ವನಿತೆಯರಿಗೆ ಹೀನಾಯ ಸೋಲು

ಆ್ಯಂಟ್ವೆರ್ಪ್: ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆಯಲು ಪ್ರಯತ್ನಿಸುತ್ತಿರುವ ಭಾರತ ಮಹಿಳಾ ಹಾಕಿ ತಂಡ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ನೀಡುವಲ್ಲಿ ಮತ್ತೆ ಎಡವಿದೆ.
ಮಂಗಳವಾರ ನಡೆದ ವಿಶ್ವ ಹಾಕಿ ಸೆಮಿಫೈನಲ್ ಲೀಗ್ನ ಮಹಿಳೆಯರ ಎರಡನೇ ಪಂದ್ಯದಲ್ಲಿ ರೀತು ರಾಣಿ ನೇತೃತ್ವದ ಭಾರತ ತಂಡ, ನ್ಯೂಜಿಲೆಂಡ್ ವಿರುದ್ಧ 0-5 ಗೋಲುಗಳ ಅಂತರದ ಹೀನಾಯ ಸೋಲನುಭವಿಸಿ ತತ್ತರಿಸಿದೆ.
ಆರಂಭಿಕ ಪಂದ್ಯದಲ್ಲಿ ಬೆಲ್ಜಿಯಂ ವಿರುದ್ಧ 0-1 ಗೋಲಿನಿಂದ ಸೋಲನುಭವಿಸಿದ್ದ ಭಾರತ ವನಿತೆಯರು, ನ್ಯೂಜಿಲೆಂಡ್ ವಿರುದ್ಧ ಉತ್ತಮ ಪ್ರದರ್ಶನ ನೀಡುವ ಭರವಸೆಯಲ್ಲಿದ್ದರು. ಆದರೆ, ನ್ಯೂಜಿಲೆಂಡ್ ಆಟಗಾರ್ತಿಯರ ಆಕ್ರಮಣಕಾರಿ ಆಟದ ಮುಂದೆ ಮಂಕಾದ ಭಾರತೀಯ ಆಟಗಾರ್ತಿಯರು ಮತ್ತೆ ಸೋಲಿನ ತಿವಿತಕ್ಕೆ ಗುರಿಯಾದರು.ಮೊದಲಿಗೆ ಪಂದ್ಯದ 10ನೇ ನಿಮಿಷದಲ್ಲಿ ಅತ್ಯುತ್ತಮ ಪಾಸ್ ಗಳ ಮೂಲಕ ಡಿ ಬಾಕ್ಸ್ ಪ್ರವೇಶಿಸಿದ ಕಿವೀಸ್ ಆಟಗಾರ್ತಿಯರು, ಗೋಲು ದಾಖಲಿಸಲು ಪ್ರಯತ್ನಿಸಿದರಾದರೂ, ಭಾರತದ ಗೋಲ್ಕೀಪರ್ ಅದನ್ನು ತಡೆದರು.
ಆದರೆ ಹಿಮ್ಮುಖವಾಗಿ ಚಿಮ್ಮಿದ ಚೆಂಡನ್ನು ಮತ್ತೆ ಹಿಡಿತಕ್ಕೆ ಪಡೆದ ನ್ಯೂಜಿಲೆಂಡ್ ಗೆಮ್ ಫಿಲನ್ ತಂಡಕ್ಕೆ ಮೊದಲ ಗೋಲು ತಂದುಕೊಟ್ಟರು. 17ನೇ ನಿಮಿಷದಲ್ಲಿ ಮತ್ತೆ ಸಂಘಟಿತ ದಾಳಿ ನಡೆಸಿದ ನ್ಯೂಜಿಲೆಂಡ್ ಎರಡನೇ ಗೋಲು ದಾಖಲಿಸಿತು. ಈ ವೇಳೆ ಗೆಮ್ ನೀಡಿದ ಪಾಸ್ ಅನ್ನು ಪರಿಣಾಮಕಾರಿಯಾಗಿ ಬಳಸಿಕೊಂಡ ಒಲಿವಿಯಾ ಮೆರ್ರಿ ಚೆಂಡನ್ನು ಗೋಲು ಪೆಟ್ಟಿಗೆಯೊಳಗೆ ನುಸುಳಿಸಿದರು. ಈ ಮೂಲಕ ಪಂದ್ಯದ ಆರಂಭಿಕ ಎರಡು ಕ್ವಾರ್ಟರ್ನಲ್ಲಿ ನ್ಯೂಜಿಲೆಂಡ್ 2-0 ಅಂತರದ ಮುನ್ನಡೆ ಕಾಯ್ದುಕೊಂಡಿತು.
ಆರಂಭದಲ್ಲೇ ಭಾರತೀಯ ಆಟಗಾರ್ತಿಯರ ಮೇಲೆ ಬಿಗಿ ಹಿಡಿತ ಸಾಧಿಸಿದ ಕಿವೀಸ್ ಪಡೆ, ನಂತರದ ಹಂತದಲ್ಲಿ ಮತ್ತಷ್ಟು ಸವಾರಿ ನಡೆಸಿತು. 42ನೇ ನಿಮಿಷದಲ್ಲಿ ಮೆರ್ರಿ ಚೆಂಡನ್ನು ಡಿಬಾಕ್ಸ್ನ ಒಳಗೆ ತಂದು ಗೆಮ್ ಫಿಲನ್ಗೆ ಪಾಸ್ ನೀಡಿದರು. ಗೆಮ್ ಇದನ್ನು ವ್ಯರ್ಥವಾಗಿಸದೆ ಗೋಲು ದಾಖಲಿಸಿದರು. 53ನೇ ನಿಮಿಷದಲ್ಲಿ ಕ್ರಿಸ್ಟನ್ ಪಿಯರ್ಸ್ ಆಕರ್ಷಕ ಪ್ರದರ್ಶನ ನೀಡಿ ಭಾರತದ ಗೋಲ್ಕೀಪರ್ ಅವರನ್ನು ವಂಚಿಸಿ ಚೆಂಡನ್ನು ಗೋಲುಪೆಟ್ಟಿಗೆಗೆ ಸೇರಿಸಿದರು. ಅಂತಿಮ ಕ್ಷಣದಲ್ಲಿ ಅಂದರೆ, 57ನೇ ನಿಮಿಷದಲ್ಲಿ ಮತ್ತೆ ಗಮನ ಸೆಳೆದ ಪಿಯರ್ಸ್, ಎರಡನೇ ಗೋಲು ಹೊಡೆದು ತಂಡದ ಗೆಲುವಿನ ಅಂತರವನ್ನು ಇನ್ನಷ್ಟು ಹೆಚ್ಚಿಸಿದರು.
ಇತ್ತ ಭಾರತೀಯ ಆಟಗಾರ್ತಿಯರಿಂದ ಯಾವುದೇ ರೀತಿಯ ಪರಿಣಾಮಕಾರಿ ಪ್ರತಿರೋಧ ಎದುರಾಗದಿರುವುದು ನ್ಯೂಜಿಲೆಂಡ್ ತಂಡಕ್ಕೆ ವರವಾಗಿ ಪರಿಣಮಿಸಿತು. ಭಾರತ ವನಿತೆಯರು ತಮ್ಮ ಮೂರನೇ ಪಂದ್ಯದಲ್ಲಿ ಬುಧವಾರ ಪೊಲೆಂಡ್ ವಿರುದ್ಧ ಸೆಣಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


