ನವದೆಹಲಿ: ಭಾರತೀಯ ಒಲಿಂಪಿಕ್ ಸಂಸ್ಥೆ(ಐಒಎ) ಅನ್ನು ಕೇಂದ್ರ ಕ್ರೀಡಾ ಸಚಿವಾಲಯ ಅಮಾನತು ಮಾಡಿದೆ.
ಕ್ರೀಡಾ ಸಚಿವಾಲಯ ಭ್ರಷ್ಟ ಅಧಿಕಾರಿಗಳ ನೇಮಕದ ವಿರುದ್ಧ ವಿರೋಧ ಮುಂದುವರೆಸಿದ್ದು, ಕಾಮನ್ವೆಲ್ತ್ ಗೇಮ್ಸ್ ಭ್ರಷ್ಟಾಚಾರ ಕಳಂಕಿತ ಸುರೇಶ್ ಕಲ್ಮಾಡಿ ಮತ್ತು ಅಭಯ್ ಸಿಂಗ್ ಚೌಟಾಲಾ ಐಒಎಯ ಅಜೀವ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವ ತನಕ ಅಮಾನತು ಹೇರಲಾಗಿದೆ ಎಂದು ಸಚಿವಾಲಯ ಹೇಳಿದೆ.
ಇನ್ನು ಸಚಿವಾಲಯ ನೀಡಿರುವ ಶೋಕಾಸ್ ನೋಟಿಸ್ ಗೆ ಐಒಎ ಶುಕ್ರವಾರ ಸಂಜೆ 5 ಗಂಟೆಯೊಳಗೆ ಉತ್ತರಿಸಬೇಕು ಎಂದು ಸೂಚಿಸಿತ್ತು. ಆದರೆ ಐಒಎ ಹಾಲಿ ಅಧ್ಯಕ್ಷ ಎನ್ ರಾಮಚಂದ್ರನ್ ವಿದೇಶದಲ್ಲಿರುವುದರಿಂದ ಸಚಿವಾಲಯದ ಶೋಕಾಸ್ ನೋಟಿಸಿಗೆ ಉತ್ತರಿಸಲು 15 ದಿನಗಳ ಕಾಲಾವಕಾಶ ಬೇಕೆಂದಿತ್ತು. ಆದರೆ ಇದಕ್ಕೆ ಬಗ್ಗದ ಕೇಂದ್ರ ಕ್ರೀಡಾ ಸಚಿವ ವಿಜಯ್ ಗೋಯೆಲ್ ಸರ್ಕಾರ ಇಂಥ ಕಾರಣಗಳನ್ನು ಸ್ವೀಕರಿಸಲು ಸಿದ್ಧವಿಲ್ಲ ಎಂದರು.
ಕ್ರೀಡಾ ಸಚಿವಾಲಯ ಶೋಕಾಸ್ ನೋಟಿಸಿಗೆ ಪ್ರತಿಕ್ರಿಯಿಸದ ಐಒಎ ಅನ್ನು ಅಮಾನತು ಮಾಡಿದ್ದು ನೇಮಕಗೊಂಡ ಅಧಿಕಾರಿಗಳು ನೀಡಿರುವ ಹುದ್ದೆಯಿಂದ ಕೆಳಗಿಳಿಯುವವರೆಗೆ ಅಮಾನತು ಮಾಡಲಾಗಿದೆ ಎಂದರು.