ಸೆರೆನಾ ಭೀತಿಯಿಂದ ಶರಪೋವಾ ಪಾರು? ನಾಳೆಯಿಂದ ಶುರು ಆಸೀಸ್ ಹಂಗಾಮ

ವಿಶ್ವದ ನಂಬರ್ 1 ಆಟಗಾರ ಸರ್ಬಿಯಾದ ಜೊಕೋವಿಚ್, ಸೆರೆನಾ ವಿಲಿಯಮ್ಸ್ ಅಗ್ರ ಶ್ರೇಯಾಂಕಿತರಾಗಿ ಕಣಕ್ಕಿಳಿಯುತ್ತಿರುವ ಆಸ್ಟ್ರೇಲಿಯಾ ಓಪನ್
ಸಾನಿಯಾ ಮಿರ್ಜಾ
ಸಾನಿಯಾ ಮಿರ್ಜಾ
Updated on: 

ಮೆಲ್ಬೋರ್ನ್: ವಿಶ್ವದ ನಂಬರ್ 1 ಆಟಗಾರ ಸರ್ಬಿಯಾದ ಜೊಕೋವಿಚ್, ಸೆರೆನಾ ವಿಲಿಯಮ್ಸ್ ಅಗ್ರ ಶ್ರೇಯಾಂಕಿತರಾಗಿ ಕಣಕ್ಕಿಳಿಯುತ್ತಿರುವ ಆಸ್ಟ್ರೇಲಿಯಾ ಓಪನ್ ಪಂದ್ಯಾವಳಿಯು ಇಲ್ಲಿನ ಫ್ಲಶಿಂಗ್ ಮೆಡೋಸ್ ನಲ್ಲಿ ಮುಂದಿನ ಎರಡು ವಾರಗಳ ಕಾಲ ಕಳೆಕಟ್ಟಲಿದೆ.

ಆದರೆ ಈ ಬಾರಿಯ ಆಸ್ಟ್ರೇಲಿಯನ್ ಓಪನ್ ನಲ್ಲಿ ಪಾಲ್ಗೋಳ್ಳುತ್ತಿರುವವರ ಪೈಕಿ ಪುರುಷರ ವಿಭಾಗಕ್ಕಿಂತ ಮಹಿಳೆಯರ ಹಣಾಹಣಿಯ ಗಾಯದ ಸೆಳವಿನಲ್ಲಿ ಸಿಲುಕಿಕೊಳ್ಳುವ ಅಪಾಯವಿದೆ. ವಿಶ್ವದ ಅಗ್ರ ಶ್ರೇಯಾಂಕಿತ ಸೆರೆನಾ ವಿಲಿಯಮ್ಸ್, ಮರಿಯಾ ಶರಪೋವಾ ರಂಥವರು ಗಾಯದಿಂದ ತತ್ತರಿಸಿದ್ದು, ಟೂರ್ನಿಯಲ್ಲಿ ಇದು ಅವರನ್ನು ಬಾಧಿಸುವ ಸಂಭವಿದೆ,  

2015ರ ಫೈನಲ್‌ನಲ್ಲಿ ಶರಪೋವಾ ಅವರನ್ನು ಮಣಿಸಿದ್ದ ಅಮೆರಿಕದ ಸೆರೆನಾ, ಪ್ರಶಸ್ತಿ ಗೆದ್ದಿದ್ದರು. ಈ ಬಾರಿ ಇಬ್ಬರೂ ಒಂದೇ ಗುಂಪಿನಲ್ಲಿರುವುದರಿಂದ ಕ್ವಾರ್ಟರ್ ಫೈನಲ್‌ನಲ್ಲಿ ಪರಸ್ಪರ ಮುಖಾಮುಖಿಯಾಗುವ ಸಾಧ್ಯತೆಗಳಿವೆ. 21 ಗ್ರ್ಯಾನ್‌ಸ್ಲ್ಯಾಮ್‌ಗಳ ಒಡತಿ ಸೆರೆನಾ ಆಸ್ಟ್ರೇಲಿಯನ್ ಓಪನ್‌ನಲ್ಲಿ ಆರು ಬಾರಿ ಚಾಂಪಿಯನ್ ಪಟ್ಟಕ್ಕೇರಿದ್ದಾರೆ.

ತಾವು ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿರುವುದಾಗಿ ಸೆರೆನಾ ಹೇಳಿದ್ದಾರೆ. ಮೊಣಕಾಲಿನ ಗಾಯದ ಕಾರಣ ಸೆರೆನಾ ಕಳೆದ ವಾರ ನಡೆದ ಹಾಪ್‌ಮನ್ ಕಪ್ ಟೂರ್ನಿಯ ಮೊದಲ ಪಂದ್ಯದ ಅರ್ಧದಲ್ಲೇ ಹೊರ ನಡೆದಿದ್ದರು. ಆಸ್ಟ್ರೇಲಿಯಾ ಓಪನ್ ಕಿರೀಟವನ್ನು ಗೆಲ್ಲುವಲ್ಲಿ ಸೆರೆನಾ ಯಶಸ್ವಿಯಾದರೆ, ಜರ್ಮನಿಯ ಸ್ಟೆಫಿ ಗ್ರಾಫ್ ಅವರ 22 ಗ್ರ್ಯಾನ್‌ಸ್ಲ್ಯಾಮ್‌ಗಳ ದಾಖಲೆಯನ್ನು ಸರಿಗಟ್ಟಲಿದ್ದು, ಮೊದಲ ಸುತ್ತಿನಲ್ಲಿ ಇಟಲಿಯ ಕಮಿಲಾ ಜಾರ್ಜಿ ಅವರನ್ನು ಎದುರಿಸಲಿದ್ದಾರೆ. ಕಳೆದ ವರ್ಷ ಆಸ್ಟ್ರೇಲಿಯನ್ ಓಪನ್, ಫ್ರೆಂಚ್ ಓಪನ್ ಮತ್ತು ವಿಂಬಲ್ಡನ್ ಗ್ರ್ಯಾನ್ ಸ್ಲ್ಯಾಮ್ ಗೆದ್ದಿದ್ದ ಸೆರೆನಾ, ಯುಎಸ್ ಓಪನ್‌ನ ಸೆಮಿಫೈನಲ್‌ನಲ್ಲಿ ಸೋಲು ಕಾಣುವ ಮೂಲಕ ಕರಿಯರ್ ಗ್ರ್ಯಾನ್ ಸ್ಲ್ಯಾಮ್ ಸಾಧನೆಯಿಂದ ವಂಚಿತರಾಗಿದ್ದರು.

2008ರಲ್ಲಿ ಆಸ್ಟ್ರೇಲಿಯನ್ ಓಪನ್ ಕಿರೀಟ ಗೆದ್ದಿದ್ದ 5 ಗ್ರ್ಯಾನ್‌ಸ್ಲ್ಯಾಮ್‌ಗಳ ವಿಜೇತೆ ಶರಪೋವಾ ಕೂಡ ಫಿಟ್ ಆಗಿದ್ದು ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಮೊದಲ ಸುತ್ತಿನ ಪಂದ್ಯದಲ್ಲಿ ರಷ್ಯಾ ಆಟಗಾರ್ತಿ ಜಪಾನ್‌ನ ನಾವೊ ಹಿಬಿನೊ ಅವರನ್ನು ಎದುರಿಸಲಿದ್ದಾರೆ. ''ಗ್ರ್ಯಾನ್ ಸ್ಲ್ಯಾಮ್‌ನಲ್ಲಿ ಮೊದಲ ಪಂದ್ಯ, ಅದರಲ್ಲೂ ಇದುವರೆಗೆ ಮುಖಾಮುಖಿಯಾಗದೆ ಇರುವ ಎದುರಾಳಿಯ ವಿರುದ್ಧದ ಪಂದ್ಯ ಯಾವಾಗಲೂ ಸವಾಲಿನಿಂದ ಕೂಡಿರುತ್ತದೆ,'' ಎಂದು 28ರ ಹರೆಯದ ಶರಪೋವಾ ಅಭಿಪ್ರಾಯಪಟ್ಟಿದ್ದಾರೆ. ಮುಂಗೈ ಗಾಯದ ಕಾರಣ ಶರಪೋವಾ ಕಳೆದ ವಾರ ನಡೆದ ಬ್ರಿಸ್ಬೇನ್ ಅಂತಾರಾಷ್ಟ್ರೀಯ ಓಪನ್ ಟೂರ್ನಿಯಿಂದ ಹಿಂದೆ ಸರಿದಿದ್ದರು.

ವಿಶ್ವದ ನಂ.1 ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಕ್ ಮತ್ತು 17 ಗ್ರ್ಯಾನ್‌ಸ್ಲ್ಯಾಮ್‌ಗಳ ಸರದಾರ ಸ್ವಿಜರ್ಲೆಂಡ್‌ನ ರೋಜರ್ ಫೆಡರರ್ ಪುರುಷರ ವಿಭಾಗದಲ್ಲಿ ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಇಬ್ಬರೂ ಸೆಮಿಫೈನಲ್‌ನಲ್ಲಿ ಎದುರಾಗುವ ಸಾಧ್ಯತೆಗಳಿವೆ. ಫೆಡರರ್ ನಾಲ್ಕು ಬಾರಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರೆ, ಹಾಲಿ ಚಾಂಪಿಯನ್ ಜೊಕೊವಿಕ್ 5 ಬಾರಿ ಈ ಸಾಧನೆ ಮಾಡಿದ್ದಾರೆ.

ಇದೇ ವೇಳೆ ಪ್ರಶಸ್ತಿ ಗೆಲ್ಲುವ ಇತರ ಫೇವರಿಟ್‌ಗಳಾದ ಬ್ರಿಟನ್‌ನ ಆ್ಯಂಡಿ ಮರ‌್ರೆ, ಸ್ಪೇನ್‌ನ ರಾಫೆಲ್ ನಡಾಲ್ ಮತ್ತು ಸ್ವಿಜರ್ಲೆಂಡ್‌ನ ಸ್ಟ್ಯಾನಿಸ್ಲಾಸ್ ವಾವ್ರಿಂಕಾ ಮತ್ತೊಂದು ಗುಂಪಿನಲ್ಲಿದ್ದಾರೆ. 5ನೇ ಶ್ರೇಯಾಂಕದ ನಡಾಲ್ ಅವರಿಗೆ ಕ್ವಾರ್ಟರ್ ಫೈನಲ್‌ನಲ್ಲಿ ವಾವ್ರಿಂಕಾ ಅವರ ಸವಾಲು ಎದುರಾಗುವ ಸಾಧ್ಯತೆಗಳಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com