರ್‍ಗೆ ಕ್ಯಾಚ್ ನೀಡಿದರು. ಇನ್ನು ರಹಾನೆ 28 ಹಾಗೂ ಕೊಹ್ಲಿ 3 ರನ್ ದಾಖಲಿಸಿ ಅಜೇಯರಾದರು.
Advertisement