ಭಾರತಕ್ಕೆ ಇಂದು ಮಾಡು ಇಲ್ಲವೇ ಮಡಿ ಕಾದಾಟ

ಒಂದರ ಹಿಂದೊಂದರಂತೆ ಎರಡು ಪಂದ್ಯಗಳಲ್ಲಿ ಅನುಭವಿಸಿದ ಸೋಲಿನಿಂದ ಜರ್ಜರಿತವಾಗಿರುವ ಪ್ರವಾಸಿ ಭಾರತ ತಂಡಕ್ಕೆ, ಭಾನುವಾರ ಇಲ್ಲಿನ ಮೆಲ್ಬೋರ್ನ್ ಕ್ರಿಕೆಟ್ ..
ಮಹೇಂದ್ರ ಸಿಂಗ್ ಧೋನಿ
ಮಹೇಂದ್ರ ಸಿಂಗ್ ಧೋನಿ
Updated on

ಒಂದರ ಹಿಂದೊಂದರಂತೆ ಎರಡು ಪಂದ್ಯಗಳಲ್ಲಿ ಅನುಭವಿಸಿದ ಸೋಲಿನಿಂದ ಜರ್ಜರಿತವಾಗಿರುವ ಪ್ರವಾಸಿ ಭಾರತ ತಂಡಕ್ಕೆ, ಭಾನುವಾರ ಇಲ್ಲಿನ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಪಂದ್ಯವು ಮಾಡು ಇಲ್ಲವೇ ಮಡಿ ಎಂಬಂತಾಗಿದೆ.

ಮೊದಲಿಗೆ ಪರ್ತ್, ತದನಂತರ ಬ್ರಿಸ್ಬೇನ್ ಪಂದ್ಯಗಳೆರಡರಲ್ಲಿಯೂ 300ಕ್ಕೂ ಹೆಚ್ಚು ರನ್ ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ಆಸ್ಟ್ರೇಲಿಯಾ ಉತ್ಸಾಹದ ಚಿಲುಮೆಯಂತೆ ಪುಟಿಯುತ್ತಿದ್ದು, ಇದೀಗ ಐದು ಪಂದ್ಯ ಸರಣಿಯನ್ನು 3-0 ಅಂತರದಿಂದ ಕೈವಶಮಾಡಿಕೊಳ್ಳಲು ಅದು ಮುಂದಾಗಿದೆ. ಹೀಗಾಗಿ ಸರಣಿ ಜೀವಂತವಾಗಿಡಬೇಕಾದ ಒತ್ತಡಕ್ಕೆ ಭಾರತ ಒಳಗಾಗಿದೆ. ಹೆಚ್ಚೂ ಕಮ್ಮಿ ಇಲ್ಲಿನ ಮೈದಾನವೂ ಬ್ಯಾಟಿಂಗ್ ಸ್ನೇಹಿಯಾಗಿದ್ದು, ಮತ್ತೊಮ್ಮೆ ರನ್ ಹೊಳೆ ಹರಿದುಬರುವ ಸಾಧ್ಯತೆ ಇದೆ.

ಬೌಲಿಂಗ್ ಸುಧಾರಿಸುವುದೇ?: ಮೊದಲಿನ ಎರಡೂ ಪಂದ್ಯಗಳಲ್ಲಿ ರೋಹಿತ್ ಶರ್ಮಾ ಅವರ ಭರ್ಜರಿ ಶತಕದಾಟದ ಹೊರತಾಗಿಯೂ ಬೌಲಿಂಗ್‍ನಲ್ಲಿನ ವೈಫಲ್ಯದಿಂದ ಭಾರತ ಕಂಗೆಟ್ಟಿತ್ತು. ಪ್ರಸಕ್ತ ತಂಡವನ್ನು ಬಾಧಿಸುತ್ತಿರುವುದು ಕೂಡ ಇದೇ ಬೌಲಿಂಗ್ ಸಮಸ್ಯೆಯೇ.
ಈ ವಿಷವರ್ತುಲದಿಂದ ಪಾರಾಗುವ ಬಗೆ ಎಂತು ಎಂದು ಧೋನಿ ತಡಕಾಡುವಂತಾಗಿದೆ. ಎಲ್ಲಕ್ಕಿಂತ ಮಿಗಿಲಾಗಿ ಒತ್ತಡದ ಸಂದರ್ಭವನ್ನು ನಿರ್ಬಿಡೆಯಿಂದ ನಿರ್ವಹಿಸಲು ವಿಫಲವಾಗಿರುವ ಭಾರತದ ಬೌಲರ್‍ಗಳು ಎರಡೂ ಪಂದ್ಯಗಳಲ್ಲಿ 23 ವೈಡ್‍ಗಳನ್ನು ಹಾಕಿದ್ದು, ಇದು ಆತಿಥೇಯ ತಂಡದ ಗೆಲುವಿಗೆ ರಹದಾರಿ ನಿರ್ಮಿಸಿಕೊಟ್ಟಿದೆ. ಪರ್ತ್ ಪಂದ್ಯದಲ್ಲಿ 3 ವಿಕೆಟ್ ಪಡೆದು ಚೊಚ್ಚಲ ಪಂದ್ಯದಲ್ಲೇ ಈ ಸಾಧನೆ ಮಾಡಿ ಗಮನ ಸೆಳೆದ ವೇಗಿ ಬರೀಂದರ್ ಸ್ರನ್ ಎರಡನೇ ಪಂದ್ಯದಲ್ಲಿ ವಿಕೆಟ್ ಪಡೆಯಲು ವಿಫಲರಾಗಿದ್ದರು. ಇಶಾಂತ್ ಹಿಂಬರುವಿಕೆ ಕೂಡ ತಂಡವನ್ನು ಆದರಿಸಿರಲಿಲ್ಲ. ಇನ್ನು ಸ್ಪಿನ್ನರ್ ಗಳಂತೂ ತಮ್ಮ ವೀರಾವೇಶ ತವರಿಗಷ್ಟೇ ಸೀಮಿತ ಎಂಬಂತೆ ನಿಶ್ಯಕ್ತರಾಗಿದ್ದಾರೆ! ಇದೆಲ್ಲವೂ
ಸುಧಾರಿತ ಬೌಲಿಂಗ್ ಅನ್ನು ಬೇಡುತ್ತಿದೆ. ಇನ್ನು ಬ್ಯಾಟಿಂಗ್ ನಲ್ಲಿ ತಂಡ ಆತಂಕಕ್ಕೀಡಾಗುವಂತೇ  ಕಂಡುಬಂದಿಲ್ಲ. ಆರಂಭಿಕ  ಶಿಖರ್ ಧವನ್ ಹೊರತುಪಡಿಸಿದರೆ, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ ಉತ್ತಮ ಪ್ರದರ್ಶನ ನೀಡುತ್ತಿದ್ದು, ಮಧ್ಯಮ ಕ್ರಮಾಂಕ ತುಸು ಸ್ಥಿರ ಪ್ರದರ್ಶನ ನೀಡಿದರೆ ಉತ್ತಮ ರನ್ ಕಲೆಹಾಕಲೇನೂ ಅಡ್ಡಿಯಿಲ್ಲ. ಚಿಲುಮೆಯ ಖನಿ: ಸತತ ಎರಡು ಪಂದ್ಯಗಳ ಗೆಲುವಿನಿಂದ ಚೈತನ್ಯದ ಖನಿಯಂತಾಗಿರುವ ಆತಿಥೇಯ ಆಸ್ಟ್ರೇಲಿಯಾ ಸಹಜವಾಗಿಯೇ ಮೂರನೇ ಪಂದ್ಯದಲ್ಲೂ ಗೆಲ್ಲುವ ಫೇವರಿಟ್ ಎನಿಸಿದೆ. ಎರಡನೇ ಪಂದ್ಯಕ್ಕೆ ಅಲಭ್ಯವಾಗಿದ್ದ ಮಿಚೆಲ್ ಮಾರ್ಶ್ ಭಾನುವಾರದ ಪಂದ್ಯಕ್ಕೆ ಲಭ್ಯರಿರುವ ಸಾಧ್ಯತೆ ಇದೆ. ಭಾರತದ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟುವಲ್ಲಿ ನಾಯಕ ಸ್ಟೀವನ್ ಸ್ಮಿತ್, ಜಾರ್ಜ್ ಬೇಯ್ಲಿ ಪ್ರಧಾನ ಪಾತ್ರ ನಿರ್ವಹಿಸುತ್ತಿದ್ದರೂ, ಅದರ ಬ್ಯಾಟಿಂಗ್ ಕೂಡ ಅಸ್ಥಿರತೆಯಲ್ಲೇ ಇದೆ.

ಭಾರತದ ಬೌಲಿಂಗ್ ಒಂದಷ್ಟು ಪ್ರಖರಗೊಂಡರೆ, ಈ ನಿರ್ಣಾಯಕ ಪಂದ್ಯದಲ್ಲಾದರೂ ಅದಕ್ಕೆ ತಿರುಗೇಟು ನೀಡಬಹುದು. ಸ್ಟಾರ್ಕ್ ಹಾಗೂ ಮಿಚೆಲ್ ಜಾನ್ಸನ್‍ರಂಥ ಪ್ರಮುಖ ವೇಗಿಗಳು ಇಲ್ಲದೆ ಹೋದರೂ, 2ನೇ ಪಂದ್ಯದಲ್ಲಿ ಆಸೀಸ್‍ನ ಬೌಲರ್‍ಗಳು ಭಾರತವನ್ನು  ನಿಯಂತ್ರಿಸುವಲ್ಲಿ ಯಶ ಕಂಡಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com