

ಚಾಂಗ್ಜೌ: ಪಂದ್ಯದ ಸಂಪೂರ್ಣ ಅವಧಿಯಲ್ಲಿ ತಮ್ಮ ಆಕ್ರಮಣಕಾರಿ ದಾಳಿಯ ಮೂಲಕ ಎದುರಾಳಿ ತಂಡದ ಮೇಲೆ ಪ್ರಭುತ್ವ ಸಾಧಿಸಿದ ಭಾರತ ಕಿರಿಯ ವನಿತೆಯರ ತಂಡ, 7ನೇ ಏಷ್ಯಾಕಪ್ ಹಾಕಿ ಟೂರ್ನಿಯಲ್ಲಿ ಭರ್ಜರಿ ಆರಂಭ ಪಡೆದಿದೆ.
ಭಾನುವಾರ ನಡೆದ ಮೊದಲ ಪಂದ್ಯದಲ್ಲಿ ಭಾರತ ತಂಡ ಡಿಪಿಆರ್ ಕೊರಿಯಾ ವಿರುದ್ಧ 13-0 ಗೋಲುಗಳ ಅಂತರದಲ್ಲಿ ಭರ್ಜರಿ ಜಯ ದಾಖಲಿಸಿದೆ. ಪಂದ್ಯದ ಆರಂಭದಲ್ಲಿ ಉಭಯ ತಂಡಗಳು ಉತ್ತಮ ವೇಗದಲ್ಲಿ ಆಟ ಪ್ರದರ್ಶಿಸಿದರು.
ಆದರೆ, ಭಾರತ ಆಟಗಾರ್ತಿಯರು ಮಾತ್ರ ತಮ್ಮ ನಿಯಂತ್ರಣವನ್ನು ಅಂತಿಮ ನಿಮಿಷದವರೆಗೂ ಮುಂದುವರಿಸುವಲ್ಲಿ ಯಶಸ್ವಿಯಾದರು. ಪಂದ್ಯದ ಸಂಪೂರ್ಣ ಅವಧಿಯಲ್ಲಿ ಪ್ರಾಬಲ್ಯಯುತ ಪ್ರದರ್ಶನ ನೀಡಿದ ಭಾರತ ಎದುರಾಳಿ ತಂಡಕ್ಕೆ ಒಂದೇ ಒಂದು ಗೋಲು ಬಿಟ್ಟುಕೊಡಲಿಲ್ಲ.