

ಇಂದಿನಿಂದ ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿ ಆರಂಭ ಅರ್ಹತಾ ಸುತ್ತಿನೊಂದಿಗೆ ಮಂಗಳವಾರದಿಂದ ಶುರುವಾಗುತ್ತಿರುವ ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ವಿಶ್ವದ ನಂ.1 ಆಟಗಾರ್ತಿ ಸೈನಾ ನೆಹ್ವಾಲ್ ಹಾಗೂ ಡೆನ್ಮಾರ್ಕ್ ಓಪನ್‍ನಲ್ಲಿ ರನ್ನರ್‍ಅಪ್
ಎನಿಸಿಕೊಂಡ ಪಿ.ವಿ. ಸಿಂಧು ಪ್ರಶಸ್ತಿ ಜಯಿಸುವ ಪಣ ತೊಟ್ಟಿದ್ದಾರೆ.
ಭಾನುವಾರವಷ್ಟೇ ಮುಕ್ತಾಯ ಕಂಡ ಡೆನ್ಮಾರ್ಕ್ ಓಪನ್ ಫೈನಲ್‍ನಲ್ಲಿ ಮುಗ್ಗರಿಸಿದ ಎರಡು ಬಾರಿಯ ವಿಶ್ವ ಬ್ಯಾಡ್ಮಿಂಟನ್ ಕಂಚು ಪದಕ ವಿಜೇತೆ ಸಿಂಧು, ರನ್ನರ್‍ಅಪ್ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಏತನ್ಮಧ್ಯೆ ಎರಡನೇ ಸುತ್ತಿನಲ್ಲಿಯೇ ಡೆನ್ಮಾರ್ಕ್ ಓಪನ್‍ನಲ್ಲಿನ ಹೋರಾಟವನ್ನು ಕೊನೆಗಾಣಿಸಿದ ಸೈನಾ ಕೂಡ ಫ್ರೆಂಚ್ ಓಪನ್ ಅನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.
ಇತ್ತ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಐದನೇ ಶ್ರೇಯಾಂಕಿತ ಕೆ. ಶ್ರೀಕಾಂತ್ ಮೊದಲ ಸುತ್ತಿನಲ್ಲಿ ಚೀನಾದ ಟಿಯಾನ್ ಹೌವೆ ವಿರುದ್ಧ ಸೆಣಸಲಿದ್ದರೆ, ಎಚ್.ಎಸ್. ಪ್ರಣಯ್ ಚೀನಾದ ಲಿನ್ ಡಾನ್ ಸವಾಲನ್ನು ಎದುರಿಸಲಿದ್ದಾರೆ.ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಜ್ವಾಲಾ-ಅಶ್ವಿನಿ ಕಣಕ್ಕಿಳಿಯಲಿದ್ದಾರೆ.