
ನಿರೀಕ್ಷೆಯಂತೆಯೇ ಭಾರತ ಎ ತಂಡ ಪ್ರವಾಸಿ ಬಾಂಗ್ಲಾದೇಶ ವಿರುದ್ಧದ ಮೂರು ದಿನಗಳ ಏಕೈಕ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಹಾಗೂ 32 ರನ್‍ಗಳ ಭರ್ಜರಿ ಗೆಲುವು ಸಾಧಿಸಿದೆ. ಇದರೊಂದಿಗೆ, ಭಾರತ ತಂಡ ಮುಂಬರಲಿರುವ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಗೆ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿತು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರ ಮುಕ್ತಾಯಕಂಡ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್‍ನಲ್ಲಿ ಆಲ್ರೌಂಡ್ ಪ್ರದರ್ಶನ ನೀಡಿದ ಭಾರತ ಎ ತಂಡದ ವಿರುದ್ಧ ಬಾಂಗ್ಲಾದೇಶ ಮರುಮಾತೆತ್ತದೆ ಸೋಲೊಪ್ಪಿಕೊಂಡಿತು. ಇದರಿಂದಾಗಿ ಬಾಂಗ್ಲಾದೇಶ ಹ್ಯಾಟ್ರಿಕ್ ಸೋಲನುಭವಿಸುವಂತಾಯಿತು. ಮೊದಲಿಗೆ ಮೂರು ಏಕದಿನ ಪಂದ್ಯ ಸರಣಿಯಲ್ಲಿ 1-2ರಿಂದ ಸೋಲನುಭವಿಸಿದ್ದ ಬಾಂಗ್ಲಾದೇಶ, ಆ ಬಳಿಕ ಮೈಸೂರಿನಲ್ಲಿ ನಡೆದ ರಣಜಿ ಚಾಂಪಿಯನ್ ಕರ್ನಾಟಕ ತಂಡದ ವಿರುದ್ಧದ ಮೂರು ದಿನಗಳ ಟೆಸ್ಟ್ ಪಂದ್ಯದಲ್ಲಿಯೂ ಸೋಲನುಭವಿಸಿತ್ತು. ಇದೀಗ ಭಾರತ ಎ ತಂಡದ ವಿರುದ್ಧ ಇನ್ನಿಂಗ್ಸ್ ಪರಾಭವದೊಂದಿಗೆ ತೀವ್ರ ನಿರಾಸೆ ಅನುಭವಿಸಿತು.
ಸಂಘಟಿತ ಬೌಲಿಂಗ್ ದಾಳಿ : ಪಂದ್ಯದ ಎರಡನೇ ದಿನವಾದ ಸೋಮವಾರದಂದೇ ಬಹುತೇಕ ಬಾಂಗ್ಲಾ ಒತ್ತಡಕ್ಕೆ ಸಿಲುಕಿಕೊಂಡಿತ್ತು. 5ವಿಕೆಟ್ ನಷ್ಟಕ್ಕೆ 411 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದ್ದ ಭಾರತ ಎ ತಂಡ, 183 ರನ್‍ಗಳ ಭರ್ಜರಿ ಮುನ್ನಡೆ ಸಾಧಿಸಿತಲ್ಲದೇ ದಿನಾಂತ್ಯಕ್ಕೆ ಆರಂಭಿಕ ಎರಡು ಪ್ರಮುಖ ವಿಕೆಟ್ ಪಡೆಯುವುದರೊಂದಿಗೆ ಬಾಂಗ್ಲಾ ವಿರುದ್ಧ ಗೆಲುವುನ್ನು ಖಾತ್ರಿಗೊಳಿಸಿತ್ತು. ಮಂಗಳವಾರ ಅದಕ್ಕೆ ತಕ್ಕಂತೆ ಭಾರತೀಯ ಬೌಲರ್ ಗಳು ಸಂಘಟಿತ ದಾಳಿ ನಡೆಸುವುದರೊಂದಿಗೆ ಬಾಂಗ್ಲಾ ವಿರುದ್ಧ ವಿಜಯೋತ್ಸವ ಆಚರಿಸಿಕೊಂಡಿತು.
ಬಾಂಗ್ಲಾದೇಶ 39.3 ಓವರ್‍ಗಳಲ್ಲಿ 151 ರನ್‍ಗಳಿಗೆ ಸರ್ವಪತನ ಕಂಡಿತು. 32 ರನ್‍ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದ ಬಾಂಗ್ಲಾ ಮೂರನೇ ದಿನದಾಟವನ್ನು ಆರಂಭಿಸಿತಾದರೂ, ಸ್ಥಿರ ಪ್ರದರ್ಶನ ನೀಡಲು ಸಾಧ್ಯವಾಗದೆ ಕಂಗೆಟ್ಟಿತು. ನಾಯಕ ಮೊಮಿನಲ್ ಹಕ್ (54) ಹಾಗೂ ಲಿಟನ್ ದಾಸ್ (38) ಹೊರತುಪಡಿಸಿ ಮಿಕ್ಕ ಯಾವೊಬ್ಬ ಬ್ಯಾಟ್ಸ್ ಮನ್ ಕೂಡ ಭಾರತದ ಬೌಲರ್‍ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಲು ಯತ್ನಿಸಲಿಲ್ಲ. ಲಿಟನ್ ದಾಸ್ ಮತ್ತು ಮೊಮಿನಲ್ ಹಕ್ ಮೂರನೇ ವಿಕೆಟ್‍ಗೆ 61 ರನ್‍ಗಳ ಕಾಣಿಕೆ ನೀಡಿದ್ದು ಬಿಟ್ಟರೆ ಬಾಂಗ್ಲಾಗೆ ಇಂತಹ ಮತ್ತೊಂದು ಯಶಸ್ವಿ ಜತೆಯಾಟ ಸಿಗಲಿಲ್ಲ. ಇದು ಬಾಂಗ್ಲಾದ ಈ ಪರಿ ಸೋಲಿಗೆ ಪ್ರಮುಖ ಕಾರಣವಾಯಿತು.
Advertisement