

ಹ್ಯಾಂಬರ್ಗ್: ತಮ್ಮ ಲಯವನ್ನು ಕಳೆದುಕೊಂಡು ಮಂಕಾಗಿರುವ ಸ್ಪೇನ್‍ನ ಖ್ಯಾತ ಟೆನಿಸ್ ತಾರೆ ರಾಫೆಲ್ ನಡಾಲ್, ಕ್ರೀಡೆಯಲ್ಲಿ ಮತ್ತೆ ತಮ್ಮ ನಿಯಂತ್ರಣ ಕಂಡುಕೊಳ್ಳಲು ಕ್ಲೇ ಕೋರ್ಟ್‍ನತ್ತ ಮುಖ ಮಾಡಿದ್ದಾರೆ.
ಮುಂದಿನ ವಾರ ಹ್ಯಾಂಬರ್ಗ್ ಓಪನ್ ಟೆನಿಸ್ ಟೂರ್ನಿಯಲ್ಲಿ ಪಾಲ್ಗೋಳ್ಳಲಿರುವ ನಡಾಲ್, ಟೂರ್ನಿಯಲ್ಲಿ ಅಗ್ರ ಶ್ರೇಯಾಂಕ ಪಡೆದಿದ್ದಾರೆ. ಯುಎಸ್ ಓಪನ್ ಟೆನಿಸ್ ಟೂರ್ನಿ ಸಮೀಪದಲ್ಲಿರುವಾಗಲೇ ಹ್ಯಾಂಬರ್ಗ್ ಓಪನ್‍ನಲ್ಲಿ ಆಡಲು ನಡಾಲ್ ನಿರ್ಧರಿಸಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಸದ್ಯದ ಪರಿಸ್ಥಿತಿ ಸಂಪೂರ್ಣ ವಿಬಿನ್ನವಾಗಿದೆ. ಕಳೆದ 10 ಅಥವಾ 11ವರ್ಷಗಳಿಗಿಂತ ಈ ವರ್ಷ ಹೆಚ್ಚು ಸೋಲನುಭವಿಸಿದ್ದೇನೆ. ಈ ಹೊಸ ಪರಿಸ್ಥಿತಿಯನ್ನು ಸ್ವೀಕರಿಸಬೇಕಿದೆ. ಅಲ್ಲದೆ ಈ ಬಗ್ಗೆ ಹೆಚ್ಚು ಗಮನಹರಿಸಬೇಕಿದೆ. ಕಠಿಣ ಪರಿಶ್ರಮದಿಂದ ಮತ್ತೆ ನಿಯಂತ್ರಣ ಕಂಡುಕೊಳ್ಳಬೇಕಿದೆ.
ಪ್ರಸ್ತುತ ದೈಹಿಕವಾಗಿ ಉತ್ತಮ ಸ್ಥಿತಿಯಲ್ಲಿದ್ದು, ಯಾವುದೇ ಗಾಯದ ಸಮಸ್ಯೆಗಳಿಲ್ಲದಿರುವುದು ಸಂತಸದ ವಿಚಾರ ಎಂದು ನಡಾಲ್ ತಿಳಿಸಿರುವುದಾಗಿ ಖಾಸಗಿ ಚಾನೆಲ್ ವೊಂದು ವರದಿ ಮಾಡಿದೆ. 2015ರಲ್ಲಿ ನಡಾಲ್ ವಿಶ್ವ ರ್ಯಾಂಕಿಂಗ್‍ನಲ್ಲಿ 10ನೇ ಸ್ಥಾನಕ್ಕೆ ಕುಸಿದಿದ್ದಾರೆ. ಇದು ಕಳೆದ ಒಂದು ದಶಕದಲ್ಲಿ ಅಂತ್ಯಂತ ಕೆಳ ಸ್ಥಾನವಾಗಿದೆ. ಈ ವರ್ಷ 12 ಪಂದ್ಯಗಳಲ್ಲಿ ಪರಾಭವಗೊಂಡಿದ್ದಾರೆ