ಅನಾಥೆಯಾದರು ಅಥ್ಲೆಟಿಕ್ಸ್ ನಲ್ಲಿ ಭರವಸೆ ಮೂಡಿಸುತ್ತಿರುವ ಚಂದ್ರಮ್ಮ

ಪ್ರತಿಭೆ ಎಂಬುದು ಯಾರೋಬ್ಬರ ಸ್ವತ್ತಲ್ಲ. ಪ್ರತಿಭೆಗೆ ಬಡವ-ಶ್ರೀಮಂತ ಎಂಬ ಭೇದವಿಲ್ಲ. ಅಂತ ಒಂದು ನಿರ್ದೇಶನಕ್ಕೆ ಸಾಕ್ಷಿಯಾಗಿದ್ದಾಳೆ 14 ವರ್ಷದ ಬಾಲಕಿ ಚಂದ್ರಮ್ಮ.
ಕಳೆದ ಏಳು ವರ್ಷಗಳ ಹಿಂದೆ ಪೋಷಕರಿಂದ ದೂರವಾಗಿದ್ದ ಚಂದ್ರಮ್ಮ ಮತ್ತು ಆಕೆಯ ತಮ್ಮ ಮಾರತ್ತಹಳ್ಳಿಯ ರಸ್ತೆಗಳಲ್ಲಿ ಭಿಕ್ಷೆ ಬೇಡುತ್ತಿದ್ದುದ್ದನ್ನು ಗಮನಿಸಿದ ಪೊಲೀಸರು ಇಬ್ಬರನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿದ್ದರು.
ನಂತರ ಅನ್ನಪೂರ್ಣ ಚಾರಿಟೇಬಲ್ ಟ್ರಸ್ಟ್ ಚಂದ್ರಮ್ಮ ಮತ್ತು ಆಕೆಯ ತಮ್ಮನ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು, ಟ್ರಸ್ಟ್ ನಡೆಸುತ್ತಿರುವ ಬಾಲ್ಯ ವಿದ್ಯಾಮಂದಿರ ಶಾಲೆಯಲ್ಲಿ ಚಂದ್ರಮ್ಮ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಕ್ಲಸ್ಟರ್ ಲೆವೆಲ್ ಇವೆಂಟ್ ನಲ್ಲಿ 200 ಮೀ ಮತ್ತು 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾಳೆ.
ಸ್ಥಳೀಯ ಮಟ್ಟದ ಸ್ಪರ್ಧೆಯಲ್ಲಿ ಮೊದಲ ಬಾರಿ 100 ಮೀಟರ್ ಓಟದಲ್ಲಿ ಭಾಗವಹಿಸಿದ್ದ ಚಂದ್ರಮ್ಮ ಚಿನ್ನ ಗೆದ್ದ ಸಂಭ್ರಮಿಸಿದ್ದರು. 23 ಶಾಲೆಗಳ ಸ್ಪರ್ಧಿಗಳನ್ನು ಹಿಮ್ಮೆಟ್ಟಿಸಿ ಜಯ ಗಳಿಸಿದ್ದರು. ಬಳಿಕ ಆಕೆ ಹಿಂದಿರುಗಿ ನೋಡಲೇ ಇಲ್ಲ. ಕಳೆದ ವರ್ಷದ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಸ್ಪರ್ಧೆಯಲ್ಲಿ 100 ಮೀ. 200 ಮೀ ಹಾಗೂ 400 ಮೀಟರ್ ಓಟಗಳಲ್ಲಿ ಭಾಗವಹಿಸಿ ಗೆದ್ದಿದ್ದಾಳೆ.
ಉತ್ತಮ ಸಾಧನೆಗೈದ ಚಂದ್ರಮ್ಮನನ್ನು ತಮ್ಮ ಪೋಷಕರ ಬಗ್ಗೆ ಕೇಳಿದಾಗ ಕಣ್ತುಂಬಿಕೊಂಡು ಕಳೆದ ಏಳು ವರ್ಷಗಳಿಂದ ನನ್ನ ತಂದೆ-ತಾಯಿಯನ್ನು ನೋಡಿಲ್ಲ ಎಂದು ದುಖಿಃಸಿದಳು. ಸದ್ಯ ಸ್ಪರ್ಧೆಗಳ ಕಡೆ ಹೆಚ್ಚು ಗಮನ ಹರಿಸುತ್ತೇನೆ. ಒಂದು ವೇಳೆ ಪೋಷಕರು ಸಿಕ್ಕರೆ ಅವರನ್ನು ಚನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಆಶಾಭಾವ ಹೊಂದಿದ್ದಾಳೆ.
ಚಂದ್ರಮ್ಮ ಏಳು ವರ್ಷದವಳಾಗಿದ್ದಾಗ ಒಂದು ವರ್ಷದ ಪುಟ್ಟ ಮಗುವನ್ನು ಕೈಯಲ್ಲಿ ಹಿಡಿದುಕೊಂಡು ಭಿಕ್ಷೆ ಬೇಡುತ್ತಿದ್ದಾಗ ಅಕೆಯನ್ನು ಪೊಲೀಸರು ರಕ್ಷಿಸಿದ್ದರು. ಇದೀಗ ತಮ್ಮ ನರಸಿಂಹನಿಗೆ 7 ವರ್ಷ ವಯಸ್ಸಾಗಿದ್ದು, ಆತನ ಜವಾಬ್ದಾರಿಯನ್ನು ಚಂದ್ರಮ್ಮ ನೋಡಿಕೊಳ್ಳುತ್ತಿದ್ದಾಳೆ. ಇನ್ನು ಅಕ್ಕನ ಸಾಧನೆ ಕುರಿತಂತೆ ಕೇಳಿದಾಗ ನರಸಿಂಹ ಅಕ್ಕ ಓಡುವುದನ್ನು ಕಂಡರೆ ಖುಷಿಯಾಗುತ್ತದೆ. ಮುಂದೆ ನಾನು ಅಕ್ಕನಂತೆ ಓಡಿ ಪದಕ ಗೆಲ್ಲುತ್ತೇನೆ ಎಂದು ಹೇಳುತ್ತಾನೆ.
ರಾಷ್ಟ್ರಮಟ್ಟದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ ಪಿಟಿ ಉಷಾರಂತೆ ನಾನು ಮುಂದೊಂದು ದಿನ ದೇಶವನ್ನು ಪ್ರತಿನಿಧಿಸುತ್ತೇನೆ ಎಂಬ ಮಹೋದ್ದೇಶವನ್ನು ಚಂದ್ರಮ್ಮ ಹೊಂದಿದ್ದಾಳೆ. ಮುಂಬರು ಜಿಲ್ಲಾ ಮಟ್ಟದ ಸ್ಪರ್ಧೆಗಳ ಕಡೆ ಸದ್ಯ ಗಮನ ಹರಿಸುವುದಾಗಿ ಚಂದ್ರಮ್ಮ ಹೇಳಿದ್ದಾಳೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


