

ಜೋಧ್‍ಪುರ: ಜಗದ್ವಿಖ್ಯಾತ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರು ತಮ್ಮ ಕೊನೆಯ ಟೆಸ್ಟ್ ಪಂದ್ಯದಲ್ಲಿ ತೊಟ್ಟಿದ್ದ ಜೆರ್ಸಿಯು ರು. 6 ಲಕ್ಷ ಮೊತ್ತಕ್ಕೆ ಹರಾಜಾಗಿದೆ. ಇಲ್ಲಿ ನಡೆಯುತ್ತಿರುವ ಜೋಧ್‍ಪುರ ಒನ್ ವರ್ಲ್ಡ್ ರಿಟ್ರೀಟ್ ಉತ್ಸವದಲ್ಲಿ ಶನಿವಾರ ನಡೆದ ಹರಾಜಿನಲ್ಲಿ ಸಚಿನ್‍ರವರ ಜೆರ್ಸಿಯನ್ನು ಜೋಧ್‍ಪುರ್ ರಾಜವಂಶಸ್ಥ ಶಿವರಾಜ್ ಸಿಂಗ್ ಅವರು ಗರಿಷ್ಠ ಮೊತ್ತದ (ರು. 6 ಲಕ್ಷ) ಬಿಡ್ ಸಲ್ಲಿಸುವ ಮೂಲಕ ತಮ್ಮದಾಗಿಸಿಕೊಂಡರು.
2013ರ ನವೆಂಬರ್‍ನಲ್ಲಿ ಮುಂಬೈನಲ್ಲಿ ನಡೆದಿದ್ದ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಪಂದ್ಯದ ನಂತರ ಸಚಿನ್ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‍ಗೆ ವಿದಾಯ ಹೇಳಿದ್ದರು. ವಿಂಡೀಸ್ ವಿರುದ್ಧ ಪಂದ್ಯ ಅವರ ವೃತ್ತಿಜೀವನದ 200ನೇ ಟೆಸ್ಟ್ ಪಂದ್ಯವೂ ಆಗಿತ್ತು. ಈ ಹಿನ್ನೆಲೆಯಲ್ಲಿ, ಪಂದ್ಯದ ಕೊನೆಯ ದಿನ ತೊಟ್ಟಿದ್ದ ಜೆರ್ಸಿಗೆ ಮಹತ್ವ ಬಂದಿತ್ತು.