

ನವದೆಹಲಿ:ಪದೇ ಪದೇ ರಾಷ್ಟ್ರೀಯ ಹಾಕಿ ತಂಡದ ತರಬೇತುದಾರರನ್ನು ಬದಲಾಯಿಸುವುದರರಿಂದ ಆಟಗಾರರ ಪ್ರದರ್ಶನದ ಮೇಲೆ ಪ್ರತಿಕೂಲ ಪರಿಣಾಮ
ಬೀರುತ್ತದೆಂದು ಮಾಜಿ ಒಲಿಂಪಿಯನ್ ಹಾಗೂ ಭಾರತೀಯ ಹಾಕಿ ಕ್ಷೇತ್ರದ ದಂತಕತೆ ಬಲ್ಬೀರ್ ಸಿಂಗ್ ಸೀನಿಯರ್ ಬೇಸರ ವ್ಯಕ್ತಪಡಿಸಿದ್ದಾರೆ.
ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, ಈ ಹಿಂದೆಯೂ ಕೋಚ್ ಆಗಿ ನೇಮಕಗೊಂಡಿದ್ದ ಟೆರ್ರಿ ವಾಲ್ಶ್ ಅವರನ್ನು ಏಕಾಏಕಿ ತೆಗೆದುಹಾಕಿದ್ದನ್ನು ಸ್ಮರಿಸಿಕೊಂಡರು. ಅದಕ್ಕೂ ಮುನ್ನ, ಜೋಸ್ ಬ್ರಾಸಾ, ಮೈಕೆಲ್ ನಾಬ್ಸ್ ಅವರನ್ನೂ ಒಪ್ಪಂದದ ಅವಧಿಗೂ ಮುನ್ನವೇ ವಜಾಗೊಳಿಸಿದ್ದರ ಬಗ್ಗೆಯೂ ಅವರು ಬೇಸರ ವ್ಯಕ್ತಪಡಿಸಿದರು. ಅಲ್ಲದೆ, ವಾಲ್ಶ್ ಅವರನ್ನು ತೆಗೆದುಹಾಕಿದ ಕೇವಲ ಎಂಟು ತಿಂಗಳುಗಳ ಅವಧಿಯಲ್ಲಿ ಇದೀಗ ಪಾಲ್ ಅವರೊಂದಿಗೂ ಇರುಸುಮುರುಸು ಮಾಡಿಕೊಂಡಿರುವುದಕ್ಕೆ ಅವರು ತೀವ್ರ ವಿಷಾದಿಸಿದರು.
ಮೂರು ತಿಂಗಳ ಹಿಂದಷ್ಟೇ, ಪಾಲ್ ವ್ಯಾನ್ ಆ್ಯಸ್ ಅವರು ಹಾಕಿ ಇಂಡಿಯಾ ಸಂಸ್ಥೆಯಿಂದ ತಮ್ಮನ್ನು ವಜಾಗೊಳಿಸುವುದಾಗಿ ಹೇಳಿದ್ದರು. ಇದರ ಬೆನ್ನಲ್ಲೇ ಮತ್ತೊಂದು ಹೇಳಿಕೆ ನೀಡಿದ್ದ ಅವರು, ಹಾಕಿ ಇಂಡಿಯಾ ಅಧ್ಯಕ್ಷ ಬಾತ್ರಾ ಸರ್ವಾಧಿಕಾರಿ ಧೋರಣೆ ಹೊಂದಿದ್ದಾರೆಂದೂ ಆರೋಪಿಸಿದ್ದರು.
ಇದೆಲ್ಲವನ್ನು ನಿರಾಕರಿಸಿದ್ದ ಬಾತ್ರಾ, ಹಾಕಿ ಇಂಡಿಯಾ ಸಂಸ್ಥೆ ಪಾಲ್ ಅವರನ್ನು ವಜಾಗೊಳಿಸಿಲ್ಲ ಎಂದಿದ್ದರಲ್ಲದೆ, ಪಾಲ್ ಒಬ್ಬ ಸಮರ್ಥ ಕೋಚ್ ಅಲ್ಲ ಎಂದೂ ಹೇಳಿದ್ದರು.ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಮಾತನಾಡಿದ ಬಲ್ಬೀರ್ ಸಿಂಗ್, ``ಭಾರತೀಯ ಹಾಕಿ ತಂಡಕ್ಕೆ ಭಾರತೀಯರೊಬ್ಬರನ್ನು ಕೋಚ್ ಮಾಡದೇ ವಿದೇಶಿ ಕೋಚ್ ಗಳನ್ನು ಕರೆತಂದಾಗ ತೀರಾ ಎಚ್ಚರಿಕೆಯಿಂದ ಅವರೊಡನೆ ವ್ಯವಹರಿಸಬೇಕು. ವಿದೇಶಿ ಕೋಚ್ ಗಳು ತಮ್ಮ ದೇಶದಲ್ಲಿ ಪ್ರಖ್ಯಾತಿಯನ್ನು ಗಳಿಸಿರುತ್ತಾರೆ. ಅವರ ಖ್ಯಾತಿ ಅವರ ಕೆಲಸದಲ್ಲಿ ಪರೋಕ್ಷವಾಗಿ ಪರಿಣಾಮ ಬೀರುತ್ತದೆ ಅದನ್ನು ಗೌರವಿಸಬೇಕು ಎಂದು ಅವರು
ಕಿವಿಮಾತು ಹೇಳಿದರು.