ಕ್ರೀಡೆ

ನೇಪಾಳ ವಿರುದ್ಧ ಗೆದ್ದ ಭಾರತ

ನೇಪಾಳ ವಿರುದ್ಧ ಗೆದ್ದ ಭಾರತ
ನೇಪಾಳ ವಿರುದ್ಧ ಜಯ ಸಾಧಿಸಿದ ಭಾರತ
Published On :

ಕಠ್ಮಂಡು: ಫೀಫಾ ವಿಶ್ವಕಪ್ 2018ರ ಫುಟ್ಬಾಲ್ ಟೂರ್ನಿಗಾಗಿನ ಪ್ರಾಥಮಿಕ ಹಂತದ ಅರ್ಹತಾ ಸುತ್ತಿನಲ್ಲಿ ಭಾರತ ತಂಡ ನೇಪಾಳ ವಿರುದ್ಧ ಗೆಲವು ದಾಖಲಿಸಿದೆ. ಈ ಮೂಲಕ ಭಾರತ ಅರ್ಹತಾ ಸುತ್ತಿನ ಮುಂದಿನ ಘಟ್ಟಕ್ಕೆ ಪ್ರವೇಶ ಪಡೆದಿದೆ.

ಈ ಘಟ್ಟದಲ್ಲಿ ಉಭಯ ತಂಡಗಳು ತವರಿನ ಅಂಗಣದಲ್ಲಿ ಒಂದು ಪಂದ್ಯವನ್ನಾಡಿವೆ. ಈ ಎರಡೂ ಪಂದ್ಯಗಳ ಗೋಲಿನ ಆಧಾರದ ಮೇಲೆ ವಿಜೇತರನ್ನು ನಿರ್ಧರಿಸಲಾಗಿದೆ. ಭಾರತ ತಂಡ ತವರಿನಲ್ಲಿ ಆಡಿದ್ದ ಮೊದಲ ಪಂದ್ಯದಲ್ಲಿ 2-0 ಗೋಲುಗಳಿಂದ ಗೆಲವು ದಾಖಲಿಸಿತ್ತು. ಮಂಗಳವಾರ ನೇಪಾಳದಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಉಭಯ ತಂಡಗಳು ಗೋಲುರಹಿತ ಡ್ರಾ ಫಲಿತಾಂಶ ಪಡೆದಿವೆ. ಎರಡೂ ಪಂದ್ಯಗಳ ಗೋಲುಗಳ ಲೆಕ್ಕಾಚಾರದ ಆಧಾರದ ಮೇಲೆ ಭಾರತ ಈ ಘಟ್ಟದಲ್ಲಿ ನೇಪಾಳ ತಂಡವನ್ನು 2-0 ಗೋಲುಗಳಿಂದ ಮಣಿಸಿದಂತಾಗಿದೆ.

ಕಳೆದವಾರ ಗುವಾಹಟಿಯಲ್ಲಿ ನಡೆದಿದ್ದ ಪಂದ್ಯದಲ್ಲಿ ಭಾರತ ತಂಡ ಉಪನಾಯಕ ಸುನೀಲ್ ಛೆಟ್ರಿ ಅವರ ಎರಡು ಗೋಲಿನಿಂದ ಗೆಲವು ದಾಖಲಿಸಿತ್ತು. ಈ ಪಂದ್ಯದಲ್ಲಿ ಸ್ಟೀಫನ್ ಕಾನ್ಸ್ ಟಾಂಟೀನ್ ಮಾರ್ಗದರ್ಶನದ ಭಾರತ ತಂಡ ತನ್ನ ಮುನ್ನಡೆಯನ್ನು ಕಾಯ್ದುಕೊಳ್ಳುವುದು ದೊಡ್ಡ ಸವಾಲಾಗಿತ್ತು. ಕಾರಣ, ತವರಿನ ಅಂಗಣದಲ್ಲಿ ನೇಪಾಳ ಅತ್ಯಂತ ಬಲಿಷ್ಠ ತಂಡ. 2013ರಲ್ಲಿ ನಡೆದಿದ್ದ ಸ್ಯಾಫ್ ಚಾಂಪಿಯನ್‍ಶಿಪ್ ನಲ್ಲಿ ನೇಪಾಳ ತವರಿನ ಅಂಗಣದಲ್ಲಿ ಭಾರತವನ್ನು 2-1 ಗೋಲುಗಳಿಂದ ಮಣಿಸಿತ್ತು. ಹಾಗಾಗಿ ಈ ಪಂದ್ಯ ಸುಬ್ರತಾ ಪಾಲ್ ನೇತೃತ್ವದ ಭಾರತಕ್ಕೆ ಕಠಿಣವಾಗಿತ್ತು.

ಪಂದ್ಯದ ಆರಂಭದಲ್ಲಿ ಉಭಯ ತಂಡಗಳು ತೀವ್ರ ಸ್ಪರ್ಧೆ ನಡೆಸಿದವು. ಪಂದ್ಯದ 17ನೇ ನಿಮಿಷದಲ್ಲಿ ನೇಪಾಳ ತಂಡಕ್ಕೆ ಗೋಲು ದಾಖಲಿಸುವ ಅವಕಾಶ ಸಿಕ್ಕಿತ್ತಾದರೂ, ಅದನ್ನು ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ. ನೇಪಾಳದ ಸ್ಟ್ರೈಕರ್ ಸ್ಯಾಂಟೋಶ್ ಸಾಹುಕಾಲ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸುವ ಪ್ರಯತ್ನ ನಡೆಸಿದರು. ಆಗ ಭಾರತದ ನಾಯಕ ಹಾಗೂ ಗೋಲ್ ಕೀಪರ್ ಸುಬ್ರತಾ ಪಾಲ್ ಅತ್ಯುತ್ತಮ ಪ್ರಯತ್ನ ನಡೆಸಿ ಗೋಲನ್ನು ನಿರಾಕರಿಸಿದರು.

ನೇಪಾಳ ತಂಡ ಈ ಪಂದ್ಯದಲ್ಲಿ ಕನಿಷ್ಠ 2 ಗೋಲುಗಳನ್ನಾದರೂ ಗಳಿಸಲೇಬೇಕಾದ ಅನಿವಾರ್ಯತೆಯಲ್ಲಿತ್ತು. ಹಾಗಾಗಿ ಪ್ರಬಲ ಹೋರಾಟ ನಡೆಸಿತಾದರೂ, ಭಾರತದ ರಕ್ಷಣಾ ವಿಭಾಗದ ಮುಂದೆ ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ. 64ನೇ ನಿಮಿಷದಲ್ಲಿ ರಾಬಿನ್ ಸಿಂಗ್ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸಿದರಾದರೂ ರೆಫರಿ ಅದನ್ನು ನಿರಾಕರಿಸಿದರು. ನಂತರ ಸುನೀಲ್ ಛೆಟ್ರಿ ಗೋಲು ಗಳಿಸುವ ಅವಕಾಶ ಕೈಚೆಲ್ಲಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.