
ಕ್ರೈಸ್ಟ್ ಚರ್ಚ್: ನ್ಯೂಜಿಲೆಂಡ್ ವಿರುದ್ಧ ಕ್ರೈಸ್ಟ್ ಚರ್ಚ್ ನಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ 7 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿ, ಟೆಸ್ಟ್ ರ್ಯಾಂಕಿಂಗ್ ನಲ್ಲಿ ಮತ್ತೆ ಅಗ್ರ ಸ್ಥಾನಕ್ಕೇರಿದೆ.
ನ್ಯೂಜಿಲೆಂಡ್ ಸ್ಫೋಟಕ ಬ್ಯಾಟ್ಸಮನ್ ಬ್ರೆಂಡನ್ ಮೆಕ್ಕಲಮ್ ಅವರ ವಿದಾಯದ ಪಂದ್ಯವಾಗಿದ್ದ 2ನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಜಯಭೇರಿ ಬಾರಿಸಿದೆ. ಜಾಕ್ಸನ್ ಬಡ್‍೯ (59ಕ್ಕೆ 5) ಹಾಗೂ ಜೇಮ್ಸ್ ಪ್ಯಾಟಿನ್‍ಸನ್ (77ಕ್ಕೆ 4) ಮಾರಕ ದಾಳಿಗೆ ನ್ಯೂಜಿಲೆಂಡ್ ಬ್ಯಾಟ್ಸಮನ್ ಗಳು ತತ್ತರಿಸಿ ಹೋದರು. ಅಂತಿಮವಾಗಿ ತಮ್ಮ ಎರಡನೇ ಇನ್ನಿಂಗ್ಸ್ ನಲ್ಲಿ ಕಿವೀಸ್ ಪಡೆ ಕೇವಲ 335 ರನ್ ಗಳಿಗೆ ಆಲ್ ಔಟ್ ಆಯಿತು. ಅದರೊಂದಿಗೆ ಆಸ್ಟ್ರೇಲಿಯಾಗೆ ಗೆಲ್ಲಲು 201 ರನ್ ಗಳ ಗುರಿ ನೀಡಿತು.
ನ್ಯೂಜಿಲೆಂಡ್ ನೀಡಿದ 201 ರನ್ ಗಳ ಗುರಿ ಬೆನ್ನುಹತ್ತಿದ ಆಸ್ಟ್ರೇಲಿಯಾ ತಂಡ ಸ್ಮಿತ್ (ಅಜೇಯ 53) ಮತ್ತು ಜೆಎ ಬರ್ನ್ಸ್ (65 ರನ್) ಅವರ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಪಂದ್ಯದ ಐದನೇ ದಿನ ಗುರಿಯನ್ನು ನಿರಾಯಾಸವಾಗಿ ತಲುಪಿತು. ಕೇವಲ 3 ವಿಕೆಟ್ ಕಳೆದುಕೊಂಡ ಆಸ್ಚ್ರೇಲಿಯಾ ತಂಡ ಜಯ ದಾಖಲಿಸುವುದರೊಂದಿಗೆ, ಟೆಸ್ಟ್ ರ್ಯಾಂಕಿಂಗ್ ಪಟ್ಟಿಯಲ್ಲಿಯೂ ಮತ್ತೆ ಅಗ್ರ ಸ್ಥಾನಕ್ಕೇರಿತು. ಆಸ್ಟ್ರೇಲಿಯಾ ಪರ ಎರಡೂ ಇನ್ನಿಂಗ್ಸ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಜೆಎ ಬರ್ನ್ಸ್ ಅರ್ಹವಾಗಿಯೇ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.
ಸಂಕ್ಷಿಪ್ತ ಸ್ಕೋರ್
ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್-370/10
ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್- 505/10
ನ್ಯೂಜಿಲೆಂಡ್ ಎರಡನೇ ಇನ್ನಿಂಗ್ಸ್- 335/10
ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ 201/3
ಫಲಿತಾಂಶ: ಆಸ್ಟ್ರೇಲಿಯಾಗೆ 7 ವಿಕೆಟ್ ಗಳ ಅಂತರದ ಜಯ
Advertisement