

ಮುಂಬೈ: ಭಾರತ ತಂಡದ ಕಾಯಂ ನಾಯಕ ಮಹೇಂದ್ರ ಸಿಂಗ್ ಧೋನಿ ತಮ್ಮ ವಿರುದ್ಧ ಮಾಡಿದ್ದ ಟೀಕೆಯನ್ನು ಸವಾಲಾಗಿ ಸ್ವೀಕರಿಸಿದ್ದೇನೆ ಎಂದು ಜಿಂಬಾಬ್ವೆ ಪ್ರವಾಸಕ್ಕೆ ಟೀಂ ಇಂಡಿಯಾ ನಾಯಕನಾಗಿ ಆಯ್ಕೆಯಾಗಿರುವ ಅಜಿಂಕ್ಯ ರಹಾನೆ ತಿಳಿಸಿದ್ದಾರೆ.
ವಿದೇಶ ಪ್ರವಾಸಕ್ಕೂ ಮುನ್ನ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಹಾನೆ, ಬಾಂಗ್ಲಾದೇಶ ಪ್ರವಾಸ ಈಗ ಅಧ್ಯಾಯವಾಗಿದೆ. ನನ್ನ ಬ್ಯಾಟಿಂಗ್ ಕುರಿತು ಧೋನಿ ಮಾಡಿದ ಟೀಕೆಯನ್ನು ನಾನು ಸಕಾರಾತ್ಮಕ ಮನೋಭಾವದಿಂದಲೇ ಸ್ವೀಕರಿಸಿದ್ದು ಜಿಂಬಾಬ್ವೆ ಪ್ರವಾಸದಲ್ಲಿ ಸ್ಥಿರ ಪ್ರದರ್ಶನ ನೀಡುವತ್ತ ಗಮನ ವಹಿಸಿದ್ದೇನೆ ಎಂದರು.
ಜಿಂಬಾಬ್ವೆ ಪ್ರವಾಸಕ್ಕೆ ಎರಡನೇ ದರ್ಜೆಯ ಇಲ್ಲವೇ ಕಿರಿಯ ಆಟಗಾರರನ್ನು ಆಯ್ಕೆ ಮಾಡುವ ಮೂಲಕ ಟೀಂ ಇಂಡಿಯಾವನ್ನು ಹಿರಿಯ-ಕಿರಿಯ ಎಂದು ವಿಂಗಡಿಸಲಾಗಿದೆ ಎಂಬ ಆರೋಪದಲ್ಲಿ ಹುರುಳಿಲ್ಲ. ಎಲ್ಲ ಹದಿನೈದು ಮಂದಿ ಆಟಗಾರರೂ ಮುಖ್ಯವೇ ಎಂದೂ ರಹಾನೆ ನುಡಿದರು.