

ನವದೆಹಲಿ: ಮುಂದಿನ ವಾರ ಅಮೆರಿಕದ ಯಾಂಗ್ಟನ್‍ನಲ್ಲಿ ನಡೆಯಲಿರುವ ವಿಶ್ವ ಯುವ ಆರ್ಚರಿ ಚಾಂಪಿಯನ್‍ಶಿಪ್‍ನಲ್ಲಿ ಭಾರತ ತಂಡದ ಆರ್ಚರಿಪಟುಗಳಿಗೆ ಅಮೆರಿಕ ರಾಯಭಾರ ಕಚೇರಿ ವಿಸಾ ನೀಡದ ಹಿನ್ನೆಲೆಯಲ್ಲಿ ಭಾರತ ಟೂರ್ನಿಯಿಂದ ಹೊರಬರಲು ನಿರ್ಧರಿಸಿದೆ.
ವಿಸಾ ನೀಡದಿದ್ದಕ್ಕೆ ಈ ಮೂಲಕ ಪ್ರತಿಭಟಿಸಿದೆ ಜೂನ್ 8ರಿಂದ 14ರವರೆಗೆ ಈ ಚಾಂಪಿಯನ್ ಶಿಪ್ ನಡೆಯಲಿದೆ. 31 ಸದಸ್ಯರ ಬಲಿಷ್ಠ ಭಾರತ ತಂಡದಲ್ಲಿ, ಕೊರಿಯಾ ಮೂಲದ ಕೋಚ್ ಚಯ್ ವೊಮ್ ಲಿಮ್ ಸೇರಿದಂತೆ 20 ಸದಸ್ಯರಿಗೆ ಅಮೆರಿಕ ರಾಯಭಾರಿ ಕಚೇರಿ ವಿಸಾ ನೀಡಲು ನಿರಾಕರಿಸಿದೆ. ನಿಗದಿತ ವೇಳಾಪಟ್ಟಿಯಂತೆ ಭಾರತ ತಂಡ ಶನಿವಾರ ಅಮೆರಿಕಕ್ಕೆ ಪ್ರಯಾಣ ಬೆಳಸಬೇಕಿತ್ತು. ಈಗ ತಂಡದ ಬಹುತೇಕ ಸದಸ್ಯರಿಗೆ ವಿಸಾ ಸಿಗಲಿಲ್ಲ. ಹಾಗಾಗಿ ಭಾರತೀಯ ಆರ್ಚರಿ ಸಂಸ್ಥೆ ಟೂರ್ನಿಯಿಂದ ಹೊರಬರಲು ನಿರ್ಧರಿಸಿದೆ.
ಅಮೆರಿಕದ ರಾಯಭಾರ ಕಚೇರಿ, ಏಳು ಆಟಗಾರರು ಇಬ್ಬರು ಕೋಚ್ ಹಾಗೂ ಒರ್ವ ಭಾರತೀಯ ಕ್ರೀಡಾ ಪ್ರಾಧಿಕಾರ ಅಧಿಕಾರಿಗೆ ಮಾತ್ರ ವಿಸಾ ನೀಡಿದೆ. ಲಿಮ್ ಜತೆಗೆ ಭಾರತದ ಮೂವರು ಕೋಚ್ ಗಳಾದ ಮಿಮ್ ಬಹದ್ದೂರ್ ಗುರುಂಗ್, ಚಂದ್ರಶೇಖರ್ ಲಗೂರಿ, ರಾಮ್ ಅವ್ದೇಶ್ ಮತ್ತು ದೈಹಿಕ ತಜ್ಞರಾದ ಪಿಂಕಿ ಅವರಿಗೂ ವಿಸಾ ನೀಡಿಲ್ಲ. ಈ ಕುರಿತು ಮಾಹಿತಿ ನೀಡಿರುವ ವಿಸಾ ನಿರಾಕರಿಸಲಾಗಿರುವ ಆರ್ಚರಿ ಪಟುಗಳು ನೀಡಿರುವ ಸಂದರ್ಶನದಿಂದ ವಿಸಾ ಅಧಿಕಾರಿಗಳು ತೃಪ್ತರಾಗಿಲ್ಲ.
ಅಲ್ಲದೆ ಇವರು ಮತ್ತೆ ಮರಳುವುದಿಲ್ಲವೆಂಬ ಅನುಮಾನ ಅವರಲ್ಲಿ ಮೂಡಿರುವುದರಿಂದ ವಿಸಾ ನಿರಾಕರಿಸಲಾಗಿದೆ ಎಂದು ತಿಳಿಸಿದ್ದಾರೆ. ಇದೊಂದು ಆಘಾತಕಾರಿ ಬೆಳವಣಿಗೆ. ಇವರಲ್ಲಿ
ಬಹುತೇಕರು ಅಸ್ಸಾಂ, ಜಾರ್ಖಂಡ್, ಪಂಜಾಬ್ ಮತ್ತು ಉತ್ತರ ಪ್ರದೇಶದಂತಹ ರಾಜ್ಯಗಳಿಂದ ಬಂದಿದ್ದಾರೆ. ಅಲ್ಲದೆ ಇವರಿಗೆ ಇಂಗ್ಲೀಷ್ ಭಾಷೆಯ ಅರಿವಿಲ್ಲ ಎಂದು ಸಚ್‍ದೇವ್ ವಿವರಿಸಿದ್ದಾರೆ. ಕೊರಿಯಾದ ಖ್ಯಾತ ಕೋಚ್ ಲಿಮ್ ಅವರಿಗೆ ವಿಸಾ ನಿರಾಕರಿಸಿರುವುದು ಅನುಮಾನ ವ್ಯಕ್ತವಾಗಿದೆ. ಅವರಿಗೆ ವಿಸಾ ನಿರಾಕರಿಸಲು ಕಾರಣವೇನು ಎಂಬುದು ಅರ್ಥವಾಗಿಲ್ಲ. ಭಾರತ ಸರ್ಕಾರದ ಆದೇಶ ಮತ್ತು ಅಮೆರಿಕ ಆರ್ಚರಿ ಸಂಸ್ಥೆ ಆಹ್ವಾನ ಪತ್ರಿಕೆ ಹೊಂದಿದ್ದರೂ ವಿಸಾ ನಿರಾಕರಿಸಿರುವುದು ಅಚ್ಚರಿ ತಂದಿದೆ ಎಂದಿದ್ದಾರೆ.
ನಾವು ವಿಸಾಗಾಗಿ ಮರು ಅರ್ಜಿ ಸಲ್ಲಿಸಿದ್ದರೂ ವಿಸಾ ಸಿಗದ ಹಿನ್ನೆಲೆಯಲ್ಲಿ, ಅಮೆರಿಕ ರಾಯಭಾರ ಕಚೇರಿ ನಿರ್ಧಾರವನ್ನು ಪ್ರತಿಭಟಿಸುವ ಹಿನ್ನೆಲೆಯಲ್ಲಿ ನಮ್ಮ ತಂಡ ಟೂರ್ನಿಯಿಂದ ಹೊರ ಬರಲು ನಿರ್ಧರಿಸಿದೆ. ಈ ನಿರ್ಧಾರವನ್ನು ಭಾರತೀಯ ಆರ್ಚರಿ ಸಂಸ್ಥೆ ಅಧ್ಯಕ್ಷ ವಿಜಯ್ ಕುಮಾರ್ ಮಲ್ಹೋತ್ರಾ ತೆಗೆದುಕೊಂಡಿದ್ದಾರೆ ಎಂದು ಸಂಸ್ಥೆಯ ಖಜಾಂಚಿ ವಿರೇಂದ್ರ ಸಚ್ ದೇವ್ ತಿಳಿಸಿದ್ದಾರೆ.